Sambashiva Prahasana

You might also like

Download as docx, pdf, or txt
Download as docx, pdf, or txt
You are on page 1of 73

ಸಾಂಬಶಿವ ಪ್ರಹಸನ : ನನ್ನ ಮಾತು

ನಾಟಕವೊಂದು ಒಂದು ಮುದ್ರಣ ಕಾಣುವುದೇ ಪುಣ್ಯ ಎನ್ನುವಂತಹ ಸ್ಥಿತಿಯಲ್ಲಿ ನನ್ನ ನಾಟಕಗಳು ಹಲವಾರು ಮುದ್ರಣ
ಕಂಡಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ.

ಈಗಾಗಲೇ ಎರಡು ಬಾರಿ ಮುದ್ರಣವಾಗಿರುವ ಸಾಂಬಶಿವ ಪ್ರಹಸನ ಮೂರನೇ ಮುದ್ರಣ ಕಾಣುತ್ತಿದೆ. ಈ ನಾಟಕ
ಕುರಿತು ಶ್ರೀ ಡಿ.ಆರ್. ನಾಗರಾಜ್ ಅವರು ಪತ್ರ ಬರೆದಿದ್ದರು. ಅದನ್ನು ಇಲ್ಲಿ ಮರು ಮುದ್ರಿಸಲಾಗಿದೆ. ಶ್ರೀ ಡಿ.ಆರ್.ಎನ್.
ಅವರಗೂ;

ಮುಖಪುಟ ವಿನ್ಯಾಸ ಮಾಡಿದ ಶ್ರೀ ಮಂಜು ಅವರಿಗೂ;

ಈ ನಾಟಕವನ್ನು ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್ ಅವರಿಗೂ ಮತ್ತು ಪ್ರಕಟಿಸಿದ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೂ;

ನನ್ನ ನಾಟಕಗಳನ್ನು ಓದಿ, ಮೆಚ್ಚಿದ ಪ್ರೇಕ್ಷಕರಿಗೂ, ಆಡಿದ ರಂಗ ತಂಡಗಳಿಗೂ;

ನನ್ನ ನಮನಗಳು ಸಲ್ಲುತ್ತವೆ.


ಸಾಂಬಶಿವ ಪ್ರಹಸನ : ಪಾತ್ರಗಳು
 

ಗಣೇಶ ಕಾರಭಾರಿ
ಸಾಂಬ ಮಂತ್ರಿ
ಶಿವ ಪೋಲೀಸ್
ಗಜನಿಂಬೆ ಬಿಳೀ ಆನೆ
ಗೋದಾವರಿ ಚಿಲ್ಲರೆ
ಸಾವ್ಕಾರ ಬೀರಯ್ಯ, ಧೋಬಿ, ಚಾರ, ಡಿಂಗ್‌ಡಾಂಗ್
ರಾಜ ಕತ್ತೆ, ಜನ
ಸಾಂಬಶಿವ ಪ್ರಹಸನ : ಪ್ರಸ್ತಾವನೆ
ನಿರ್ದೇಶಕ  : ನಮಸ್ಕಾರ
ನಿಮ್ಮ ಮುಂದೆ ಇವತ್ತೊಂದು ಭಾರೀ ನಗೆನಾಟಕ
ಅರ್ಥಾಥ್ ಪ್ರಹಸನ ತೋರಿಸೋರಿದ್ದೇವೆ.
ಟೇಲರಿಗೆ ಮೈ ಅಳತೆಕೊಟ್ಟು
ಶರ್ಟು ಹೊಲಿಸಿದ ಹಾಗೆ
ಕವಿಗೆ ನಮ್ಮ ನಿಮ್ಮ ಮನಸ್ಸಿನ ಅಳತೆಕೊಟ್ಟು
ಸ್ಪೆಶಲ್ಲಾಗಿ ಬರೆಸಿದ ನಾಟಕ ಇದು.
ನಿಮ್ಮ ಮನರಂಜನೆಗೆ ಬೇಕಾದ ಎಲ್ಲಾ ಮಸಾಲೆ
ಈ ನಾಟಕದಲ್ಲಿದೆ.
ಪ್ರೇಮ ಇದೆ, ಕಾಮ ಇದೆ, ಕ್ರಾಂತಿ ಇದೆ,
ರಾಜಕೀಯ ಇದೆ.
ಮಾತಿವೆ, ಹಾಡಿವೆ, ಕುಣಿತ ಇದೆ, ಸರ್ಕಸ್ಸಿದೆ,
ಕ್ಯಾಬರೆ ಕೂಡ ಇದೆ.
ಗಂಡಸರಿದ್ದಾರೆ, ಹೆಂಗಸರಿದ್ದಾರೆ, ಎರಡೂ ಅಲ್ಲದ
ಮೂರನೆಯವರೂ ಇದ್ದಾರೆ.
ಮಧ್ಯಮ ವರ್ಗದ ಜನ ಹೌಹಾರಿ ಬೀಳುವ
ಆದರೆ ಒಳಗೊಳಗೇ ಆನಂದಿಸುವ ತುಡುಗು ಸುಖಗಳೂ ಇವೆ.
ಅಶ್ಚರ್ಯದಿಂದ ನಿಮಗೆ ನೆಗಡಿ ಅದರೂ ಪರವಾ ಇಲ್ಲ
ಒಂದು ಗುಟ್ಟು ಈಗಲೇ ಹೇಳಿಬಿಟ್ಟಿರುತ್ತೇನೆ:
ಈ ನಾಟಕದ ನಾಯಕ ಒಂದು ಕತ್ತೆ!
ಕತ್ತೆ ಮಂತ್ರಿ ಆಗುತ್ತದೆ, ರಾಜ ಕತ್ತೆ ಆಗುತ್ತಾನೆ,
ಬೇವಾರ್ಸಿಗಳು ಕ್ರಾಂತಿ ಮಾಡುತ್ತಾರೆ,
ಕ್ರಾಂತಿಕಾರಿಗಳು ತಲೆ ಹಿಡಿಯುತ್ತಾರೆ,
ಗಂಡು ಹೆಣ್ಣಾಗುತ್ತದೆ, ಹೆಣ್ಣು ಕತ್ತೆ ಜೊತೆ
ಮದುವೆಯಾಗುತ್ತದೆ ಇತ್ಯಾದಿ.
ಆದರೆ,-
ಈಗೀನ ನಾವು ನಗೋದನ್ನ ಮರೆತು ಬಿಟ್ಟಿದ್ದೀವಿ.
ನಗೋದು ಅಂದರೆ ಸಾಮಾನ್ಯ ಜನರ
ಭಾರೀ ಔದಾರ್ಯದ ಕೆಲಸ ಆಗಿಬಿಟ್ಟಿದೆ.
ದಯಮಾಡಿ ತಾವು ಹಿಂದೆ ಹ್ಯಾಗೆ ನಗುತ್ತಿದ್ದಿರಿ,
ತಮ್ಮ ಪೂರ್ವಜರು ಹ್ಯಾಗೆ ನಗುತ್ತಿದ್ದರು-ಅನ್ನೋದನ್ನ
ನೆನಪು ಮಾಡಿಕೊಂಡು
ದೊಡ್ಡ ಮನಸ್ಸು ಮಾಡಿ ನಗಬೇಕು.
ಇದು
ಪರಸ್ಪರ ನೋಡಿ
ಅಂದರೆ,
ನಿಮ್ಮನ್ನೋಡಿ ನಾವು
ನಮ್ಮನ್ನೋಡಿ ನೀವು
ನಗಬೇಕಾದ ನಾಟಕ.
ಸಾಂಬಶಿವ ಪ್ರಹಸನ : ದೃಶ್ಯ – ೧
(ಊರ ಹೊರಗಿನ ಗಣೇಶ ದೇವಸ್ಥಾನ ಮತ್ತು ಅದರ ಗರ್ಭಗುಡಿ. ಪೀಠದಲ್ಲಿ ದೇವರಿಲ್ಲ, ಸಾಂಬ ಮತ್ತು ಶಿವ–ತಂದೆ,
ಮಗ–ಇದ್ದಾರೆ. ನೋಡಿದರೆ, ಇಬ್ಬರೂ ಆಗಲೇ ಸಾಕಷ್ಟು ಜಗಳಾಡಿದ್ದಾರೆಂದು ತಿಳಿಯುತ್ತದೆ. ಸಾಂಬ ಮೆಲ್ಲಗೆ ಹೆಂಡ
ತೆಗೆಯುತ್ತಾನೆ.)

ಶಿವ : ಹೆಣ್ಣು, ಹೆಂಡ ಸಿಕ್ಕರಾಯ್ತು, ಯಾರ ನೆನಪೂ ಇರೋದಿಲ್ಲ ನಿನಗೆ, ಇದು ದೇವಸ್ಥಾನ. ಇಲ್ಲಾದರೂ ಹೆಂಡ
ಬಿಡಬಾರದೆ?

ಸಾಂಬ : ದೇವರಂಥ ದೇವರಿಗೂ ಬಾಯಾರಿಕೆ ಇರುತ್ತದಯ್ಯಾ, ಮನುಷ್ಯರಿಗ್ಯಾಕೆ ಬೇಡ ಹೇಳು, ಇದು ದೇವರಿಗೂ
ಗೊತ್ತಿದೆ. ದೇವರ ಪರ ವಕೀಲಿ ಮಾಡೋದಕ್ಕೆ ಬಂದ ದೇವರ ಚೇಲಾ! “ಹೆಂಡದ ಭಂಡ” ಅಂತ ನೀನೇ ಬಿರುದು
ಕೊಟ್ಟಿದ್ದೀಯಲ್ಲ, ಆ ಬಿರುದಿಗಾದರೂ ಬೆಲೆ ಬೇಡವೇನೋ ಮಗನೇ?

ಶಿವ : ನನಗೆ ಮಗನೇ ಅನ್ನಬೇಡ ಕೋಪ ಬರುತ್ತೆ. ಅಪ್ಪ ಅಂತ ಬೇಕಾದರೆ ನೀ ಅಂದುಕೊ; ನಾ ಅನ್ನೋದಿಲ್ಲ.
ಮಗನಿಗಿಂತ ಮುಂಚೆ ತನಗೇ ಮದುವೆ ಬೇಕು ಅಂತ ಯಾವಪ್ಪನೂ ಹೇಳೋದಿಲ್ಲ.

ಸಾಂಬ : ಹಾಗೆ ನಾನೂ ಹೇಳಬಹುದು ಕಣೋ ಮಗನೇ: ‘ನಿನ್ನಮ್ಮ ಸತ್ತೋದ ಮೇಲೆ ಅಯ್ಯೋ ನನ್ನ ತಂದೆ ಒಂಟಿ ಆದ.
ಪಾಪ ಚಳಿಚಳಿ ಅಂತ ನಡಗತಾನೆ. ಆತನಿ ಗೊಂದು ಜೊತೆ ಬೇಕು’ – ಅಂತ ಒಂದು ಸಲವಾದರೂ ನಿನ್ನ ಬಾಯಿಂದ
ಮಾತು ಬಂತ? ಬಾಯಿ ತೆಗೆದಾಗೊಮ್ಮೆ ನಿನಗೇ ಮದುವೆ ಬೇಕಂತಿ. ಏನೋ ಮಹಾ ವಯಸ್ಸಾಗಿರೋದು ನಿನಗೆ?
ಮಗನೇ ನಿನ್ನ ವಯಸ್ಸಲ್ಲಿ ನಾನಿನ್ನೂ ಚಡ್ಡೀ ಹಾಕ್ತಿರಲಿಲ್ಲ ಗೊತ್ತ? (ಕುಡಿಯುವನು)

ಶಿವ : ಮುಖ್ಯ ವಿಷಯ ಹೇಳಿಬಿಡ್ತೀನಿ ಕೇಳಪ್ಪ; ನೀನು ನನ್ನ ಮದುವೆಗೆ ಅಡ್ಡಿ ಮಾಡೋದನ್ನ ನಾನು ಸಹಿಸೋದಿಲ್ಲ.

ಸಾಂಬ : ನಾನೆಲ್ಲೋ ಅಡ್ಡಿ ಮಾಡಿದೆ?

ಶಿವ : ಚಿಕನಳ್ಳಿ ಬೀಗರು ನನಗೆ ಹುಡಿಗೀನ ಕೊಡ್ತೀನಿ ಅಂತ ಮುಂದೆ ಬಂದಾಗ ಆ ಬೀಗತನ ಮುರಿದವರುಯಾರು,
ನೀನೇ ಅಲ್ಲವ?

ಸಾಂಬ : ನಾನ್ಯಾಕಯ್ಯಾ ಮುರೀಲಿ? ಮಗನಿಗೆ ಮದುವೆ ಆದರೆ ತಂದೆಗೆ ಸಂತೋಸ ಆಗಲ್ಲವೇನೋ? ನಿನಗೆ ಹೆಂಡತಿ
ಆಗೋಳು ನನಗೆ ಸೊಸೆ ಆಗಲ್ಲವೇನೋ?

ಶಿವ : ಹಾಂಗಿದ್ದರೆ ಚಿಕನಳ್ಳಿಯವರು ಇದ್ದಕ್ಕಿದ್ದ ಹಾಗೆ ಯಾಕೆ ಕೊಡೋದಿಲ್ಲ ಅಂದರು?

ಸಾಂಬ : ನಿನ್ನ ಮುಸಡಿ ನೋಡಿ ಬೇಡ ಅನ್ನಿಸಿರಬೇಕು.

ಶಿವ : ನೀನು ಒಳಗೊಳಗೇ ಅವರಿಗೇನು ಹೇಳ್ದೆ ಅಂತ ನನಗ್ಗೊತ್ತು.

ಸಾಂಬ : ಒಳಗೊಳಗೆ? ಅದೇನಯ್ಯಾ ಒಳಗೊಳಗೆ?

ಶಿವ : ಇಷ್ಟು ಬೇಗ ಮದುವೆ ಬೇಡ ಅಂತಾನೆ ಮಗ. ಬೇಕಾದರೆ ನನಗೇ ಹುಡಿಗೀನ್ನ ಕೊಡಿ ಅಂತ ನೀನು ಕೇಳಲಿಲ್ಲವ?

ಸಾಂಬ : ಹಂಗೆ ಕೇಳಿದ್ದೇನೋ ನಿಜ. ಅದರೆ ಅವರು ನಿನಗೆ ಕೊಡೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ ಮೇಲೇ ನಾ
ಕೇಳಿದ್ದು ಗೊತ್ತ? ನನಗೂ ನಿಯತ್ತಿದೆಯೋ. ನಾ ಎಂಥ ಪ್ರಾಮಾಣಿಕ ಅನ್ನೋದು ನಿನ್ನ ತಾಯಿಗ್ಗೊತ್ತಿತ್ತು. ಇವತ್ತು
ಅವಳಿದ್ದಿದ್ದರೆ ಏನ್ಹೇಳ್ತಿದ್ದಳು ಗೊತ್ತಾ?-“ಮಗಾ ನಿನ್ನ ತಂದೆ ನಿಜ ಏಳತವನೆ ನಂಬು”- ಅಂತಿದ್ದಳು.
ಶಿವ : ಈ ಜಗತ್ತಿನಲ್ಲಿ ನೀನು ಜಾಸ್ತಿ ಸುಳ್ಳು ಹೇಳಿದ್ದೇ ಅಮ್ಮನಿಗೆ. ಅಮ್ಮ ಇದ್ದಾಗಲೇ ನಿನ್ನ ಐದಾರು ಕಾರುಬಾರು ಬೆಳಕಿಗೆ
ಬಂದಿದ್ದವು.

ಸಾಂಬ : ಆ ವಯಸ್ಸಿನಲ್ಲಿ ಐದೋ ಆರೋ ಜಾಸ್ತಿಯೇನಯ್ಯಾ?

ಶಿವ : ನಿನ್ನ ಸುಳ್ಳಿನಿಂದಲೇ ಅಮ್ಮ ಸತ್ತದ್ದು.

ಸಾಂಬ : ನಾಳೆ ಮದುವೆ ಆದಮೇಲೆ ನೀನೂ ಅಷ್ಟೆ ಕಣೊ. ಹೆಂಡತಿ ಹತ್ತಿರ ನಿಜ ಹೇಳಲಿಕ್ಕಾಗುತ್ತ? ಹೆಂಗಸರಿಗೆ
ಸುಳ್ಳುಸುಳ್ಳೇ ನಿಜ ಹೇಳಬೇಕು. ಆದರೆ ನಿಜವಾದ ಸುಳ್ಳು ಹೇಳಿರಬೇಕು; ನೆನಪ್ಪಿಟ್ಟುಕೊ.

ಶಿವ : ನೀನೂ ನೆನಪ್ಪಿಟ್ಟುಕೊ: ನೀನು ನನ್ನ ಬೆನ್ನು ಹತ್ತಿ ಬರತಿರೋದು ನನಗೋಸ್ಕರ ಅಲ್ಲ ಅಂತ ನನಗ್ಗೊತ್ತು. ನನಗೆ
ಅಂತ ಕನ್ಯಾ ನೋಡೋದು, ಮಧ್ಯೆ ನೀ ಬಂದು ಹಾರಿಸಿಕೊಂಡು ಹೋಗೋದು, ತಗಳ್ಳಪ ಇವನು ಅಪ್ಪ!

ಸಾಂಬ : ಸರಿ ಕಣೋ, ನೀನಾದರೂ ದೊಡ್ಡ ಮನಸ್ಸು ಮಾಡಿ ಈ ಬಾರಿ ಅಪ್ಪ ಮದುವೆ ಆಗಲಿ, ಆಮೇಲೆ ನಾ
ಮಾಡಿಕೊಂಡರಾಯ್ತಂತ ಯಾಕನ್ನಬಾರದು ?

ಶಿವ : ಕೊನೇ ಪಕ್ಷ ಒಂದು ಮದುವೆ ಆದರೂ ಆಗಿದೆಯೋ ನಿನಗೆ?

ಸಾಂಬ : ಸತ್ಹೋದಳಲ್ಲೋ; ಇದ್ದಿದ್ದರೆ ಕೇಳತಿದ್ದಿನ?

ಶಿವ : ನನಗಿನ್ನೂ ಒಂದೂ ಮದುವೆ ಆಗಿಲ್ಲವೆ!

ಸಾಂಬ : ಆಮೇಲೆ ನಾಲಕ್ಕ ಮಾಡೋಣಯ್ಯ, ನನಗೀಗ ಅರ್ಜೆಂಟಾಗಿ ಒಂದು ಮಾಡು. ನಿನ್ನೆ ಕನಸಿನಲ್ಲಿ ನಿನ್ನಮ್ಮ
ಬಂದಿದ್ದಳು, ಗೊತ್ತ?

ಶಿವ : ಹಸೀ ಸುಳ್ಳು.

ಸಾಂಬ : ನಿಜವಾದ ನಿಜ ಕಣೋ! ಕನಸಲ್ಲಿ ಬಂದ ‘ನೋಡಿ ನೀವು ಇನ್ನೊಂದು ಮದುವೆ ಮಾಡಿಕೊಳ್ಳಲೇಬೇಕು.
ಮಾಡಿಕೊಳ್ಳದಿದ್ದರೆ ನನ್ನಾಣೆ’, ಅಂತ ನನ್ನ ಮೇಲೆ ಆಣೆ ಇಟ್ಟುಕೊಂಡಳಪ್ಪ!

ಶಿವ : ಭಲೆ! (ನಗುವನು)

ಸಾಂಬ : ನಗೆ ಬರತ್ತಾಇದೆ, ಅಲ್ಲವಾ? ಕಳ್ಳನನಮಗನೇ, ನಿನ್ನಮ್ಮ ಮತ್ತು ನಾನು ಎಷ್ಟು ಪ್ರೀತಿ ಮಾಡತಿದ್ದಿವಿ ಗೊತ್ತ?

ಶಿವ : ಬೆಳಿಗ್ಗೆದ್ದು ಮುಖ ಮುಖ ನೋಡೋದೇ ತಡ ಜಗಳ ಸುರು ಮಾಡತಿದ್ದಿರಿ.

ಸಾಂಬ : ಆಕೆ ಈಗ ಜೀವಂತ ಇದ್ದಿದ್ದರೆ ಈಗಲೂ ಜಗಳಾಡತಿದ್ವಿ ಅಂತಿಟ್ಟಕ. ಆದರೆ ಕನಸಿನಲ್ಲಿ ಸಾವಿಬ್ಬರೂ ಖಂಡಿತ
ಜಗಳಾಡಲಿಲ್ಲ ಕಣೊ. ಕೈಮೇಲೆ ಕೈ ಹಾಕಿ ಮದುವೆ ಮಾಡಿಕೊಳ್ತೀನಿ ಅಂತ ಭಾಷೆ ಕೊಟ್ಟಾಗಲೇ ಹೋದಳು. ಇಲ್ಲದಿದ್ದರೆ
ಕನಸಿನಾಗಿಂದ ಹೋಗೋದೇ ಇಲ್ಲ ಅಂತ ಹಟ ಹಿಡಿದಿದ್ದಳು, ಗೊತ್ತೇನು?

ಶಿವ : ನಿನ್ನೆ ನನ್ನ ಕನಸಿನಲ್ಲೂ ಅವಳೇ ಬಂದಿದ್ದಳಪ್ಪ, ನಿನ್ನಪ್ಪನಿಗೆ ಮದುವೆ ಮಾಡಬೇಡ, ಅಂತಂದ್ಲು. ಅಷ್ಟೇ ಅಲ್ಲ ಅವನ
ಒಂದು ಮಾತನ್ನೂ ನಂಬಬೇಡ ಅಂದ್ಲು.

ಸಾಂಬ : ಸುಳ್ಳನನ ಮಗನೇ, ಒಬ್ಬಳ ೇ ಇಬ್ಬರ ಕನಸಿನಲ್ಲಿ ಹ್ಯಾಗೋ ಬರತ್ತಾಳೆ?

ಶಿವ : ಹಾಗಿದ್ದರೆ ನಿನ್ನ ಕನಸಿನಲ್ಲಿ ಬಂದಿರಲಿಲ್ಲಾಂತ ಆಯ್ತು.


ಸಾಂಬ : ಬೋಳೀ ಮಗನೇ, ನೀ ನನ್ನ ಮಗ ಅಲ್ಲ.

ಶಿವ : ಮುಂಡೇಗಂಡ, ನೀ ನಮ್ಮಪ್ಪ ಅಲ್ಲ.

ಸಾಂಬ :  ನಾ ಮುಂಡೇಗಂಡ ಆದರೆ ನಿನ್ನಮ್ಮ ಏನೋ ಆದಳು?

ಶಿವ : ನಾ ಬೋಳೀಮಗ ಆದರೆ ನಿನ್ನ ಹೆಂಡತಿ ಏನೋ ಆದಳು?

ಸಾಂಬ : ಛೇ!

ಶಿವ : ಛೇ!
(ತುಸು ಹೊತ್ತು ಇಬ್ಬರೂ ಮಾತಿಲ್ಲದೆ ಕೂರುವರು)

ಶಿವ : ಅಪ್ಪಾ.

ಸಾಂಬ : ಮಾತ್ತಾಡಬೇಡ, ಹೇಳಿರತೀನಿ.

ಶಿವ : ಹೊರಗಡೆ ಚಳಿ ಇದೆ. ಇನ್ನೊಂಚೂರು ಹೆಂಡ ಕುಡಿಯಪ್ಪ.

ಸಾಂಬ : ಇದು ಕಣೋ ಕರುಳು ಅಂದರೆ, ಹಾಗೇ ಒಂದು ಹೆಂಡ್ತೀನೂ ಕಟ್ಟಿಕೊಳ್ಳಪ್ಪ ಅಂದಿದ್ದರೆ….?

ಶಿವ : ಒಂದು ಕೆಲಸ ಮಾಡೋಣ, ಇಬ್ಬರೂ ಒಂದೇ ದಿನ ಮದುವೆ ಮಾಡಿಕೊಂಡರೆ?

ಸಾಂಬ : ಒಂದೇ ಹುಡಿಗೀನ್ನ?

ಶಿವ : ಬೇರೆ ಬೇರೆ.

ಸಾಂಬ : ಹೆಂಗ್ಹೇಳು ಮತ್ತೆ.

ಶಿವ : ಹೆಂಗೂ ನಾನೀಗ ಒಂದು ಹುಡಿಗೀನ್ನ ನೋಡಿದ್ದಾಗಿದೆ. ಈಗ ನೀನು ನನಗೆ ಸಹಾಯ ಮಾಡು. ನೀನು
ಯಾವುದಾದರೂ ಹುಡಿಗೀನ್ನ ನೋಡಿದರೆ ಸಾಕು ಸಹಾಯ ಮಾಡತೀನಿ. ಪರಸ್ಪರ ಸಹಕಾರೀ ಸಂಘ, ಏನಂತಿ?

ಸಾಂಬ : ಸರಿ, ನಾ ಈಗ ಏನ ಮಾಡಬೇಕು ಹೇಳು ನೋಡುವಾ.

ಶಿವ : ಸೀರೆ ಉಡಬೇಕು!

ಸಾಂಬ : ಅಂದರೆ?

ಶಿವ : ಆ ಮನೆಯಲ್ಲಿ ಒಂದು ಹೆಣ್ಣಾಳಿನ ಕೆಲಸ ಇದೆ ಅಂತಲ್ಲವ ಹೇಳಿದ್ದು?

ಸಾಂಬ : ಹೌದು

ಶಿವ : ಅಷ್ಟೆ. ನಿನ್ನ ಮಗನಿಗೆ ಸಹಾಯ ಮಾಡಬೇಕು ಅಂದರೆ ಸೀರೆ ಉಟ್ಟುಕೊಂಡು ಅವರ ಮನೇಲಿ ಕೆಲಸಕ್ಕೆ ಸೇರಿಕೋ.
ನಿನ್ನ ನೋಡೋದಕ್ಕೇಂತ ನಾ ಒಂದು ಅನುಕೂಲ ಮಾಡಿಕೊಳ್ತೀನಿ. ಮುಂದೆ ನಿನಗೇನಾದರೂ ಒಂದು ಹೆಂಗಸು ಸಿಕ್ಕರೆ
ನಿನಗೂ ಸಹಾಯ ಮಾಡತ್ತೀನಿ.
ಸಾಂಬ : ಭಲೇ ಮಗನೇ! ನಾ ಇದಕ್ಕೊಪ್ಪದಿದ್ದರೆ.

ಶಿವ : ನಾ ಸಾಯತೀನಿ.

ಸಾಂಬ : ಲೇ ಶಿವ, ನೀ ಸಾಯೋದೇ ಮೇಲು ಕಣೊ.

ಶಿವ : ಛೇ! ಹೋಗಿಹೋಗಿ ನಿನ್ನ ಮುಂದೆ ಹೇಳಿಕೊಂಡೆ  ನೋಡು ನನ್ನ ದುರ್ದೈವಾನ್ನ. ದಯವಿಟ್ಟು
ಮಾತಾಡೋದಾದರೂ ನಿಲ್ಲಸ್ತೀಯಾ?

ಸಾಂಬ : ಆಯ್ತಪ್ಪ, ನಾನು ಇನ್ನುಮೇಲೆ ಮಾತಾಡೋದಿಲ್ಲ. ಮಾತಾಡಿದ್ದರೆ ಒಂದು ವಿಷಯ ಹೇಳೋಣಾಂತಿದ್ದೆ: ದಡ್ಡನನ
ಮಗನೇ ನಿನಗಿಂತ ಮುಂಚೆ ಹುಟ್ಟಿದೋನು ನಾನು; ನನಗೇ ಮೊದಲು ಮದುವೆ ಆದರೆ ಚಂದ. ನಾ ಮದುವೆ ಆದರೆ
ನಿನಗೊಬ್ಬ ಅಮ್ಮ ಸಿಗತಾಳೆ. ಹೊತ್ತು ಹೊತ್ತಿಗೆ ಊಟ ತಿಂಡಿ ಕಾಫಿ ಸಿಗುತ್ತೆ. ನಿನ್ನ ಹೆಂಡತೀನ ಬೈಲಿಕ್ಕೆ ಒಬ್ಬ ಅತ್ತೆ
ಸಿಗತಾಳೆ…. ಇತ್ಯಾದಿ.

ಶಿವ : ಛೇ ಬಾಯ್ಮುಚ್ಚೋದು ಅಷ್ಟೊಂದು ಕಷ್ಟವ? ನನಗೆ…. ನನಗೆ ಕೋಪ ಬರುತ್ತೆ. (ತುಟಿ ಕಚ್ಚುವನು)

ಸಾಂಬ : ಹಂಗೆಲ್ಲಾ ಹಲ್ಲು ತೋರಿಸಬೇಡ; ನಾ ಹಳ್ಳಿನ ಡಾಕ್ಟರಲ್ಲ. ನಾ ಹೇಳೋದೇನಪ್ಪ ಅಂತಂದರೆ ನಾ ಇನ್ನು ಮೇಲೆ
ಮಾತಾಡೋದಿಲ್ಲ ಅಷ್ಟೆ. ಮಾತಾಡಿದ್ದರೆ ಹೇಳೋಣಾಂತಿದ್ದೆ:

ಎಂತು ಸೇರುವೆ ಸತಿಯಾಳಾನೆಂತು ಸೇರುವೆ


ಕಂತು ತಾಪವ ಸೈರಿಪೆನೆಂತು
ಚಿಂತೆಯೇರಿತು ಮನಕೆ ದಿಗ್ಭ್ರಾಂತಿಯಾಗಿ ನಾ
ನೆಂತು ಸೇರುವೆ !!

ಲೇ ಶಿವ, ಇಂಥಾ ಹಾಡು ಬಿಳಿ ನಾಲ್ಕರಲ್ಲಿ ಹಾಡಬೇಕು ಕಣೋ, ಅಂದರೇ ಆಟ ರಂಗೇರೋದು.

ಶಿವ : ಸರಿ ಹಾಗಾದರೆ; ನನಗ್ಯಾರೂ ದಿಕ್ಕಿಲ್ಲ ಅಂತಾಯ್ತು, ಎರಡು ದಿನದಿಂದ ಅನ್ನ ನೀರು ಮುಟ್ಟಿಲ್ಲ. ಯಾಕಂತ
ಕೇಳೋರಿಲ್ಲ. ಉಸಿರಾಡ್ತ ಇಲ್ಲ, ಬರೀ ನಿಟ್ಟುಸಿರು ಬಿಡ್ತಾ ಇದ್ದೀನಿ, – ಯಾಕಂತ ಕೇಳೋರಿಲ್ಲ. ನಿದ್ದೆ ಇಲ್ಲದೆ ಒದ್ದಾಡತ
ಇದ್ದೀನಿ, – ಯಾಕಂತ ಕೇಳೋರಿಲ್ಲ. ಹಾಗಿದ್ದರೆ ಯಾಕಾಗಿ ಜೀವಂತ ಇರಬೇಕು? ಒಳಕ್ಹೋಗಿ ನೇಣು ಹಾಕ್ಕೊಳ್ತೀನಿ, ನೀ
ಆರಾಮಾಗಿರು.

ಸಾಂಬ : ಆಯ್ತು.

ಶಿವ : ಆಮೇಲೆ ಕೂಗಿದರೂ ನಾನು ಬಾಗಿಲು ತೆಗೆಯೋದಿಲ್ಲ.

ಸಾಂಬ : ಹೌದು, ನೇಣ್ಹಾಕ್ಕೊಂಡಿರತಿ, ಬಾಗಿಲು ತೆಗೆಯೋದು ಹೆಂಗೆ ಸಾಧ್ಯ?

ಶಿವ : ಆಮೇಲೆ ಪಶ್ಚಾತ್ತಾಪ ಪಡುತ್ತೀ ನೀನು.

ಸಾಂಬ : ಈಗಲೂ ಪಡತಾ ಇದೀನಿ.

ಶಿವ : ಛೇ, ಈ ಹಾಳು ದೇವಸ್ಥಾನದಲ್ಲಿ ಸಂಕಟ ಹೇಳಿಕೊಳ್ಳೋಣ ಅಂದರೆ ಒಂದು ದೇವರೂ ಇಲ್ಲವೆ!
(ಗರ್ಭಗುಡಿ ಹೊಕ್ಕು ಬಾಗಿಲಿಕ್ಕಿಕೊಳ್ಳುವನು)

ಸಾಂಬ : ಬಲ್ ನನ್ನ ಮಗ! ಬಲ್ ನನ್ಮಗ! ಸಾಯತಾನಂತೆ. ಅಧೆಂಗೆ ಸಾಯತಾನೋ ನಾನೂ ನೋಡೇ ಬಿಡಿತೀನಿ.
ಅಲ್ಲಾ ಕನ್ಯಾ ಹುಡಿಕ್ಕೊಂಡು ಇಲ್ಲಿಗೆ ಬಂದರೆ, ಇದೋ ರಾಜಧಾನಿ. ಒಬ್ಬರ ಗುರುತಿಲ್ಲ, ಪರಿಚಯ ಇಲ್ಲ. ಆಯ್ತು ವಾಪಸ್
ಹೋಗೋವಾ ಅಂದರೆ ಅಷ್ಟರಲ್ಲೇ ಈ ನನ್ನ ಮಗ ಒಂದು ಹುಡಿಗೀನ್ನೋಡಿ ರೋದೇ! ಯಾವುದೋ ಒಂದು ಗಲ್ಲಿ;
ಗಲ್ಲೀಲೊಂದು ಮನೆ. ಮಹಡೀ ಮೇಲೆ ಒಬ್ಬ ಚೆಲುವೆ, ತಲೆ ಬಾಚತಾ ನಿಂತಿದ್ದರೆ ಅವನು ತೆರೆದ ಬಾಯಿ ತೆರೆದ ಹಾಗೇ
ನಿಂತುಬಿಡೋದೆ? ಅವಳೂ ಕಿಲಾಡಿ, ನೋಡಿ ನಕ್ಕಳು. ಯಾರನ್ನೋಡಿ ನಕ್ಕಳು ಅಂತ ಯೋಚನೆ ಮಾಡಬ್ಯಾಡವ?
ಇವನೂ ನಕ್ಕನೇ! ನಾನೂ ನಕ್ಕೆ, ಅದು ಬೇರೆ ಮಾತು. ತಗಳಪ್ಪ ಆಗಿನಿಂದ ಇವನ ಪ್ರೇಮ ಜ್ವರ ಸುರು. ನಿಟ್ಟುಸಿರು
ಬಿಡೋದೇನು, ಕನಸು ಕಾಣೋದೇನು, ತಂತಾನೇ ಮಾತಾಡಿ ಕೊಳ್ಳೋದೇನು, ಪದಾ ಹಾಡೋದೇನು! ಅಬಬ! ಏನೊ
ಮಗನ ನೆಪದಲ್ಲಿ ಸಿಕ್ಕರೆ ನಾನೂ ಒಂದು ಹೆಣ್ಣು ಹಾರಿಸ್ಕೊಂಡು ಹೋಗೋವಾ; ಅಂದರೆ ಗಿಟ್ಟತಾನೇ ಇಲ್ಲ ಹಾಳಾದ್ದು.
ಹೋಗಲಿ ಇರೋನೊಬ್ಬ ಮಗ. ನನಗೆ ಅವ ದಿಕ್ಕು, ಅವನಿಗೆ ನಾ ದಿಕ್ಕು- ಅಂತ ನನ್ನ ನಾ ಸಮಾಧಾನ ಮಾಡಿಕೊಂಡರೆ,
ನನ್ನ ಮಗ ಮೊದಲು ತನಗೇ ಮದುವೆ ಆಗಲಿ ಅಂತಾನೆ! ಹಂಗೂ ಮಾಡಿ ನೋಡೋವಾ; ಮೊದಲಾದರೆ ಕಾಲ
ಚೆನ್ನಾಗಿತ್ತು. ಮಗನೇ ಬೀಸ್ಮಾ ಮದುವೆ ಮಾಡಿಕೊಳ್ಳೋ ಅಂದರೆ ನನಗೆ ಬ್ಯಾಡಪ್ಪ ನೀನೇ ಮಾಡಿಕೊ ಅಂದ ಅಪ್ಪನಿಗೆ!
ಈಗೆಲ್ಲಿದ್ದಾರೆ ಅಂಥಾ ಮಕ್ಕಳು?
(ಮಲಗುವನು. ಗಣೇಶ ಬರುವನು. ಅವನ ಜೊತೆಗೆ ಒಂದು ಕತ್ತೆ ಬರುತ್ತದೆ)

ಗಣೇಶ : ಭಕ್ತರಿಲ್ಲ, ಪೂಜೆ ಇಲ್ಲ. ಅಮ್ಮ ಅಪ್ಪನ ಹತ್ತಿರ ಹೋಗಿ ಆರಾಮಾಗಿ ಇರೋಣ ಅಂದರೆ ಈ ಹಾಳು ಕತ್ತೆ ಸಹವಾಸ
ತಪ್ಪುತ್ತಿಲ್ಲ. ಯಾವಾಗಲೂ ಎಲ್ಲಿ ಹೋದರೂ ಹಿಂದಿನಿಂದಲೇ ಬರುತ್ತೆ. ಒಂದು ಕ್ಷಣ ನಾ ಮರೆಯಾಗಲಿ, ವಾ…. ಅಂತ
ಒದರತ್ತೆ. ಯಾರಿಗಾದರೂ ಕೊಡೋಣ ಅಂದರೆ ತಗೊಳ್ಳುವಂಥ ಉದಾರಿಗಳು ಯಾರಿದ್ದಾರೆ? ಆ ನಮ್ಮಪ್ಪ ಶಿವನೇ
ಕಾಪಾಡಬೇಕು.
(ಗರ್ಭಗುಡಿಯ ಬಾಗಿಲು ಹಾಕಿರೋದನ್ನ ನೋಡಿ)
ಅರೆ ಅಲ್ಲಿಗೂ ಯಾರೋ ಬಂದ್ಹಾಗಿದೆ! (ಬಾಗಿಲು ತಟ್ಟುತ್ತ)
ರೀ ಯಾರ್ರೀ‍ಅದು? ಬಾಗಿಲು ತಗೀರಿ.
(ಸಾಂಬ ಎದ್ದು ಗಣೇಶನನ್ನು ನೋಡಿ)

ಸಾಂಬ : ನಮಸ್ಕಾರ.

ಗಣೇಶ : ಯಾರಯ್ಯಾ ಒಳಗಿರೋದು?

ಸಾಂಬ : ಸ್ವಾಮೀ ಮೇಕಪ್ಪು ಪಸಂದಾಗಿದೆ.

ಗಣೇಶ : ಮೇಕಪ್ಪು? ಯೋ ಯಾವೋನಯ್ಯಾ ನೀನು?

ಸಾಂಬ : ನೀನು ತಾನು ಅಂತೀರಲ್ಲರೀ, ಮರ್ಯಾದೆ ಕೊಟ್ಟು ಮಾತಾಡಿ, ನಾನು ಮೊದಲೇ ಅಯೋಗ್ಯ, ಕೊಪ
ಬಂದರಂತೂ….

ಗಣೇಶ : (ತನ್ನಲ್ಲಿ) ಇದೊಳ್ಳೇದಾಯ್ತೇ! ನನ್ನ ಕಂಡ ಕೂಡ್ಲೆ ಜನ ಓಡಿ ಬಂದು ಕಾಲು ಹಿಡಿದು ‘ಅದು ಕೊಡು ಇದು
ಕೊಡೂಂತ’ ವರ ಕೇಳ್ತಾರೆ. ಇವನ್ನೋಡಿದರೆ ನನ್ನನ್ನೇ ಗದರತಾನೆ? ಇರಲಿ. (ಪ್ರಕಾಶ) ಅಯ್ಯಾ ಸಜ್ಜನ….

ಸಾಂಬ : ಛೇ ಛೇ ಅಷ್ಟು ದೊಡ್ಡ ಮಾತು ಬೇಡ ಸ್ವಾಮಿ –

ಗಣೇಶ : ಅದ್ಯಾಕಪ್ಪ ಸಜ್ಜನ ಅಂದರೆ ನಾಚಿಕೊಳ್ತಿ?

ಸಾಂಬ : ಯಾಕೆಂದರೆ ನನ್ನ ಹೆಸರು ಸಜ್ಜನ ಅಲ್ಲ, ಸಾಂಬ ಅಂತ.

ಗಣೇಶ : ಹಾಗೋ? ಅಯ್ಯಾ ಸಾಂಬ, ಒಳಗಡೆ ಯಾರಿದ್ದಾರೆ?

ಸಾಂಬ : ನನ್ನ ಮಗ ಶಿವ ಇದ್ದಾನೆ. ಆರೋಗ್ಯವಂತನೆ. ನಿಮ್ಮ ನಾಟಕದಲ್ಲಿ ಅದೇನೋ ಪ್ರೇಮ ಪ್ರೀತಿ ಅಂತೀರಲ್ಲ. ಆ
ರೋಗ ತಟ್ಟಿದೆ ಅಷ್ಟೆ. ಹುಡುಗಿ ಸಿಕ್ಕಲಿಲ್ಲ, ನೇಣು ಹಾಕ್ಕೊಳ್ಳಬೇಕು ಅಂತ ಒಳಗೆ ಹೋಗಿದ್ದಾನೆ.
ಗಣೇಶ : ಯೋ, ಸಾಯೋದಕ್ಕೆ ನಿಮಗಿದೊಂದೇ ಜಾಗ ಇತ್ತೇನ್ರಯ್ಯಾ? ಕರೀಯಪ್ಪಾ ಅವನ್ನ ಹೊರಕ್ಕೆ.

ಸಾಂಬ : ಕರೀತೀನಿ, ಮೇಕಪ್ ತಗೀರಿ ಸ್ವಾಮಿ ಅಂದರೆ.

ಗಣೇಶ : ನೋಡಪ್ಪ ನಾನು ಮೇಕಪ್ಪನಲ್ಲಿರೋ ಗಣೇಶ ಅಲ್ಲ, ನಿಜವಾದ ಗಣೇಶ. ಇದು ನನ್ನ ದೇವಸ್ಥಾನ. ಪೀಠದಲ್ಲಿ
ಕೂತು ಕೂತು ಬೋರಾಯ್ತು. ತುಸು ಅಡ್ಡಾಡಿ ಬರೋಣ ಅಂತ ಹೋಗಿದ್ದೆ. ಈಗ ಬಾಗಿಲು ತೆಗಿಸ್ತೀಯಪ್ಪ?

ಸಾಂಬ : (ತನ್ನಲ್ಲಿ) ಓಹೊ, ಇವನು ಕಂಪನಿ ನಾಟಕದೋನಲ್ಲ, ಹುಚ್ಚಾಸ್ಪತ್ರೆ ಗಿರಾಕಿ! (ಪ್ರಕಾಶ) ಸ್ವಾಮೀ, ತಾವು
ಪಾರ್ವತೀ ಪುತ್ರ ಗಣೇಶ ಅಲ್ಲವ? ಪ್ರಾರ್ಥನೆ ಮಾಡತೀನಿ ಒಂದು ವರ ಕೊಡತೀರಾ?

ಗಣೇಶ : ಪ್ರಾರ್ಥನೆ ಗೀರ್ತನೆ ಎಲ್ಲಾಯಾಕೆ?

ಸಾಂಬ : ಛೇ ಛೇ, ಇಷ್ಟಕ್ಕೂ ಸಂಪ್ರದಾಯ ಯಾಕೆ ಬಿಡೋದು? ಹೋದರೆ ಒಂದು ಪದ ತಾನೆ? ತಗೊಳ್ಳಿ.

ಶ್ರೀಗಣರಾಯಾ ಪಾರ್ವತಿ ತನಯಾ


ಶರಣು ಶರಣು ನಿನಗೆ |
ಸದಾಶಿವನ ಮಗ ಕಂಟಕ ಹರಣಗೆ
ಕೈಯ ಮುಗಿವೆ ನಿನಗೆ ||
ದೈವದ ಎದುರಿಗೆ ಯಾರಿಗೆ ಯಾರೋ
ನೀನೆ ದೈವ ನಮಗೆ |
ಎದ್ದು ಬಿದ್ದಲ್ಲಿ ಕೈಗಳ ಚಾಚುತ
ಕಾಯಬೇಕೊ ನಮಗೆ ||
ಬುದ್ಧಿ ಕೊಡೊ ನಮಗೆ ಸುಣ್ಣ ಬೆಣ್ಣೆಯ
ಗುರುತು ತಿಳಿಯುವಷ್ಟು |
ಕತ್ತೆಯ ಬಾಲ ತಲೆಯ ನಡುವಿನ
ಫರಕು ತಿಳಿಯೊವಷ್ಟು ||

ಸಾಂಬ : ಆಯ್ತಲ್ಲ. ಈವಾಗ ವರ ಕೊಡಿ ಸ್ವಾಮಿ

ಗಣೇಶ : ಕೊಡೋದಕ್ಕೆ ನನ್ನ ಹತ್ತಿರ ಏನೂ ಇಲ್ಲವಲ್ಲ, ಪಾಪರಾಗೀನಿ. ಹಾಳು ದೇವಸ್ಥಾನದಲ್ಲಿರೋ ದೇವರು ಏನು
ಕೊಟ್ಟಾನು?

ಸಾಂಬ : ಹಾಡೋತನಕ ಸುಮ್ಮನೇ ಇದ್ದು ಆಮೇಲೆ ಇಲ್ಲಾ ಅಂದರೆ? ಹೋಗಲಿ ಒಂದು ಟ್ರಿಕ್ಕಾದರೂ ಮಾಡಿ ತೋರಿಸಿ.

ಗಣೇಶ : ಏನು? ಟ್ರಿಕ್ಕೆ? ಏನು ಮಾಡಲಿ?

ಸಾಂಬ : (ತನ್ನಲ್ಲಿ) ನಾನೀಗ ಹೆಣ್ಣಾಳಾಗಬೇಕು ಅಂತಲ್ಲವ ಮಗ ಹೇಳಿದ್ದು? (ಪ್ರಕಾಶ) ಸ್ವಾಮೀ ನನ್ನನ್ನು ಹೆಂಗಸು
ಮಾಡಿ.

ಗಣೇಶ : ಏನು. ಹೆಂಗಸೆ?

ಸಾಂಬ : ಹೂ. ನೀವು ದೇವರಲ್ಲವ? ಮಾಡಿ ನೋಡೋವಾ.

ಗಣೇಶ : ಖಾಯಂ ಹೆಂಗಸಾಗಬೇಕ? ಟೆಂಪರರಿಯ?

ಸಾಂಬ : ಅಧೆಂಗೋ ಮಾಡಿ ಗುರು ನೋಡೋವಾ ಅಂದರೆ….


ಗಣೇಶ : ಸರಿ, ನೋಡಪ, ಈ ಮುತ್ತಿದೆಯಲ್ಲ, ಇದನ್ನ ಬಾಯಲ್ಲಿಟ್ಟುಕೊ (ಕೊಡುವನು. ಸಾಂಬ ಅದನ್ನು
ಬಾಯಲ್ಲಿಟ್ಟುಕೋಬೇಕು ಅಂದಾಗ) ಇಲ್ಲಿ ಬೇಡ ಅಲ್ಲಿ ಮರೆಯಿದೆಯಲ್ಲ, ಅಲ್ಲಿಗೆ ಹೋಗಿ ಬಾಯಲ್ಲಿಟ್ಟುಕೊ.

(ಸಾಂಬ ಹೋಗವನು. ತಕ್ಷಣ ಹೆಂಗಸಾಗಿ ಓಡಿ ಬರುವನು.)

ಸಾಂಬ : ಅಯ್ಯೋ ದೇವರೆ ತಪ್ಪಾಯ್ತು. ನೀವು ನಿಜವಾದ ಗಣೇಶ ಅಂತ ತಿಳೀಲಿಲ್ಲ. ಅಡ್ಡಬಿದ್ದೆ ತಂದೇ. ನನ್ನನ್ನ ತಿರುಗಾ
ಗಂಡಸು ಮಾಡಿ ಪ್ಲೀಸ್. ಈಗ ನಿಜವಾಗಿ ಪ್ರಾರ್ಥನೆ ಮಾಡತೀನಿ.

ಗಣೇಶ ಕಾಯೊ ತಂದೆ


ಈ ರೂಪ ತಾಳಲಾರೆ
ಸಾಧ್ಯವಾದರೀಗಲೆ ನನ್ನ ಗಂಡಾಗಿಸೋ, ತಂದೇ

ಗಣೇಶ : ಹಾಗಿದ್ದರೆ ಬಾಯಲ್ಲಿದೆಯಲ್ಲ, ಆ ಮುತ್ತು ಹೊರಕ್ಕೆ ತೆಗೆ.


(ಹಾಗೇ ಮಾಡುವನು ಈಗ ಸಂತೋಷದಿಂದ ಮುತ್ತು ಹಿಂದಿರುಗಿಸಿ)

ಸಾಂಬ : ಸಧ್ಯ! ಥ್ಯಾಂಕ್ಸ್ ದೇವರೇ!

ಗಣೇಶ : ಈಗ ಬಾಗಿಲು ತೆಗಿಸ್ತೀಯಪ?

ಸಾಂಬ : ಅರೆ ಮರೆತೇ ಬಿಟ್ಟಿದ್ದೆ! (ಓಡಿ ಹೋಗಿ ಬಾಗಿಲು ತಟ್ಟುತ್ತ) ಏ ಶಿವಾ ಬಾಗಿಲು ತಗೀಯೊ, ಸೊಥಾ ಗಣೇಶ
ದೇವರು ಬಂದಿದಾರೆ ತಗಿಯೊ!

ಶಿವ : ಯಾರು, ದೇವರ? ನನಗವನ ಪರಿಚಯ ಇಲ್ಲ

ಸಾಂಬ : ನಿಜವಾಗ್ಲೂ ನಿಜವಾದ ದೇವರು ಕಣೊ.

ಶಿವ : ದೇವರಾದರೆ ವರ ಕೊಡಲಿ.

ಸಾಂಬ : ಅದೇ ಮತ್ತೆ, ಬಾಗಿಲು ತೆಗೆದು ವರ ಕೇಳಿಕೊ.

ಶಿವ : ಅದೆಲ್ಲಾ ಆಗಕಿಲ್ಲ, ವರ ಕೊಟ್ಟರೇನೇ ಬಾಗಿಲು ತೆಗಿಯೋದು.

ಗಣೇಶ : ಒಳ್ಳೇ ಗಿರಾಕಿ ಗಂಟು ಬಿದ್ದನೇ! ಯೋ ಯಾವೋನಯ್ಯ ನೀನು? ಹೊರಕ್ಕೆ ಬರತ್ತೀಯೋ, ಪೊಲೀಸರನ್ನ
ಕರಕೊಂಬಾ ಅಂತೀಯೊ?

ಸಾಂಬ : ಬಡಭಕ್ತನ ಮ್ಯಾಲ್ಯಾಕೆ ಕೋಪ ದೇವಾ? ಒಂದು ವರ ತೆಗೆದು ಬಿಸಾಕಿ ಬಿಡಬಾರದೆ?

ಗಣೇಶ : ನನ್ನ ಹತ್ತಿರ ನಿಜವಾಗ್ಲೂ ಏನೂ ಇಲ್ಲ ಕಣಪ್ಪ. ಬೇಕಾದರೆ ಆಶೀರ್ವಾದ ಮಾಡಲಾ?

ಸಾಂಬ : ಲೇ ಶಿವಾ, ಆಶೀರ್ವಾದ ಮಾಡತಾರಂತೆ ಬಾಗಿಲು ತೆಗಿಯೊ.

ಶಿವ : ಬರಿಗೈಲಿ ಆಶೀರ್ವಾದ ಬೇಕಾದರೆ ನಾನೂ ಮಾಡತೀನಿ. ವರ ಕೊಟ್ಟರೇನೇ ಬಾಗಿಲು ತೆಗೆಯೋದು.

ಗಣೇಶ : ಇದೊಳ್ಳೇದಾಯ್ತೆ! ನೋಡಪ ನನ್ನ ಹತ್ತಿರ ಇದೊಂದು ಕತ್ತೆ ಇದೆ. ಕೊಡಲ?

ಶಿವ : ಅದನ್ನ ತಗೊಂಡೇನು ಕತ್ತೆ ಕಾಯೋದ?


ಗಣೇಶ : ಹಾ ಅದು ಸಾಮಾನ್ಯ ಕತ್ತೆ ಅಂತ ತಿಳೀಬೇಡ. ಡಿಂಗ್‌ಡಾಂಗಂತ ಅದರ ಹೆಸರು. ಅದು ಹುಟ್ಟಿದ್ದು
ಹ್ಯಾಗಂತೀಯಾ? ಒಬ್ಬ ಕಲಾವಿದ ಇದ್ದ. ಇಲ್ಲೇ ಈ ದೇವಸ್ಥಾನದಲ್ಲೇ ಇರುತ್ತಿದ್ದ. ನನಗೂ ಒಬ್ಬನೇ ಪೀಠದ ಮೇಲೆ ಕೂತು
ಕೂತು ಬೇಜಾರಾಗಿತ್ತು ನೋಡು; ಇರಲಿ ಅಂದುಕೊಂಡು ದೋಸ್ತಿ ಬೆಳೆಸಿದೆ. ಅವನೆಂಥಾ ಕಲಾವಿದ ಅಂದರೆ ನೀನು
ಯಾರದೇ ಕೂದಲು ಕೊಡು. ಆ ಕೂದಲು ನೋಡಿ ಆ ಮನುಷ್ಯನ ಚಿತ್ರ ಬರೀತೇನೆ ಅಂತ ಜಂಬ ಕೊಚ್ಚುತ್ತಿದ್ದ. ಅವನ
ಕಲೆಯನ್ನು ಪರೀಕ್ಷೆ ಮಾಡೇ ಬಿಡೋಣ ಅಂತ ಒಂದುಸಲ ಈ ಊರಿನ ರಾಜನ ಕೂದಲು ಹೊರಗೆ ಬಿದ್ದಿತ್ತು. ತಗೊಂಡು
ಈ ಕೂದಲಿನವನ ಚಿತ್ರ ಬರಿ ನೋಡೋಣ ಅಂದೆ. ಬರೆದ. ನೋಡಿದರೆ ಕತ್ತೇಚಿತ್ರ! ಇಬ್ಬರಿಗೂ ಭಾರೀ ನಗೆ ಬಂತು.
ನಗತ ನಗತ ಆ ಚಿತ್ರಕ್ಕೇ ಜೀವ ತುಂಬಿದೆ. ಅಗಾ ಅಲ್ಲಿದೆಯಲ್ಲ – ಅದೇ ಕತ್ತೆ!

ಸಾಂಬ : ಪರವಾ ಇಲ್ಲವೆ?

ಗಣೇಶ : ಹೇಳಿದ ಆಟ ಆಡತ್ತೆ. ಬೇಕಾದರೆ ಅದನ್ನಿಟ್ಟುಕೊಂಡು ಒಂದು ಸರ್ಕಸ್ ಕಂಪನಿ ಮಾಡಬಹುದು. ಅಷ್ಟೇ ಅಲ್ಲ ಈ
ಕತ್ತೆಗೆ ರಾಜಯೋಗ ಇದೆಯಪ್ಪಾ!

ಸಾಂಬ : ಲೇ ಶಿವಾ, ಅದೇನೋ ಕತ್ತೆ ಕೊಡತಾರಂತೆ ಬಾಗಿಲು ತಗಿಯೊ. (ಶಿವ ಬಾಗಿಲು ತೆಗೆದು ಗಣೇಶನನ್ನು ನೋಡಿ
ಭಯ ಭಕ್ತಿಯಿಂದ ಕಾಲು ಹಿಡಿದುಕೊಳ್ಳಲು ಓಡಿಬರುವನು. ಗಣೇಶ ಅಷ್ಟೇ ರಭಸದಿಂದ ತಪ್ಪಿಸಿಕೊಂಡು ಓಡಿಹೋಗಿ
ಬಾಗಿಲಿಕ್ಕಿ ಕೊಳ್ಳುವನು)

ಗಣೇಶ : (ಬಾಗಿಲು ಕಿಂಡಿಯಿಂದ) ನೋಡಯ್ಯಾ, ನನ್ನ ಹತ್ತಿರ ಇರೋದು ಅದೊಂದು ಕತ್ತೆ. ಅದನ್ನೇ ನಿನಗೆ ವರವಾಗಿ
ಕೊಟ್ಟಿದ್ದೇನೆ. ತಗೋ ಹೋಗು. (ಬಾಗಿಲಿಕ್ಕುವನು)

ಶಿವ : ಒಳ್ಳೇ ದೇವರು, ಆಶೀರ್ವಾದ ಮಾಡತೇನಂದಿರಿ?

ಗಣೇಶ : (ಬಾಗಿಲು ಅರ್ಧ ತೆಗೆದು) ಅದನ್ನೂ ಮಾಡಿದ್ದೇನೆ, ತೊಲಗರಯ್ಯಾ.

ಶಿವ : ಸ್ವಾಮೀ ಏನಂತ ಆಶೀರ್ವಾದ ಮಾಡಿದಿರಿ?

ಗಣೇಶ : ಏನಾಗಬೇಕು?

ಶಿವ : ನಾನು ಬಯಸಿದ ಹುಡುಗಿ ನನಗೆ ಅಂದರೆ ನಮ್ಮಪ್ಪನಿಗಲ್ಲ-ನನಗೇ ಸಿಕ್ಕಬೇಕು.

ಗಣೇಶ : ಆ ಕತ್ತೆಯಿಂದಾಗಿ ಆ ಹುಡುಗೀನೂ ಸಿಕ್ತಾಳೆ ಹೋಗಯ್ಯಾ.

ಸಾಂಬ : ಸ್ವಾಮಿ, ಆ ಮುತ್ತು ಕೊಟ್ಟಿರತೀರಾ? ಬ್ರಹ್ಮಾಚಾರಿಗಳು ನಿಮ್ಮತ್ರ ಯಾಕೆ ಅಂತ.

ಗಣೇಶ : ಹೇಳಲಿಲ್ಲವ, ಅದು ನಂದಲ್ಲ ನಮ್ಮಪ್ಪಂದು.

ಸಾಂಬ : ಒಂದೆರಡು ದಿವಸ ಅಷ್ಟೆ. ಆಮೇಲೆ ವಾಪಸ್ ಕೊಡತೀನಿ.

ಗಣೇಶ : ಮಾತಿಗೆ ತಪ್ಪಬಾರದು.

ಸಾಂಬ : ಉಂಟೇ ಸ್ವಾಮಿ, ದೇವರಿಗೇ ಮೋಸ ಮಡಲಿಕ್ಕಾಗತ್ತ?

ಗಣೇಶ : ನೀವು ದೇವರಿಗೇ ಜಾಸ್ತಿ ಮೋಸ ಮಾಡೋದು. ಇರಲಿ ತಗೊ, ನಾ ಕೇಳಿದಾಗ ವಾಪಸ್ ಕೊಡು ಅಷ್ಟೆ.
(ಕೊಟ್ಟು ಬಾಗಿಲಕ್ಕಿಕೊಳ್ಳಬೇಕೆಂದಾಗ)
ಸಾಂಬ : ಇರಿ ಇರಿ. ಇನ್ನು ಮೇಲೆ ಈ ನಮ್ಮ ಕತ್ತೇ ಆಟ ನಿರ್ವಿಘ್ನವಾಗಿ, ಬೇಷಾಗಿ ನಡೀಲಿ ಅಂತ ಇನ್ನೊಂದು
ಆಶೀರ್ವಾದ ಮಾಡಿಬಿಡಿ ಸ್ವಾಮಿ.

ಗಣೇಶ : ತಥಾಸ್ತು.
ಸಾಂಬಶಿವ ಪ್ರಹಸನ : ದೃಶ್ಯ – ೨
(ರಾಜ ಮತ್ತು ಪೊಲೀಸ್ ಆಫೀಸರ್)

ರಾಜ : ಪೋಲಿಸ್ ಬಂದೋಬಸ್ತು ಸರಿಯಾಗಿದೆಯ?

ಪೊಲೀಸ್ : ಎಲ್ಲ ಸರಿಯಾಗಿದೆ ಪ್ರಭೂ.

ರಾಜ : ಕ್ರಾಂತಿ ಗೀಂತಿ ವಗೈರೆ….?

ಪೊಲೀಸ್ : ಏನೂ ಇಲ್ಲ ಪ್ರಭು. ಎಲ್ಲಾ ಜೇಲಲ್ಲಿ ತುರುಕಿ ಬಿಟ್ಟಿದೀವಿ.

ರಾಜ : ಕಾರಭಾರೀನ್ನ ಕಳಿಸು. ಅಂತರಂಗ ಮಾತಡ್ತೀವಿ. ನೀನು ಹೊರಗೆ ನಿಂತಿರು.

ಪೊಲೀಸ್ : ಆಪ್ಪಣೆ ಪ್ರಭೂ (ಹೋಗುವನು, ಕಾರಭಾರಿ ಬರುವನು)

ರಾಜ : ಏ ಕಾರಭಾರೀ, ಸಿಕ್ಕಳೇನೊ?

ರಾಯಭಾರಿ : ಪ್ರಯತ್ನ ಮಾಡತಾ ಇದೀನಿ ಪ್ರಭೂ.

ರಾಜ : ಎಷ್ಟು ದಿನ ಪ್ರಯತ್ನ ಮಾಡೋದು? ಶಿವಪುರವನ್ನಾಳುವ ಕಾಲ್ಮಡಿ ಮಹಾ ಪ್ರಭುಗಳಿಗೆ ಅವರು ನೋಡಿ ಇಷ್ಟಪಟ್ಟ
ಒಂದು ಯಃಕಶ್ಚಿತ್ ಹುಡುಗಿ ಸಿಗ್ತಾ ಇಲ್ಲ ಅಂದರೆ ಜನ ನನ್ನ ನೋಡಿ ಒಳಗೊಳಗೇ ನಗೋದಿಲ್ಲವೇನೊ? ಜನ ನಕ್ಕರೆ
ನಾನ್ಯಾಕೋ ಬದುಕಬೇಕು? ಪಟ್ಟಣದ ಪ್ರತಿಯೊಂದು ಮನೆ  ಹುಡಿಕಿದೆಯಾ?

ಕಾರಭಾರಿ : ಹುಡುಕಿದೆ ಪ್ರಭು.

ರಾಜ : ಆದರೂ ಹೆಂಗಸರು ಸಿಗಲಿಲ್ಲವ?

ಕಾರಭಾರಿ : ಹೆಂಗಸರಿದ್ದಾರೆ. ಆದರೆ ಹಸಿರು ಸೀರೆ, ನೀಲಿ ರವಕೆಯವಳು ಸಿಗ್ತಾ ಇಲ್ಲ ಪ್ರಭು. ಖಂಡಿತ ಇಷ್ಟರಲ್ಲೇ
ಗುರುತು ಹಿಡೀತೀನಿ. ಇವತ್ತು ಸ್ವಲ್ಪ ವಿಷಯ ಗೊತ್ತಾಗಿದೆ. ಅವಳು ಶೆಟ್ಟರ ಮಗಳಂತೆ ….

ರಾಜ : ಹಸಿರು ಸೀರೆ, ನೀಲಿ ರವಕೆ – ಗುರುತಿಟ್ಟುಕೋ ಮಗನೆ; ಮರೆಯಬೇಡ. ಅಹಾ ಚೆಲುವೆ ಅಂದರೆ ಅವಳಯ್ಯಾ!
ಉದ್ಯಾನವನ ಲೇ ಕಾರಭಾರೀ, ಕಲ್ಪನಾ ಮಾಡು, – ಉದ್ಯಾನವನ-

ಪೊಲೀಸ್ : (ಒಳಬಂದು ನಮಸ್ಕರಿಸಿ) ಪ್ರಭು ತಮ್ಮ ದರ್ಶನಕ್ಕಾಗಿ ಗಣ್ಯ ನಾಗರಿಕರ ನಿಯೋಗ ಬಂದಿದೆ.

ರಾಜ : ಅಂತರಂಗ ಮಾತಾಡ್ತಿದೀವಿ ಅಂತ ಹೇಳಲಿಲ್ಲವಾ?

ಪೊಲೀಸ್ : ಹೆಳಿದೆ ಪ್ರಭು. ಆದರೂ ತಮ್ಮ ದರ್ಶನ ಪಡೀಲೇಬೇಕಂತಿದಾರೆ.

ರಾಜ : ಯಾತಕ್ಕಂತೆ?

ಪೊಲೀಸ್ : ಮನವಿ ಇಲ್ಲಿದೆ ಪ್ರಭು.

ರಾಜ : ಒಂದು ವಾಕ್ಯದಲ್ಲಿ ಸಾರಾಂಶ ಓದು.


ಪೊಲೀಸ್ : (ಓದುತ್ತ) ಹಾಯ್ ಹಾಯ್ ! ನಮ್ಮ ಜೀವನಕ್ಕೆ ಧಿಕ್ಕಾರ! ಕೂತರೆ ತೆರಿಗೆ, ನಿಂತರೆ ತೆರಿಗೆ, ಹಲ್ಲುಜ್ಜಿದರೆ
ತೆರಿಗೆ, ಬಟ್ಟೆ ಹಾಕಿದರೆ. ತೆರಿಗೆ ಆ ತೆರಿಗೆ ಈ ತೆರಿಗೆ ಊರಿಗೆ…. ಸಾರಾಂಶ ಅಂದರೆ – ಪ್ರಜೆಗಳು ತೆರಿಗೆಯ ಭಾರದಲ್ಲಿ
ತೊಳಲುತ್ತಿದ್ದಾರೆ ಪ್ರಭೂ.

ರಾಜ : ಅರ್ಥವಾಯಿತು. ಮತ್ತೆ ಯಾಕೆ ನಿಂತೆ? ಹೋಗು. ಅಂತರಂಗ ಮುಗಿಯೋತನಕ ಇನ್ನೊಂದು ಬಾರಿ ನೀನು ಒಳಗೆ
ಬಂದರೆ ಮಗನೇ ನಿನ್ನ ಚರ್ಮ ಸುಲೀತೇನೆ. (ಪೊಲೀಸ್ ಗಾಬರಿಯಲ್ಲಿ ಹೋಗುವನು) ಛೇ, ಏನು ಜನರಯ್ಯಾ ಇವರು,
ಮೂಡನ್ನೆಲ್ಲಾ ಹಾಳು ಮಾಡಿಬಿಡ್ತಾರೆ! ಏನ್ನ ಹೇಳತಿದ್ದೆ?

ಕಾರಭಾರಿ : ಉದ್ಯಾನವನ!

ರಾಜ : ಹಾ, ಉದ್ಯಾನವನ! ಕಾರಭಾರೀ, ಉದ್ಯಾನವನ! ಹಕ್ಕಿಪಕ್ಕಿ ಗಿಡಗಂಟಿಗಳು ಒದರುತ್ತಿವೆ! ಇನ್ನೊಂದೆಡೆ ಕೋಗಿಲೆ
ಕಾಲು ಕೆದರುತ್ತ ಧೂಳೆಬ್ಬಿಸಿದೆ! ಬೆಳ್ದಿಂಗಳು ಅಕ್ಕೀ ಹಿಟ್ಟಿನಂತೆ ಸುರಿಯುತ್ತಿದೆ! ಆಗ ಆ ಚೆಲುವೆ, ಅದೇ ಹಸಿರು ಸೀರೆ,
ನೀಲಿ ರವಕೆಯ ಹುಡುಗಿ – ಹಾಡಿಪಾಡಿ ನಲಿಯುತ್ತ, ಥೈ ಥೈ ಕುಣಿಯುತ್ತ, ಚಳ್ಳಂಗ ಪಳ್ಳಂಗ ಗಜ್ಜೆನಾದ ಮಾಡುತ್ತ,
ಪೀಪೀಪೀ ಢಂಢಂಢಂ ಬಾಜಾ ಬಜಂತ್ರಿ ಸಮೇತ ಬರುತ್ತಾಳೆ! ಬಂದಳೇನಯ್ಯಾ?

ಕಾರಭಾರಿ : ಬಂದಳು ಪ್ರಭು. ಉದ್ಯಾನವನದಲ್ಲಿ ನನಗೂ ಪ್ರವೇಶ ಇದೆಯಾ ಪ್ರಭು?

ರಾಜ : ಹೌದಯ್ಯಾ, ನಿನ್ನ ಸಹಕಾರ ಇಲ್ಲದೆ ನಾನೊಬ್ಬನೇ ಎಷ್ಟಂತ ಪ್ರೀತಿ ಮಾಡಲಿ? ಆದರೆ ಹುಲ್ಲು ಮೇಯುತ್ತಿರೋ
ಕೋಗಿಲೆ ಮರಿ ಓಡಿ ಹೋಗದ ಹಾಗೆ ಬಾ ಅಷ್ಟೆ.

ಕಾರಭಾರಿ : ಕೋಗಿಲೆಮರಿ ಹುಲ್ಲ ಮೇಯುತ್ತಿದೆಯೆ? ಕೋಗಿಲೆ ಒಂದು ಪಕ್ಷಿ ಅಲ್ಲವೆ ಪ್ರಭು?

ರಾಜ : ಮಗನೇ ಅದೊಂದು ಪ್ರಾಣಿ, ಅದು ಹಕ್ಕಿ ಆದರೆ ನಿನ್ನ ಹಲ್ಲು ಮುರೀತೇನೆ.

ಕಾರಭಾರಿ : ಅರರೇ ಹೌದಲ್ಲ! ಅದೊಂದು ಪ್ರಾಣಿಯೇ ಇರಬೇಕು ನಾಲಕ್ಕು ಕಾಲು….?

ರಾಜ : ಉದ್ದ ಬಾಲ, ಕುದುರೆ ಥರ ಮುಖ- ಆದರೆ ಕವಿ ಚಿಕ್ಕದು. ಆಕಾಶದ ಕಡೆ ಮುಖ ಮಾಡಿ ಬಾಲ ನಿಗರಿಸಿ ಒದರುತ್ತೆ.
ನಮ್ಮ ಉದ್ಯಾನವನದಲ್ಲಿ ಬೇಕಾದಷ್ಟಿವೆ. ಅದು ನಮ್ಮ ರಾಷ್ಟ್ರೀಯ ಪ್ರಾಣಿ ಮಗನೇ.

ಕಾರಭಾರಿ : ನಿಜ ನಿಜ. ಮೊದಮೊದಲು ನಿಮ್ಮ ಮಾತು ಕೇಳಿ ನನಗೆ ಕತ್ತೆ ನೆನಪಾಗಿತ್ತು.

ರಾಜ : ಅದರದ್ದೊಂದು ಕಥೆ ಇದೆ. ಕತ್ತೆ ಮನುಷ್ಯರ ಥರ ಇರುತ್ತೆ, ಬೇಜಾರಾದಾಗಲೆಲ್ಲಾ ಒದರುತ್ತೆ. ಆದರೆ ನನಗೆ ಆ
ಪ್ರಾಣಿ ಬಗ್ಗೆ ಯಾಕಪ್ಪಾ ನಿರಾಸೆ ಅಂದರೆ ಅದು ಒದೆಯುತ್ತೆ ಕಣೊ. ಒದೆಯೋ ಹಕ್ಕು ರಾಜರಿಕಗೆ ಮಾತ್ರ ಇರಬೇಕು.
ಏನಂತಿ?

ಕಾರಭಾರಿ : ಅಲ್ಲವೆ?

ರಾಜ : ಈ ಕ್ರಾಂತಿಕಾರಿ ನನ್ನ ಮಕ್ಕಳು ತಮಗೂ ಒದೆಯೋ ಹಕ್ಕು ಬೇಕಂತಾರೆ!

ಕಾರಭಾರಿ : ತಪ್ಪಲ್ಲವೇ?

ರಾಜ : ಉದ್ಯಾನವನ ಅಲ್ಲೇ ಬಿಟ್ಟೆವಲ್ಲಯ್ಯಾ. ಅವಳು ಬಂದು ಸುಮ್ಮನೆ ನಿಂತಿದಾಳೆ! ಮುಂದೆ ಏನು ಮಾಡಬೇಕು
ಹೇಳು.

ಕಾರಭಾರಿ : ಅಂದರೆ ಹೀಗೆ ಪ್ರಭು: ಆ ಹುಡುಗಿ ಅಲ್ಲಿದಾಳೆ ಅಂತ ಇಟ್ಟುಕೊಳ್ಳಿ. ತಾವು ಇಲ್ಲಿದೀರಿ. ನಾನು ಅವಳ
ಪಕ್ಕದಲ್ಲಿದೀನಿ.
ರಾಜ : ಅದ್ಯಾಕಂತೆ ನೀ ಅವಳ ಪಕ್ಕ ಇರಬೇಕು? ನಾನೇ ಅವಳ ಪಕ್ಕ ಇರತೀನಿ, ನೀ ಇಲ್ಲಿರು.

ಕಾರಭಾರಿ : ಅಲ್ಲಲ್ಲ ಹಾಗೆ ತಿಳಕೊಳ್ಳಿ ಅಷ್ಟೆ.

ರಾಜ :ಅದೇ ಮತ್ತೆ, ನಾ ಹೇಳಿದ ಹಾಗೇ ತಿಳಕೊಳ್ಳೋಣ.

ಕಾರಭಾರಿ : ಅಲ್ಲ ಪ್ರಭು, ಈಗಷ್ಟೇ ನಾನವಳನ್ನು ಕರಕೊಂಬಂದಿದ್ದೇನೆ. ಅದಕ್ಕೆ ಅವಳು ನನ್ನ ಪಕ್ಕದಲ್ಲಿದ್ದಾಳೆ. ಈಗ ನನ್ನ
ಪಕ್ಕದಿಂದ ತಮ್ಮ ಹತ್ತಿರಕ್ಕೆ ಬರುತ್ತಾಳೆ.

ರಾಜ : ಹಾಗೋ? ಸರಿ.

ಕಾರಭಾರಿ : ತಾವು ಇಲ್ಲಿದೀರಿ. ಆಕೆ ಬಂದಳು. ಹ್ಯಾಗೆ ನಿಂತಿರತೀರಿ? ತೋರಿಸಿ ನೋಡೋಣ.

ರಾಜ : ಹೀಗೆ ನಿಂತಿರಲಾ?

ಕಾರಭಾರಿ : ನಿಲ್ಲೋದಕ್ಕೊಂದು ಶೈಲಿ ಇದ್ದರೆ ಒಳ್ಳೇದಲ್ಲವ?

ರಾಜ : ಹೀಗೆ?

ಕಾರಭಾರಿ : ಈಗ ಸರಿ. ನೋಡಿ ನಾನೇ ಅವಳೂಂತಿಟ್ಟುಕೊಳ್ಳಿ. ಇಕಾ ಬಂದೆ. ಏನ್ ಮಾಡ್ತೀರಿ?

ರಾಜ : ಏನ್-ಮಾಡಲಿ?

ಕಾರಭಾರಿ : ಛೇ ಬಗ್ಗಿ ಪುರ್ ಮಾಡಬೇಕಷ್ಟೆ.

ರಾಜ : (ಬಗ್ಗಿ) ಪುರ್ ರ್ ರ್!

ಕಾರಭಾರಿ : ಹಾಗಲ್ಲ ಪ್ರಭು. ಅವಳು ಬರತ್ತಿರೋ ಹಾಗೇನೇ ಒಂದು ಮುಗುಳು ನಕ್ಕು ಪ್ರಿಯೇ ಅಂತ ಒಂದು ಮುದ್ದು
ಎಸೀಬೇಕು. ಹ್ಯಾಗೆ ಹೇಳಿ?

ರಾಜ : ಪ್ರೀಯೆ!

ಕಾರಭಾರಿ : ಹಾಗಲ್ಲ ಒಂಚೂರು ಗತ್ತಿನಿಂದ ಮುದ್ದು ಅವಳ ಕಡೆ ಎಸೀತೀರಲ್ಲ, ಹಾಗೇ ಅವಳು ತನ್ನ ಹೃದಯ ನಿಮ್ಮ ಕಡೆ
ಎಸೆದಿರಬೇಕು, ಆ ಥರ ಇರಬೇಕು ನಿಮ್ಮ ಗತ್ತು.

ರಾಜ : ನೀನು ತೋರಿಸುವಾಗ ನಿನ್ನ ಮುಖ ಎಂಜಲೆಲೆ ಥರ ಆಗಿತ್ತು. ನಾನೂ ಹಾಗೇ ಮಾಡಬೇಕು?

ಕಾರಭಾರಿ : ತಾವು ಸ್ವಾಭಾವಿಕವಾಗಿ ಮಾಡಿ.

ರಾಜ : ಪ್ರೀಯೆ.

ಕಾರಭಾರಿ : ಈಗ ತಾವು ಮೊಳಕಾಲೂರಿ ಎರಡೂ ಕೈಯಿಂದ ಎದೆ ಮುಟ್ಟಿಕೊಂಡು ಮಾತಾಡಬೇಕು. ಆ ಹುಡುಗೀ


ಹಾಗೇ ಇನ್ನೊಮ್ಮೆ ಬರಲಾ? (ಕಾರಭಾರಿ ಹೆಂಗಸಿನ ವಯ್ಯಾರ ಮಾಡುತ್ತ ಬರುವನು)

ರಾಜ : ಅಯ್ಯಯೋ, ನನಗೆ ನಾಚಿಕೆ ಬರತ್ತಾ ಇದೆ! (ಮುಖ ಮುಚ್ಚಿಕೊಳ್ಳುವನು)


ಕಾರಭಾರಿ : ನಾಚಬೇಕಾದವಳು ಅವಳಲ್ಲವೇ ಪ್ರಭು?

ರಾಜ : ಹಾಗಿದ್ದರೆ ನಾ ಏನು ಹೇಳಬೇಕು, ಹ್ಯಾಗೆ ಹೇಳಬೇಕು-ಎಲ್ಲಾ ನೀನೇ ಮಾಡಿ ತೋರಿಸು.

ಕಾರಭಾರಿ : ತಾವು ಅವಳು ಅಂತ ಇಟ್ಟುಕೊಳ್ಳಿ, ನಾನು ತಾವು, ಇಲ್ಲಿ ಹೀಗೆ ಕೂತಿದೀನಿ. (ಮೊಳಕಾಲೂರಿ ಕುಳಿತು
ಎರಡೂ ಕೈಗಳಿಂದ ಎದೆ ಹಿಡಿದುಕೊಂಡು) ಪ್ರಿಯೆ, ನಾನು ನಿನಗೆ ಈವಾಗೊಂದು ಮಾತನ್ನು ಹೇಳಲೇಬೇಕು.
ಯಾಕೆಂದರೆ ನನ್ನ ಆತ್ಮಕ್ಕೆ ನೋವಾಗಿದೆ. ಆತ್ಮ ದೇಹದಲ್ಲಿದೆ. ದೇಹದಿಂದ ನಾವು ಬದುಕುತ್ತೇವೆ. ನಾವು ಬದುಕೋದು
ಜೀವನದಲ್ಲಿ. ಆದರೆ ಜೀವನವು ಜಗತ್ತಿಗಿಂತ ದೊಡ್ಡದೆಂದು ಅಥವಾ ಸಣ್ಣದೆಂದು ಹುತಾತ್ಮರು ಅಲ್ಲ, ಮಹಾತ್ಮರು
ಹೇಳಿರುವರು. ಆದ್ದರಿಂದಲೇ ನಾನು ಹೇಳಬೇಕಾಗಿರುವುದೇನೆಂದರೆ ಜೀವನವು ನಮಗಿಂತ ದೊಡ್ಡದು. ಯಾಕೆಂದರೆ
ಅದರಲ್ಲಿ ಪ್ರೀತಿ ಪ್ರೇಮ ಇದೆ. ಅಂಥಾ ಪ್ರೇಮವೆಂಬ ಪಾಶದಲ್ಲಿ ಸಿಕ್ಕುಬಿದ್ದು ನಾನು ವಿಲವಿಲ ಒದ್ದಾಡುತ್ತಿರುವೆನು!
ಹ್ಯಾಗನಿಸ್ತು ಪ್ರಭು?

ರಾಜ : ಗಳಗಳ ಅಳೋಣ ಅನ್ನಿಸ್ತು. ಅಲ್ಲವೋ ಇದರಲ್ಲೊಂದು ಪ್ರಾಸ, ಒಂದುಲಯ, ಒಂದು ಗತ್ತು- ಏನಿತ್ತೊ ಇದರಲ್ಲಿ?
ಛೇ ಛೇ ನೀನಿಂಥಾ ಗದ್ಯಾತ್ಮಕ ಅಂತ ಗೊತ್ತಿರಲಿಲ್ಲ ಬಿಡು. ಗದ್ಯಂ ಪದ್ಯಂ ವದ್ಯಂಹ್ರದ್ಯಂ ಅಂತ ಹಿರೇರು ಹೇಳೋದನ್ನ
ಕೇಳಿಲ್ಲವೇನಯ್ಯಾ? ಹ್ಯಾಗಿರಬೇಕು ಗೊತ್ತ ಡೈಲಾಗು? ನಾ ಹೇಳ್ತೀನಿ ಕೇಳು :
ನಾ ಅಂತೀನಿ : ಪ್ರೀಯೆ!
ಅವಳಂತಾಳೆ : ಪ್ರೀಯಕರಾ!
ನಾ ಅಂತೀನಿ : ಅಯ್ಯೋ ಪ್ರೀಯೆ!, ನೀ ಎನ್ನ ಹೃದಯದಲ್ಲಿ ಒಂದು ಕುರ್ಚಿಹಾಕಿ ಕುಳಿತುಕೊಂಡಿರುವೆ. ಜೀವ ಬಿಟ್ಟೇನು.
ಆದರೆ ಆ ಕುರ್ಚಿಯಿಂದ ನಿನ್ನನ್ನು ಕೆಳಕ್ಕೆ ಇಳಿಸೋದಿಲ್ಲ.
ಅವಳಂತಾಳೆ : ಹಾ ಪ್ರೀಯಕರಾ! ನಲ್ಮೆಯ ನಲ್ಲನಾದ ನೀನಿಲ್ಲದ್ದರಿಂದ ಖುಲ್ಲಮಾರನು ಎನ್ನ ಪುಲ್ಲತರವ ಮಾಡಿ ಗುಲ್ಲು
ಮಾಡುವನು. ಛಲವನ್ನು ತೋರದೆ ನೀನೀಗಲೇ ಬಂದು ಎನ್ನಲಿ ಸೇರಬಾರದೆ?
ನಾ ಅಂತೀನಿ: ಹಾ ಪ್ರೀಯೆ ಪ್ರಶಾಂತ ಹೃದಯೆ! ಈ ಬಾಳು ಸರಸ, ಇನ್ನೇಕೆ ವಿರಸ ಸವಿಯುವಾ ಸಂತಸ. ಕುಸುಮ
ಶಯನದಿ ದಶವಿಧ ಚುಂಬಿಸುತ ಹಸನಾಗಿ ಸುಖದೋರಬಾರದೆ? ಗಮನಿಸಾ ದಮದಸಾ ಪಗಪಗಪಗ ಪಗರಿಕಸಾ
ಕರಗಸಾ!
ಹ್ಯಾಗಿತ್ತು?

ಕಾರಭಾರಿ : (ಚಪ್ಪಾಳೆ ತಟ್ಟಿ) ಅದ್ಭುತವಾಗಿತ್ತು ಪ್ರಭು! ಕೇವಲ ಅದ್ಭುತ! ಆದರೆ ಇಂಥ ಅದ್ಭುತ ದೃಶ್ಯ ಉದ್ಯಾನವನದಲ್ಲಿ
ಚೆನ್ನಾಗಿ ಬರೋದಿಲ್ಲ ಪ್ರಭು.

ರಾಜ : ಯಾಕೆ?

ಕಾರಭಾರಿ : ಉದ್ಯಾನವನದಲ್ಲಿ ರಾತ್ರಿ ವಿಪರೀತ ಸೊಳ್ಳೆ ಕಾಟ. ಚಳಿ ಬೇರೆ. ಈ ಡೈಲಾಗು ಹೇಳುವಾಗ ಬಾಯಲ್ಲಿ ಸೊಳ್ಳೆ
ಹೊಕ್ಕರೆ ಕಷ್ಟವಲ್ಲವೆ ಪ್ರಭು? ಇದು ವಿಶ್ರಾಂತಿ ಗೃಹದಲ್ಲಾದರೇ ಶೋಭೆ ಹೆಚ್ಚಲ್ಲವೇ?

ರಾಜ : ಹಾಗಂತೀಯಾ? ಹಾಗಿದ್ದರೆ ಆ ಹುಡುಗಿ – ಅದೇ ಹಸಿರು ಸೀರೆ, ನೀಲಿ ರವಕೆ ಯೋಳು ಸಿಕ್ಕ ತಕ್ಷಣವೇ ದನಮ್ಮ
ವಿಶ್ರಾಂತಿ ಗೃಹದಲ್ಲಿ ವ್ಯವಸ್ಥೆ ಮಾಡು.

ಕೇಳಯ್ಯ ಕಾರಭಾರಿ
ಸಿಕ್ಕರೆ ಆ ಹುಡುಗಿ!
ಕರತಾರೊ ಆ ಕ್ಷಣ
ನಮ್ಮ ವಿಶ್ರಾಂತಿ ಗೃಹಕೇ

ಕಾರಭಾರಿ : ಹಾಗೆ ಅಗಲಿ ಪ್ರಭು.


ಸಾಂಬಶಿವ ಪ್ರಹಸನ : ದೃಶ್ಯ – ೩
(ಅದೇ ಗಣೇಶ ದೇವಸ್ಥಾನ. ಸಾಂಬ, ಶಿವ ಇದ್ದಾರೆ)

ಶಿವ : ಇಷ್ಟೊಂದು ಕಥೆ ಕಾದಂಬರಿ ಓದೇನಿ, ದೇವರು ಕತ್ತೇವರ ಕೊಟ್ಟದ್ದನ್ನ ನಾನೆಲ್ಲೂ ಓದಲಿಲ್ಲಪ್ಪ! ನಿವ್ವಳ ಲಾಭ
ಏನೂಂದರೆ ಕತ್ತೆ ಕಾಯೋ ಕೆಲಸ ಸಿಕ್ಕಿತು, ಅಷ್ಟೆ.

ಸಾಂಬ : ಧಡ್ಡ ನನಮಗನೆ! ಇಷ್ಟೂ ತಿಳಿಯೋದಿಲ್ಲವೆ? ನಿನಗೂ ಒಂದು ತಲೆ ಇದೆ; ದೇವರು ಕೊಟ್ಟ ಕತ್ತೆ ಇದೆ. ಇನ್ನೇನು
ಬೇಕು? ನನ್ನ ಕೇಳಿದರೆ ಈ ಕತ್ತೇನ್ನ ಕನಿಷ್ಟ ಒಂದು ಕೋಟಿ ರೂಪಾಯಿಗೆ ಮಾರಬಹುದು. ತೋರಿಸಲ? ಅಯ್ಯಾ
ಡಿಂಗ್‌ಡಾಂಗ್!
(ಕತ್ತೆ ಹೂಂಕರಿಸುತ್ತದೆ)
ಇಲ್ಲಿಬಾ.
(ಬರುತ್ತದೆ)
ಕೂತುಕೊ.
(ಕೂರುತ್ತದೆ)
ನಿಂತುಕೊ.
(ನಿಲ್ಲುತ್ತದೆ)
ಎಲ್ಲಿ ಸ್ವಲ್ಪ ಕುಣಿ ನೋಡೋಣ.
(ಕುಣಿಯುತ್ತದೆ)
(ಶಿವನಿಗೆ ಆನಂದ ಆಶ್ಚರ್ಯವಾಗಿದೆ. ಈಗ ಇಬ್ಬರೂ ಹಾಡುತ್ತ ಕುಣಿಯುತ್ತಾರೆ, ಕತ್ತೆಯೊಂದಿಗೆ)

ಸಾಂಬ ಶಿವ :

ಸಲಾಮಲೇಕುಂ ಡಿಂಗ್‌ಡಾಂಗ್ ಸಾಹೇಬರ


ಬಲೆ ಮೋಜುದಾರ!
ಯಾರಿಲ್ಲ ಎದುರಿಗೆ ನಿಲ್ಲವರ
ನಿಮ ಸಮಾನರಾಯರ  ||ಪಲ್ಲವಿ||
ಈ ನಾಡನ್ನಾಳೋರಾಜ ಹುಲಿ ಅಲ್ಲ ಚಿರತೆಖೋಜ
ಅವನಿಗಿನ್ನ ನೇವೆ ಉತ್ತಮರಾ! ಓ ಸಾಹೇಬರ ಅ ಪಲ್ಲ

ಮುಂಗಾಲಿಂದ ನಡೆಯುತ್ತೀರಿ
ಹಿಂಗಾಲಿಂದ ಒದೆಯುತ್ತೀರಿ
ಎರಡೆರಡು ನಾಲ್ಕರಿಂದ
ಒದ್ದೂ ನಡೆದೂ ಕುಣಿಯುತ್ತೀರಿ
ಈ ನಾಡನ್ನಾಳೊ ರಾಜ ಬರೆ ಎರಡೆ ಕಾಲಿನ ಮನುಜ
ಅವನಿಗಿನ್ನ ನೀವೇ ಉತ್ತಮರಾ
ವೇದಮಂತ್ರ ವಿದ್ಯಾಬುದ್ಧಿ
ನಿಮಗೆ ಕೊಳೆತು ನಾರುವ ರದ್ದಿ
ಎಲ್ಲಾ ತಿಂದು ತೇಗಿ ತೇಗಿ
ಹಾಕುತ್ತೀರಿ ಭಾರೀ ಲದ್ದಿ
ಈ ನಾಡನ್ನಾಳೊ ರಾಜ ತಲೆ ತುಂಬ ಬದನೆಬೀಜ
ಅವನಿಗಿನ್ನ ನೀನೇ ಉತ್ತಮರಾ! ಓ ಸಾಹೇಬರಾ
ಸಾಂಬ : ಈಗ ಸೀರೆ, ರವಕೆ ಕೊಡು.
(ಕೊಡುವನು)
ಇದೇನಯ್ಯಾ ಹಸಿರು ಸೀರೆ, ನೀಲಿ ರವಕೆ?

ಶಿವ : ಆ ದಿನ ಅವಳು ಇದೇ ಥರ ಸೀರೆ ಉಟ್ಟಿದ್ದಳಪ್ಪ.

ಸಾಂಬ : ನಾನೀಗ ನಿನಗೆ ಅವಳ ಧರ ಕಾಣಿಸಬೇಕು?

ಶಿವ : ನೀ ನಮ್ಮಪ್ಪ ಅಲ್ಲವ?

ಸಾಂಬ : ಸರಿಯಾಗಿ ಕೇಳಿಕೊ. ನಾನು ಒಳಕ್ಕೆ ಹೋಗಿ ಆ ಮನೇಲಿ ಕೆಲಸ ಸಿಕ್ಕೋತನಕ ಸ್ವಲ್ಪ ಹೊತ್ತು ಬೇಕು, ನಮ್ಮಪ್ಪ
ಎಷ್ಟು ಹೊತ್ತು ಹೋದ ಅಂತ ಅವಸರ ಮಾಡಬೇಡ.

ಶಿವ : ಆಯ್ತು.

ಸಾಂಬ : ಇನ್ನೂ ತಡ ಆದರೆ ಸಿಳ್ಳೆಗಿಳ್ಳೆ ಹಾಕಬೇಕು.

ಶಿವ : ಇಲ್ಲ.

ಸಾಂಬ : ಹ್ಯಾಗೋ ಆ ಹುಡಿಗೀನ್ನ ನಾ ಹಿತ್ತಲಕಡೆ ಕಳಿಸ್ತೇನೆ. ಅಲ್ಲೀತನಕ ನೀನು ನಾಗರಿಕವಾಗಿ ಇರಬೇಕು, ತಿಳೀತ?

ಶಿವ : ನನಗೆ ತುಂಬಾ ಹೊತ್ತು ಸುಮ್ಮನಿರೊಕಾಗೋದಿಲ್ಲ, ಏನ್ ಮಾಡಲಿ?

ಸಾಂಬ : ಕೈಕಾಲು ಬೆರಳು ಎಣಿಸ್ತಾ ಇರು.

ಶಿವ : ಆಯ್ತು.

ಸಾಂಬ : ಈ ಮಧ್ಯೆ ಅಪ್ಪತಪ್ಪಿ ಅವರಪ್ಪ ಬಂದರೆ….

ಶಿವ : ನನಗವಳಪ್ಪ ಬೇಡ, ಆ ಹುಡುಗೀನೇ ಬೇಕು.

ಸಾಂಬ : ಯೋ, ಮದುವೆ ಆಗೋತನಕ ಆತ ಮಧ್ಯೆ ಇದ್‌ಏ ಇರತಾನೆ ಕಣೊ,

ಶಿವ : ಹಾಗಾದರೆ ಈಗ ನೋಡಪ್ಪ, ನಿನ್ನ ಸಹಾಯ, ನಿನ್ನ ಅನುಭವ ಬೇಕು; ಏನು ಮಾಡಲಿ?

ಸಾಂಬ : ಹಿಂಗ್ ಬಾ ದಾರಿಗೆ. ನಿನ್ನ ಪರೀಕ್ಷೆ ಇರೋದು ಈಗಲೇ. ಆತ ಏನು ಮಾತಾಡಿದರೂ ಒಂದೊಂದು ಮಾತನ್ನ
ವಿಚಾರಮಾಡಿ ಮಾತಡೋರ ಹಾಗೆ ಆಹಾ! ಅಂತ ಹೇಳತಾ ಇರು, ಅಷ್ಟೆ.

ಶಿವ : ಆಹಾ!

ಸಾಂಬ : ಮಾತಿಗೊಮ್ಮೆ ನಗತಾ ಇರಬೇಕು. ಆಹಾ ಅಂತಲೂ ಹೆಳತಿರಬೇಕು.

ಶಿವ : ಆಹಾ!

ಸಾಂಬ : ತಿಳೀತ?
ಶಿವ : ಆಹಾ!

ಸಾಂಬ : ನನ್ನ ಮುಂದಲ್ಲ ಆಹಾ ಅನ್ನೋದು, ನಿನ್ನ ಮಾವನ ಮುಂದೆ.

ಶಿವ : ನಾ ಬರೀ ಇಷ್ಟೆ ಮಾತಾಡಿದರೆ ಮೂಕ ಅಂದುಕೊಳ್ತಾನೋ ಏನೊ!

ಸಾಂಬ : ಅಂದಕೊಳ್ಲಿ. ನಿನ್ನ ಮೂರ್ಖತನವನ್ನಾದರೂ ಮುಚ್ಚಬಹುದೊ?

ಶಿವ : ಆಹಾ!

ಸಾಂಬ : ಕಳ್ಳ ನನ್ನ ಮಗನೇ, ನನಗೇನಾರ ನಿನ್ನ ವಯಸ್ಸಿದ್ದಿದ್ದರೆ ತೋರಸ್ತಿದ್ದೆ.

ಶಿವ : ಸದ್ಯ ಇಲ್ಲವಲ್ಲ!

ಸಾಂಬ : ಏನಂದಿ?

ಶಿವ : ಆಹಾ! ನನ್ನ ವಯಸ್ಸು ತುಳುಕ್ತಾ ಇದೆ.ದ ಅವಸರ ಮಾಡಪ್ಪ?

ಸಾಂಬ : ಅಂದರೆ ನಾ ಈಗ ಹೊರಡಬೇಕು.

ಶಿವ : ಹೊರಡಬೇಕು.

ಸಾಂಬ : ತಡ ಮಾಡಬಾರದು.

ಶಿವ : ಕೂಡದು.

ಸಾಂಬ : ತಡ ಮಾಡಿದರೆ ಅಪಾಯ ಇದೆ.

ಶಿವ : ಅಪಾಯ ಇದೆ.

ಸಾಂಬ : ನನ್ನ ಮಾತು ಬಿಟ್ಟು ಇನ್ನೇನಾರ ಬೊಗಳು ಅಂದರೆ….

ಶಿವ : ಬೊಗಳು ಅಂದರೆ.

ಸಾಂಬ : ಥೂ ಕಳ್ಳ ನನಮಗನೆ (ಎಂದು ಮೆಚ್ಚಿಗೆಯಿಂದ ಶಿವನ ಕೆನ್ನೆಗೆ ತಟ್ಟಿ) ನೆಪ್ಪಿರಲಿ, ಅವರ ಮನೇಲಿ ನನ್ನ ಹೆಸರು
ಬಂಗಾರಿ!

ಶಿವ : ಆಹಾ!
ಸಾಂಬಶಿವ ಪ್ರಹಸನ : ದೃಶ್ಯ – ೪
(ಸಾಹುಕಾರನ ಮನೆ, ಗಜನಿಂಬೆ ಕಿಟಕಿ ಹತ್ತಿರ ನಿಂತಿದ್ದಾಳೆ. ಸಾಂಬ, ಅಂದರೆ ಬಂಗಾರಿ ಗಜನಿಂಬೆಯ ಹತ್ತಿರ
ನಿಂತಿದ್ದಾಳೆ)

ಗಜನಿಂಬೆ :
        ನಾ ತಾಳೆ! ಈ ವೇದನೆ
        ಅಗಲಿಕೆಯಾ  ಪ
        ಸ್ಮರನಾ ಬಾಣಾ ಸಹಿಸೆ ನಾನಾ ಅ.ಪ
        ಪ್ರಿಯ ಯಾಕೆ ಬರದೆ ನಿಂತಾ ಕಾಂತಾ
        ಸ್ಮರನಿಗೆ ತರುಣಿಯ
        ವಶಗೈಯುತಾ

(ಸ್ವಗತ) ಆಹಾ ಮೊನ್ನೆಯಷ್ಟೇ ಆ ತರುಣನು ನನ್ನ ಮಾನಸವನ್ನು ಕದ್ದು ಮರುಳು ಮಾಡಿ ಹೋದಾಗಿನಿಂದ ನನ್ನ
ಹೃದಯವು ವಿರಹದ ಉರಿಯಲ್ಲಿ ಬೇಯುತ್ತಿರುವುದು. ನನ್ನಂಥ ಕೋಮಲ ತರುಣಿಯನ್ನು ಮಾರಶರಘಾತಕ್ಕೆ ಗುರಿ ಮಾಡಿ
ಹೋಗುವುದು ತರವಲ್ಲ ಅಂತ ಆತನಿಗೆ ಬುದ್ಧಿ ಹೇಳುವವರು ಯಾರು? ನಲ್ಲನನ್ನು ಕಾಣದೆ ನನ್ನ ಮನವು ನಿಲ್ಲದಾಗಿದೆ.
ರಾತ್ರಿ ನಿದ್ದೆ ಇಲ್ಲದೆ ಹೊರಳಿ ಹೊರಳಿ ಸಾಯುತ್ತಿದ್ದೇನೆ ಅಂತ ಅವನಿಗೆ ಹೇಳುವವರು ಯಾರು? ಆಹಾ! ಅಗೋ ಅವನೇ
ಬಂದ. ಈ ಹೆಂಗಸು ನಮ್ಮ ಮನೆಯಲ್ಲಿ ಆಳಿನ ಕೆಲಸ ಕೊಡಿರೆಂದು ಅಂಗಲಾಚಿ ಕೇಳುತ್ತಿದ್ದಾಳೆ. ಅಮ್ಮನಿಗೆ ಹೇಳಿ ಕೆಲಸ
ಕೊಡಿಸಿ, ಅವಳನ್ನು ಮೊದಲು ಆಪ್ತ ಸಖಿಯನ್ನಾಗಿ ಮಾಡಿಕೊಳ್ಳುತ್ತೇನೆ. ಆಮೇಲೆ ಇವಳ ಸಹಾಯದಿಂದ ಆ ಕಳ್ಳನನ್ನು
ಹಿಡಿಯುತ್ತೇನೆ. (ಪ್ರಕಾಶ) ಏನೇ ಕೆಲಸ ಬೇಕೂ ಅಂದ್ರೆ ಅಮ್ಮ ಬರೋತನಕ ಕಾಯಬೇಕು. ನಿನ್ನ ಹೆಸರೇನಂದೆ?

ಸಾಂಬ : ಬಂಗಾರಿ.

ಗಜನಿಂಬೆ : ಇದೇ ಊರಿನವಳಾ?

ಸಾಂಬ : ಹೌದು.

ಗಜನಿಂಬೆ : ಬಂಗಾರಿ, ಆ ಹಿತ್ತಲ ಹತ್ರ ಒಬ್ಬ ಹುಡುಗಾ ನಿಂತಾನ್ನೋಡು. ಯಾರವನು? ಗೊತ್ತಾ ನಿನಗೇನಾದರೂ?

ಸಾಂಬ : (ನೋಡಿ ತನ್ನಲ್ಲೇ) ನನ್ನ ಮಗ ಆಗಲೆ ಹಾಜರಾಗಿ ಬಿಟ್ಟನಾ! (ಪ್ರಕಾಶ) ಗೊತ್ತೂ ತಾಯಿ. ನಮ್ಮ ಗಲ್ಲೀಯವನೆ.

ಗಜನಿಂಬೆ : ನಿಮ್ಮ ಗಲ್ಲಿಯವನಾ? ಏನು ಅವನ ಹೆಸರು?

ಸಾಂಬ : ಶಿವ ಅಂತ. ಯಾಕ್ರಿ ಅವ್ವ?

ಗಜನಿಂಬೆ : ಈಗ ಮೂರು ದಿನದಿಂದ ಅವನು ಅಲ್ಲೇ ನಿಂತಿರತ್ತಾನೆ. ಜೊತೆಗೊಬ್ಬ ಮುದುಕನೂ ಇದ್ದ. ಇವೊತ್ತು
ಯಾಕೋ ಬಂದಿಲ್ಲ ಅವನು.

ಸಾಂಬ : ಆ ಮುದುಕ ಹೆಂಗೆ, ನೋಡೋದಕ್ಕೆ ಚೆನ್ನಾಗಿದ್ದನಾ?

ಗಜನಿಂಬೆ : ಥೂ ಮುದಿಕೋತಿ ಥರಾ ಇದ್ದ. ಸ್ವಲ್ಪ ಹೆಚ್ಚು ಕಮ್ಮಿ ನಿನ್ನ ಹಾಗೇ ಅಂದುಕೋ. ಹುಡುಗ ಮಾತ್ರ ತುಂಬ
ಚೆಲುವ, ಅಲ್ಲೇನೆ?

ಸಾಂಬ : ಎಂಥ ಚೆಲುವಿಕೆ ಬಿಡಮ್ಮ. ಮಾರಿದರೆ ಎರಡು ಬೀಡಿ ಬರೋದಿಲ್ಲ. ಅವನ ಮುಸಡಿ ನೋಡಿ! ಸರಿಯಾಗಿ
ನಗೋದಕ್ಕೂ ಬರೋದಿಲ್ವೆ. ಆ ಇನ್ನೊಬ್ಬ; ಸ್ವಲ್ಪ ವಯಸ್ಸಾದೋನು ಅಂದಿರಲ್ಲ, ಆತ ನೋಡಿ ತುಂಬಾ ರಸಿಕ. ವಯಸ್ಸೂ
ಜಾಸ್ತಿ ಆಗಿಲ್ಲ ಅವನಿಗೆ. ಏನ್ ಚೆಂದ ಹಾಡ್ತಾನೆ, ಕುಣೀತಾನೆ, ಜನ ಅವನ್ನ ಏನ್ ಕೇಳ್ತಾರೆ ಗೊತ್ತಾ? ‘ಸ್ವಾಮಿ ನಿಮ್ಮ
ಯೌವ್ವನದ ಗುಟ್ಟೇನು?’

ಗಜನಿಂಬೆ : ಥೂ ಆ ಕಪಿ ಮುಂಡೇದನ್ನದ ನೋಡಿದರೆ ಅದರ ಮುಖದ ಮೇಲೆ ವಾಂತಿ ಮಾಡೋಣ ಅನ್ಸುತ್ತೆ. ಅವನ
ಮುಂದೆ ನೀನೇ ವಾಸಿ. ಆದರೆ ಆ ಹುಡುಗ ಇದಾನಲ್ಲ, ಒಳ್ಳೆ ಕಾಮ, ಕಾಮಣ್ಣ ಕಣೆ.

ಸಾಂಬ : ಕಳ್ಳ ನನಮಗ ಕಣಮ್ಮ ಅವನು. ಅವನ ಜೊತೆಗಿದ್ದಾನಲ್ಲ ಸ್ವಲ್ಪ ವಯಸ್ಸಾದೋನು, ಆತ ನೋಡಿ ಮಹಾ
ಸಜ್ಜನ! ಈ ಮುಂಡೇದಕ್ಕೆ ಅವನ ಹಾಗೆ ಉಗಿಯೋದಕ್ಕೂಬರೋದಿಲ್ವೆ.

ಗಜನಿಂಬೆ : ಆ ಮುದಿಯನ ಬಗ್ಗೆ ನಿನಗೆ ಅಷ್ಟೊಂದು ಪ್ರೀತಿ ಇದ್ರೆ ಅವನ ಬೆನ್ನು ಹತ್ತಿ ಹೋಗು. ಇಲ್ಲಿಗೆ ಯಾಕೆ ಬಂದೆ?
ಇನ್ನೊಂದು ಸಲ ಅವನ ವಿಷಯ ಹೇಳಿದ್ರೆ ನಿನ್ನ ಕೆಲಸಾನೂ ಬೇಡ, ನೀನೂ ಬೇಡ. ಸಧ್ಯ ಈ ದಿನ ಅದ್ಯಾಕೋ ಆ
ಮುದಿಗೂಬೆ ಬಂದಿಲ್ಲ.

ಸಾಂಬ : (ಸ್ವಗತ) ಸಾಂಬಾ ಇದು ನಿನ್ನ ಕೇಸಲ್ಲ ಕಣೊ. ಅಲ್ಲ, ಇಷ್ಟು ದಿವಸ ನನ್ನ ಮಗನ್ನ ಪೆದ್ದು ಮುಂಡೇದೂ ಅಂತಿದ್ದೆ.
ಇಲ್ಲಿ ನೋಡಿದ್ರೆ ಈ ಹುಡಿಗೀ ಎದೆಯೊಳಗೇನೋ ಗಡಿಬಿಡಿ ಮಾಡಿಬಿಟ್ಟಿದ್ದಾನೆ! ಬಲ್ನನ್ಮಗಾ! ಬಲ್ನನ್ಮಗಾ!ಶಿವ ನನಗೆ
ವಯಸ್ಸಾಯ್ತು ಅಂತ ಒಪ್ಪಿಕೊಮಡೆ ಕಣೊ.

ಗಜನಿಂಬೆ : ವಯಸ್ಸೆಷ್ಟು?

ಸಾಂಬ : ಯಾರದು, ನನ್ನ ವಯಸ್ಸಾ?

ಗಜನಿಂಬೆ : ಥೂ, ಆ ಹುಡುಗಂದು.

ಸಾಂಬ : ನಲವತ್ತೋ ಐವತ್ತೋ ಇರಬೇಕು.

ಗಜನಿಂಬೆ : ಏನೇ ಆಗಿದೆ ನಿನಗೆ? ಸರಿಯಾಗಿ ಮಾತಾಡ್ತೀಯಾ, ಇಲ್ಲ ಮನೆ ಆಚೆ ಹೋಗ್ತೀಯಾ?

ಸಾಂಬ : ಇಲ್ಲಮ್ಮಾ, ಹುಡುಗನಿಗೆ ತುಂಬಾ ಎಳೇ ವಯಸ್ಸು.

ಗಜನಿಂಬೆ : ಹುಡುಗ ತುಂಬಾ ಒಳ್ಳೆಯವನು ಅಂದಿಯೇನು?

ಸಾಂಬ : ಒಳ್ಳೆಯವನೆ. ನಡತೆ ಸರಿಯಿಲ್ಲ.

ಗಜನಿಂಬೆ : ನಡತೆಗೇನಾಗಿದೆ? ನಿನ್ನೆ ನೋಡಿದೆ, ಚೆನ್ನಾಗೇ ನಡೀತಾನೆ, ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾನೆ


ಅಂದಿಯೇನು?

ಸಾಂಬ : ಚೆನ್ನಾಗೇನೋ ಇದಾನೆ. ನಿಲ್ಲೋ ಶೈಲಿ ಸರಿ ಇಲ್ಲ.

ಗಜನಿಂಬೆ : ಅದ್ಯಾಕೆ, ನೋಡು ಎಷ್ಟು ಚೆನ್ನಾಗಿ ನಿಂತ್ಕೊಂಡಿದಾನೆ.

ಸಾಂಬ : ಬಡವ ನೋಡಿ, ಮುಖ ಕೊಳಕಾಗಿದೆ.

ಗಜನಿಂಬೆ : ಅದ್ಯಾಕೆ? ಮುಖ ಎಷ್ಟು ಮುದ್ದಾಗಿದೆ ನೋಡೆ.


ಸಾಂಬ : (ಸ್ವಗತ) ಸಾಂಬ ಇನ್ನು ನಿನ್ನ ಆಟ ನಡೆಯೊದಿಲ್ಲ ಕಣೊ. ಶಿವ ಅವಳ ಮುನಸ್ಸಿನಲ್ಲಿ ನಟ್ಟುಬಿಟ್ಟಿದ್ದಾನೆ (ಪ್ರಕಾಶ)
ಅದೇನೋ ಸರಿ ತಾಯಿ ಅವನ ನಡತೆ, ನಲ್ಲೋ ಶೈಲಿ, ಅವನ ಮುಖ, ಅವನ ಬಡತನ ಎಲ್ಲ ಚೆನ್ನಾಗಿದೆ, ಆದ್ರೆ ಈಗ
ಮೂರು ದಿನದಿಂದ ಯಾವುದೋ ರೋಗ ಬಡಕೊಂಡಿದೆ, ಪಾಪ.

ಗಜನಿಂಬೆ : ರೋಗ? ಮೂರು ದಿನದಿಂದ?

ಸಾಂಬ : ಹೂ. ಯಾವಳೋ ಒಬ್ಬ ಚೆಲುವೇನ್ನ ನೋಡಿದನಂತೆ. ಆವಾಗಿನಿಂದ ತಂತಾನೆ ಮತಾಡಿಕೋತಾನೆ.


ಆಕಾಶದಕಡೆ ನೋಡತಾನೆ, ರಾತ್ರಿ ಎದ್ದೂ ಎದ್ದೂ ಬೀಳತಾನೆ. ಬಿದ್ದೂ ಬಿದ್ದೂ ಏಳತಾನೆ, ಬೆವರತಾನೆ, ನಡಗತಾನೆ.

ಗಜನಿಂಬೆ : (ನಗುತ್ತಾ) ಯಾವಳಂತೆ ಅವಳು?

ಸಾಂಬ : ಇದೇ ಊರವಳೆ!

ಗಜನಿಂಬೆ : ಹೌದಾ? ಯಾರವಳು?

ಸಾಂಬ : ಇದೇ ಗಲ್ಲಿಯವಳೇ?

ಗಜನಿಂಬೆ : ಹೌದಾ? ಯಾರವಳು?

ಸಾಂಬ : ಈ ಮನೆಯವಳೆ!

ಗಜನಿಂಬೆ : ಏನು, ಈ ಮನೆಯೋಳಾ? ಏನಂತೆ ಅವಳ ಹೆಸರು?

ಸಾಂಬ :
        ಅಜದಂಥ ದೇಹ
        ಗಜದಂಥ ನಡಿಗೆ
        ಮಜ ಮಾಡೋನು ಬಾರೆ ಅಂದ್ರೆ
        ಸಜ ಕೊಡ್ತಾಳೆ ಗಜನಿಂಬೆ–ಅಂತಾನೆ!

ಗಜನಿಂಬೆ : (ನಗುತ್ತಾ) ಎಲ್ಲಾ ಸುಳ್ಳು.

ಸಾಂಬ : ಸುಳ್ಳು ಯಾಕೆ ಹೇಳ್ಳಿ ತಾಯಿ. ಅವನೇ ನಿನ್ನ ಹತ್ರ ನನ್ನನ್ನು ಕಳಿಸಿದ. ನೀನು ಏನಾರ ಅವನ್ನ ಪ್ರೀತಿ
ಮಾಡೋದಿಲ್ಲ ಅಂದ್ರೆ ಹುಡುಗ ಸತ್ಹೋಗತಾನೆ. ಸುಮ್ ಸುಮ್ನೆ ಸಾಯ್ತಾನಲ್ಲ ಎಳೆ ಹುಡುಗಾ ಅಂತ ದಯಮಾಡಿ ಬಂದೆ.
ನಿನಗೆ ಆ ಹುಡುಗ ಬೇಕಂದ್ರೆ ನಿಮ್ಮದ ಮನೇಲಿ ನನಗೊಂದು ಕೆಲಸ ಕೊಡಿಸು.

ಗಜನಿಂಬೆ : ಅಮ್ಮ ಬರಲಿ ತಾಳೆ. ನೋಡೆ : ಹಾಳಾದ್ದು ಆ ಕತ್ತೆ ಮೇಲೆ ಕೈ ಊರತಾನೆ. ನೋಡು, ಅವರ ಬೆನ್ನಮೇಲೆ
ಕೈಯಾಡಿಸ್ತಾನೆ! ಥೂ ಅಲ್ಲಿ ನೋಡೇ ಅದರ ಮೂತಿ ಹತ್ತರ ಮುಖ ಒಯ್ದು ಏನೇನೋ ಹೇಳತಾನೆ. ನಾನೇ ಕತ್ತೆ ಆಗಿ
ಹುಟ್ಟಬಾರದಿತ್ತೆ ಅನ್ನಿಸುತ್ತೆ. ಬಂಗಾರೀ, ಈ ಅಯೋಗ್ಯ ಹೀಗೆಲ್ಲ ಒಂದು ಕತ್ತೆ ಮಾಡಬಹುದೇನೆ. ಈತನಿಗೋಸ್ಕರ
ಮೂರು ದಿನದಿಂದ ನಿದ್ದೆ ಮಾಡಿಲ್ಲ ನಾನು, ಗೊತ್ತ?

ಸಾಂಬ : ಅಯ್ಯೋ ಪಾಪ.

ಗಜನಿಂಬೆ : ಬಂಗಾರಿ ಅವನನ್ನ ಸಿಕ್ಕಾಪಟ್ಟೆ ಯದ್ವಾತದ್ವಾ ಬಯ್ಯೆ.

ಸಾಂಬ : ಯಾಕ್ರಮ್ಮ?
ಗಜನಿಂಬೆ : ನೀನು ಬಯ್ಯಿ. ಅಂದ್ರೆ ಅವನ ಬಗ್ಗೆ ನನಗೆ ತಿರಸ್ಕಾರ ಭಾವನೆ ಹುಟ್ಟುತ್ತೆ. ಆಗ ನಾನು ಆರಾಮ ನಿದ್ದೆ
ಮಾಡತೀನಿ.

ಸಾಂಬ : ಬಯ್ಯಬೇಕಾ?

ಗಜನಿಂಬೆ : ಬಯ್ಯೆ ಅಂದ್ರೆ.

ಸಾಂಬ : ಛೇ ಛೇ, ಮನುಷ್ಯನಾ ಅವನು? ಕೋತಿ! ಕೋತಿ! ಎಷ್ಟೊಂದು ಕೋತಿಗಳಿಲ್ಲ ಈ ಜಗತ್ತಿನಲ್ಲಿ! ಈತನದೇನು
ಮಹಾ ವಿಶೇಷ? ನೀವು ಇನ್ನೊಂದು ಕೋತಿ ಆರಿಸಿಕೊಳ್ಳಿ ಅಮ್ಮಾ.

ಗಜನಿಂಬೆ : ಆ ಇನ್ನೊಂದು ಕೋತಿ ಇಷ್ಟು ಚಂದ ಇರಬೇಕಲ್ಲೆ?

ಸಾಂಬ : ಛೇ, ಅವನ ಮುಸಡಿ ನೋಡಮ್ಮ ಎಷ್ಟು ಕೊಳಕಾಗಿದೆ ನನ್ಮಗಂದು.

ಗಜನಿಂಬೆ : ಆದ್ರೆ ಆ ಮುಖ ತುಂಬಾ ಮುದ್ದಾಗಿದೆ ಅಲ್ವಾ?

ಸಾಂಬ : ಬರೀ ಕಿಸಕಿಸ ಹಲ್ಕಿಸೀತಾನೆ.

ಗಜನಿಂಬೆ : ಹೌದು ಥೇಟ್ ತುಂಟ ಕೃಷ್ಣನ ಹಾಗೆ!

ಸಾಂಬ : ಥೂ ಆ ಕಣ್ಣು ನೋಡಮ್ಮ ಕವಳಿ ಹಣ್ಣಾಗಿವೆ ಅಂದ್ರೆ.

ಗಜನಿಂಬೆ : ಆದ್ರೆ ಫಳಫಳ ಹೊಳೆಯುತ್ತಿವೆ.

ಸಾಂಬ : ಅವನ ತುಟಿ ಥೂ ನೋಡಾಕಾಗೋದಿಲ್ಲ!

ಗಜನಿಂಬೆ : ಹೌದು. ತಕ್ಷಣ ಮುದ್ದು ಕೊಡೋನ ಅನ್ನಿಸುತ್ತೆ.

ಸಾಂಬ : ನಾ ಹೇಳಿದ್ದಕ್ಕೆಲ್ಲಾ ನೀನು ರಿವರ್ಸ್‌ಗೇರ ಹಾಕಿದರೆ ನಾ ಬೈದೇನು ಪ್ರಯೋಜನ? (ಗೋದಾವರಿ ಬರುವಳು)

ಗೋದಾವರಿ : ‘ಏ ಗಜನಿಂಬೆ’ ಸಾವಿರ ಬಾರಿ ಹೇಳೀನಿ. ಆ ಕಿಟಕಿ ಹತ್ತರ ನಿಲ್ಲಬೇಡಂತ. ಇನ್ನೊಂದು ಸಾರಿ ಆ ಕಿಟಕೀಲಿ
ನಿಂತು ಹಾದಿ ಬೀದಿ ನಾಯಿಗಳನ್ನು ನೀ ನೋಡಿದರೆ ಆ ನಾಯೀಕಾಲು ಮುರೀತೀನಿ, ಹುಷಾರ್.

ಸಾಂಬ : ಅವಳೂ ದೊಡ್ಡೋಳಾಗಿದಾಳೆ – ನೋಡಬೇಕಾದ್ದು ನೋಡಬಾರದ್ದು ಎಲ್ಲಾ ತಿಳೀತದೆ ಬುಡಿ.

ಗೋದಾವರಿ : ಇನ್ನೂ ಬುದ್ದೀ ಹಲ್ಲು ಮೂಡಿಲ್ಲ, ದೊಡ್ಡೋಳಂತೆ. ಅಂದಹಗೆ, ಇವಳ್ಯಾರೆ ಹೊಸಬಳು?

ಗಜನಿಂಬೆ : ಮನೆಗೆಲಸಕ್ಕೆ ಹೆಣ್ಣಾಳು ಬೇಕಂತಿದ್ದೆಯಲ್ಲ, ಬಂದಿದಾಳೆ.

ಗೋದಾವರಿ : ಕೆಲಸದವಳೂ ಬೇಡ, ಗಿಲಸದವಳೂ ಬೇಡ. ತೊಲೆ ತುಂಡಿನಂಥಾ ಇಬ್ಬರು ಹೆಂಗಸರು ಮನೇಲಿದ್ದೀವಿ.
ಕೆಲಸದವಳು ಬೇರೆ ದಂಡ!

ಗಜನಿಂಬೆ : ನೀನೇ ಹೇಳಿದ್ದೆಯಲ್ಲವಮ್ಮ ಬೇಕಂತ.

ಗೋದಾವರಿ : ಆಗ ಹೇಳಿದ್ದೆ. ಈಗ ಬೇಡಾ ಅನಸತ್ತೆ.


ಗಜನಿಂಬೆ : ಕೆಲಸ ಚೆನ್ನಾಗಿ ಮಾಡ್ತಾಳೆ ತಗೊಳಮ್ಮಾ ಅಂದ್ರೆ.

ಗೋದಾವರಿ : ಸರಿ, ನಿನ್ನ ಶಿಫಾರಸು ಬೇರೆ! ಎಷ್ಟು ಸಂಬಳ ಕೊಡಬೇಕೆ?

ಸಾಂಬ : ಹತ್ತೇ ರೂಪಾಯಿ.

ಗೋದಾವರಿ : ಹತ್ತು ರೂಪಾಯಿ! ಎಷ್ಟು ವರ್ಷಕ್ಕೆ?

ಸಾಂಬ : ಒಂದು ತಿಂಗಳಿಗೆ.

ಗೋದಾವರಿ : ರಾಜರಿಗೂ ಇಷ್ಟು ಸಂಬಳ ಸಿಗುತ್ತೋ ಇಲ್ಲವೋ? ಏನೇನ್ ಕೆಲಸ ಮಾಡ್ತೀಯೆ?

ಸಾಂಬ : ತೊಳೀತೀನಿ, ಬೆಳಗತೀನಿ, ಗುಡಸ್ತೀನಿ, ಒಗೀತೀನಿ, ಹಾಸತೀನಿ, ಹೊಚ್ಚತ್ತೀನಿ, ತಿಂತೀನಿ, ಕುಡೀತೀನಿ,


ಮಲಗತೀನಿ.

ಗೋದಾವರಿ : ಅಯ್ಯಯ್ಯಯ್ಯ…. ಎಷ್ಟು ಮಾತಾಡತೀಯೆ? ನಮ್ಮ ಮನೇಲಿ ಕೆಲಸ ಮಾಡೋದಾದರೆ


ಬಾಯ್ಮುಚ್ಚಿಕೊಂಡಿರಬೇಕು ಅಷ್ಟೆ. ಬಾ, ಕೆಲಸ ತೋರಿಸತೀನಿ. (ಹೋರಡುವರು. ಅಷ್ಟರಲ್ಲಿ ಸಾಹುಕಾರ ಬರುವನು.)

ಸಾವ್ಕಾರ : ಅಬ್ಬಾ! ಹೊರಗಡೆ ಒಂದು ಕತ್ತೆ ನಿಂತಿದೆ ನೋಡೆ! ಒಳ್ಳೆ ಕುದರೆ ಥರಾ ಇದೆ.

ಗೋದಾವರಿ : ನಿಮ್ಮನ್ನ ನೋಡಿದ ಮೇಲೆ ಕತ್ತೆ ನೋಡೋದೇನ್ರಿ?

ಸಾವ್ಕಾರ : ನನಗಿಂತ ಚೆನ್ನಗಿದೆ ಕಣೆ! ನೋಡು ಬಾ.(ಎಲ್ಲರೂ ಕಿಟಕಿ ಹತ್ತಿರ ಹೋಗಿ ನೋಡುವರು)

ಗೋದಾವರಿ : ಅರೆ ಹೌದಲ್ರೀ! ಫಳಫಳ ಹೊಳೀತಿದೆ! ಅಮ್ಮಮ್ಮಮ್ಮಮ್ಮಾ…. ಅದರ ಕಿವಿ ಏನು! ಕಾಳೇನು!
ಮೈಯೇನು!

ಸಾವ್ಕಾರ : ಎಷ್ಟಗಲ! ಎಷ್ಟುದ್ದ! ಎಷ್ಟೆತ್ತರ! ಎಷ್ಟು ಆಳ!

ಗೋದಾವರಿ : ಇನ್ನೂ ತನಕ ನಾನಿಂಥ ಕತ್ತೆ ನೋಡಿರಲಿಲ್ಲಾರಿ! ಎಲ್ಲಿ ಸಿಕ್ಕಿತು ನಿಮಗೆ?

ಸಾವ್ಕಾರ : ನೀನೊಬ್ಬಳು! ನಮ್ಮನೆ ಹಿತ್ತಲಲ್ಲಿ ನಿಂತಿದೆ; ನೋಡಿದೆ ಅಷ್ಟೆ.

ಗೋದಾವರಿ : ಆ ಹುಡುಗ ಅಲ್ಲಿ ನಿಂತಿದ್ದಾನಲ್ಲಾ. ಯಾರವನು?


(ಕತ್ತೆ ಒದರುತ್ತದೆ. ಸಾಂಬ, ಗಜನಿಂಬೆಗೆ ಸನ್ನೆಯಲ್ಲಿ ಹೊರಗಡೆ ಹೋಗುವಂತೆ ಹೇಳುತ್ತಾನೆ.)

ಗೋದಾವರಿ : ಅಬ್ಬಾ! ಏನ್ ಚೆನ್ನಾಗಿ ಒದರುತ್ತೆ ನೋಡಿ ಅಂದ್ರೆ!

ಸಾವ್ಕಾರ : ನೀನು ಹೇಳೋ ದೆವರ ನಾಮಕ್ಕಿಂಥ ಚೆನ್ನಾಗಿದೆ ಅಲ್ವೆ?

ಗೋದಾವರಿ : ಸರಿ, ಗಜನಿಂಬೆ ನೀನು ಸಂಗೀತದ ಪಾಠ ನೋಡಿಕೋ ಹೋಗು.

ಸಾಂಬ : ಅದ್ಯಾಕೆ, ಹಿತ್ತಲಲ್ಲಿ ನಿಂತುಕೊಂಡು ಕತ್ತೆ ಹಾಡು ಕೇಳಿಸಿಕೊಳ್ಳಲಿ ಬಿಡಿ. ಹೆಂಗೂ ಪುಗುಸಾಟೆ ಹಾಡ್ತಾ ಇದೆ.
(ಸಮಯ ಸಾಧಿಸಿ ಗಜನಿಂಬೆ ಹೋಗುವಳು. ಬಂಗಾರಿಯನ್ನು ಸಾವ್ಕಾರ ಗಮನಿಸಿ)

ಸಾವ್ಕಾರ : ಪರವಾಗಿಲ್ಲವೆ ಇವಳ್ಯಾರು?


ಗೋದಾವರಿ : ಕೆಲಸದವಳು.

ಸಾವ್ಕಾರ : ನೋಡೋದಕ್ಕೆ ಚೆನ್ನಾಗಿದಾಳೆ. ಮೂರು ಮಾತ್ರ ಸ್ವಲ್ಪ….

ಸಾಂಬ : ಮೂಗಿನಿಂದ ಕೆಲಸ ಮಾಡೋದಿಲ್ಲ ನಾನು. ಕೈಯಿಂದ ಮಾಡತೀನಿ.

ಗೋದಾವರಿ : ರೀ ನಿನ್ನೆ ಹನ್ನೆರಡು ಪೈಸ ಕಮ್ಮಿ ಬಂದಿತ್ತಲ್ಲ ಲೆಕ್ಕದಲ್ಲಿ, ಸರಿ ಹೋಯ್ತಾ ಅದು?

ಸಾವ್ಕಾರ : ಇನ್ನೂ ಇಲ್ಲ, ಮಾಡತೀನಿ.

ಗೋದಾವರಿ : ಹೋಗಿ ಮತ್ತೆ. ಬಾಯಿ ತೆರೆಕೊಂಡು ಬಂದ್ರು! ಬಾರೆ. (ಇಬ್ಬರೂ ಹೋಗುವರು. ಹೋದ ಹಾಗೇ ಹಿಂದೆ
ಹಿಂದೆ ಸರಿಯುತ್ತಾ ಬರುವರು. ಅವರ ಮುಂದುಗಡೆಯಿಮದ ಕಾರಭಾರಿ ಬರುವನು. ಸಾಂಬನನ್ನು ನೋಡಿ ಅವನಿಗೆ
ಆನಂದೋದ್ರೇಕವಾಗಿದೆ. ಸಾಂಬ ಗೋದಾವರಿ ಹೆದರಿದ್ದಾರೆ.)

ಗೋದಾವರಿ : ರೀ ರೀ ಯಾರೋ ಬಂದಿದಾರೆ ನೋಡಿ ಅಂದ್ರೆ.

ಕಾರಭಾರಿ : ಹಸಿರು ಸೀರೆ, ನೀಲಿ ರವಕೆ! ಹಸಿರು ಸೀರೆ, ನೀಲಿ ರವಕೆ! (ತನ್ನ ಭುಜ ತಾನೆ ತಟ್ಟಿಕೊಳ್ಳುತ್ತಾ) ಭಲೇ
ಕಾರಭಾರಿ. ಕೊನೆಗೂ ಗೆದ್ದೆ ನನ್ಮಗನೆ.

ಸಾವ್ಕಾರ : (ಓಡಿಬಂದು ಭೀತನಾಗಿ ನಡುಗುತ್ತಾ) ಅರರೆ ಕಾರಭಾರಿಗಳು! ಬನ್ನಿ ಸ್ವಾಮಿ! ಲೇ ಲೇ ತಿಂಡಿ ಕಾಫಿ, ಊಟ,
ಉಪ್ಪು ಹುಳಿ ಖಾರ ಎಲ್ಲ ತಂದುಕೊಡೆ. ಬನ್ನಿ ಸ್ವಾಮಿ.

ಕಾರಭಾರಿ : ಹಹಹಹ ಹಸಿರು ಸೀರೆ! ನೀಲಿ ರವಕೆ!

ಸಾವ್ಕಾರ : ಇವಳು ನಮ್ಮನೆ….

ಕಾರಭಾರಿ : ಗೊತ್ತು, ಗೊತ್ತು.

ಸಾವ್ಕಾರ : ಇವತ್ತೆ ಇವಳು ನಮ್ಮನೇಗೆ ಬಂದದ್ದು.

ಕಾರಭಾರಿ : ವಿಷಯ ನನಗ್ಗೊತ್ತು.

ಸಾವ್ಕಾರ : ನನ್ಹೆಂಡ್ತಿ ಪಾದ ಮುಟ್ಟಿ ಹೇಳ್ತೀನಿ ಸ್ವಾಮಿ : ನಾನೆಂದೂ ರಾಜದ್ರೋಹ ಮಾಡಿದೋನಲ್ಲ. ಕನಸು
ಮನಸಿನಲ್ಲೂ ಕ್ರಾಂತಿ ವಿಚಾರ ಮಾಡಿದವನಲ್ಲ.

ಗೋದಾವರಿ : ಅಯ್ಯಯ್ಯಯ್ಯಯ್ಯೋ ನಿನ್ನೆ ಕನಸಿನಲ್ಲಿ ನಾನು ನಮ್ಮ ರಾಜರ ಪಾದಕ್ಕೆ ಮುದ್ದು ಕೊಡಲಿಲ್ವಾ?

ಸಾವ್ಕಾರ : ಹೌದು, ಹೌದು ಅವಳ ಜೊತೆ ನಾನೂ ಇದ್ದೆ. ನಾನೇ ಸಾಕ್ಷಿ ಸ್ವಾಮಿ…. ಆಮೇಲೆ ನಾನು ಅವರ ಬೂಟು
ನೆಕ್ಕಲಿಲ್ಲವೇನೆ?

ಗೋದಾವರಿ : ಹೌದು, ಹೌದು.

ಸಾವ್ಕಾರ : ನಾನು ಇಲ್ಲೀತನಕ ಯಾವ ಕ್ರಾಂತಿಗೂ ಚಂದಾ ಹಣ ಕೊಟ್ಟಿಲ್ಲ ಸ್ವಾಮಿ. ಹಸಿರು ಹಳದಿ ಬಿಳಿ ಕೆಂಪು ಕರಿದು
ಯಾವುದೇ ಕಲರನ ಕ್ರಾಂತಿಕಾರಿಗಳಿಗೂ ಚಂದಾ ಹಣ ಕೊಟ್ಟಿಲ್ಲಾ ಅಂದರೆ….

ಕಾರಭಾರಿ : ಅಚ್ಚಾ!
ಸಾವ್ಕಾರ : ಅಷ್ಟೇ ಅಲ್ಲ. ನನ್ನ ಸ್ನೇಹಿತರಿಂದಲೂ ಕೊಡಿಸಿಲ್ಲ ಸ್ವಾಮಿ. ಆ ಕ್ರಾಂತಿಕಾರಿಗಳು ನೀವು ಹತ್ತು ಪೈಸೆ ಆದರೂ
ಕೊಡಿ ಸ್ವಾಮಿ ಅಂತ ಅಂಗಲಾಚಿದರು. ನಾನೇನಂದೆ ಗೊತ್ತಾ ಸ್ವಾಮಿ? ಕಳ್ಳನನ ಮಕ್ಕಳ್ರಾ ನನ್ನ ಪ್ರಾಣ ಹೋದರೂ
ನಿಮಗೆ ಐದು ಪೈಸೆ ಕೊಡೋದಿಲ್ಲ – ಅಂದೆ ಸ್ವಾಮಿ.

ಕಾರಭಾರಿ : (ಇಲ್ಲೀತನಕ ತದೇಕ ಚಿತ್ತದಿಂದ ಚಿತ್ತದಿಂದ ಸಾಂಬನನ್ನೇ ನೋಡುತ್ತಿದ್ದ ಕಾರಭಾರಿ ತಕ್ಷಣ ರಮ್ಯ
ನಾಯಕನಂತೆ ಹಾಡತೊಡಗುತ್ತಾನೆ)

ಕಂಡೆ ಕಂಡೆ ಕಂಡೇನೊ ಚೆಲುವೆಯ


ಕಣ್ಣೀನ ಮದಿರೆಯ
ಓಹೊ ಅದೇ ಹಸಿರು ಸೀರೆ
ಆಹಾ ಅದೇ ನೀಲಿ ರವಿಕೆ
ಸೀರೆ ಹಸಿರಿನ
ರವಿಕೆ ನೀಲಿಯ
ಕಲರು ಬಿಳಿಯ ಚೆಲುವೆ
ಇವಳೆ ರಾಜ ಕಂಡ ಚೆಲುವೆ

ಸಾವ್ಕಾರ್ರೇ, ನಿಮ್ಮ ಬಗ್ಗೆ ನಾನು ರಾಜರೂ ಎಷ್ಟು ಮಾತಾಡಿಕೊಂಡಿವಿ ಗೊತ್ತಾ?

ಗೋದಾವರಿ : ನಮ್ಮ ಬಗ್ಗೆ?

ಕಾರಭಾರಿ : (ಸಾಂಬನನ್ನು ತೋರಿಸುತ್ತಾ) ಇವಳ ಬಗ್ಗೆ ಅಂದ್ಕೊಳ್ಳಿ.

ಸಾವ್ಕಾರ : ಏನು ಸ್ವಾಮಿ?

ಕಾರಭಾರಿ : ಗಾಬರಿ ಆಗಬೇಡಿ ಸಾವ್ಕಾರೇ, ನಿಮ್ಮನನ್ನ ಬಯ್ತಾ ಇಲ್ಲ. ನಿಮ್ಮ ಮನೆ ಕದ ತಾನಾಗೇ ತಟ್ಟಿ ಎಂಥಾ
ಸುದೈವ ಒಳಗಡೆ ಬರತ್ತಾ ಇದೆ ನೋಡಿ. ಏನಮ್ಮಾ ನಿನ್ನ ಹೆಸರು?

ಸಾಂಬ : ಬಂಗಾರಿ,

ಕಾರಭಾರಿ : ತಕ್ಕ ರೂಪ ತಕ್ಕ ಹೆಸರು. ರಾಜರ ಎದೆ ಢವ ಢವ ಹೊಡಕೊಳ್ಳೋದು ಅಂದರೆ ಹುಡುಗಾಟವಾ?

ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೆಳಬಾರದೆ?

ಕಾರಭಾರಿ : ಹೆಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ!
ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.

ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೇಳಬಾರದೆ?

ಕಾರಭಾರಿ : ಹೇಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ!
ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.

ಸಾವ್ಕಾರ : ಅಂದರೆ….

ಕಾರಭಾರಿ : ಅದೆಲ್ಲಾ ಮಾಮೂಲಿ ಬಿಡಿ. ನಿಮ್ಮ ಮಗಳ ವಿಚಾರ ರಾಜರ ಹತ್ತಿರ ಮೊದಲು ಹೇಳಿದವನು ನಾನೇ ಸ್ವಾಮಿ.
ಬಂಗಾರಿ, ನೋಡ್ತಾ ಒರಿ. ಈ ಮನೆ ಬಂಗಾರದ್ದಾಗುತ್ತೆ!
ಸಾವ್ಕಾರ : ಸ್ವಾಮಿ ನನಗೆ ಹುಚ್ಚು ಹತ್ತೋಕ್ಮುಂಚೆ ಅದೇನು ವಿಷಯ ಹೇಳತೀರಾ?

ಕಾರಭಾರಿ : ಹೇಳೋಲ್ಲಾರೀ ಅದೇನ್ಮಾಡ್ತೀರಾ?

ಸಾವ್ಕಾರ : ಅಯ್ಯೋ ರಾಮರಾಮ.

ಗೋದಾವರಿ : (ಅಣಕಿಸುತ್ತಾ) ಅಯ್ಯೋ ಲಾಮಲಾಮ. ಸ್ಪಷ್ಟವಾಗಿ ಹೇಳಬಾರದೆ? ಕಾರಭಾರಿಗಳೇ ಇವಳು ನಮ್ಮ


ಮಗಳಲ್ಲ.

ಕಾರಭಾರಿ : ಮಗಳಲ್ಲಾ?

ಗೋದಾವರಿ : ಅಲ್ಲ, ನಮ್ಮ ಮನೆ ಆಳು.

ಕಾರಭಾರಿ : (ಚಕಿತನಾಗುವನು. ಈಗ ಅವನ ಕಣ್ಣಲ್ಲಿ ಅಸಹ್ಯ ಬೆಳಕಾಡುವುದು) ನೀವಿಬ್ಬರೂ ಆ ಕಿಟಕಿ ಹತ್ತಿರ ಇರಿ.
(ಇಬ್ಬರೂ ಹೋಗುವರು) ನೀನು ಮೊನ್ನೆ ಮದನೋತ್ಸವದಂದು ಉದ್ಯಾನವನಕ್ಕೆ ಹೋಗಿದ್ದೆಯೇನು?

ಸಾಂಬ : (ಅವಕಾಶ ಉಪಯೋಗಿಸುವುದಕ್ಕಾಗಿ ಸುಳ್ಳು ಹೊಸೆಯತೊಡಗುತ್ತಾನೆ) ಹೌದು ಸ್ವಾಮಿ.

ಕಾರಭಾರಿ : ಮೈಮೇಲೆ ಇದೇ ಸೀರೆ, ಇದೇ ರವಕೆ ಇತ್ತೆ?

ಸಾಂಬ : ಹೌದು ಸ್ವಾಮಿ.

ಕಾರಭಾರಿ : ಆ ದಿನ ನಿನ್ನನ್ನು ನೋಡಿ ಯಾರಾದರೂ ಪ್ರೇಮಪರವಶರಾದರೆ?

ಸಾಂಬ : ಒಬ್ಬರೇ, ಇಬ್ಬರೇ? ಅನೇಕರು ನನ್ನ ರೂಪರಾಶಿಯನ್ನು ಕಂಡು ಹುಚ್ಚರಾದದ್ದು ನಿಜ ಸ್ವಾಮಿ. ಅವರೇ ಇವರೇ
ಎಂದು ಹೇಗೆ ಹೇಳಲಿ?

ಕಾರಭಾರಿ : ಒಬ್ಬರು ವಯಸ್ಸಾದವರು ನಿನ್ನ ಕಡೆಗೆ ತಮ್ಮ ಪ್ರೇಮದ ನೋಟಗಳನ್ನು ಬೀರಿ ಪರವಶರಾದದ್ದು
ನೆನಪಿದೆಯೆ?

ಸಾಂಬ : ವಯಸ್ಸಾದವರು…. ಹೌದು…. ಅವರ ಮುಖದ ಮೇಲೆ ರಾಜಕಳೆ ಸುರಿ ಯುತ್ತಿತ್ತು,

ಕಾರಭಾರಿ : (ಆನಂದದಿಂದ) ಹೌದು ಆಮೇಲೆ?

ಸಾಂಬ : ಅವರು ನನ್ನನ್ನು ನೋಡಿ ಬಾಯಿ ತೆರೆದವರು ಮುಚ್ಚಲೇ ಇಲ್ಲ, ಈಗ ಅವರು ಬಾಯಿ ಮುಚ್ಚಿದ್ದಾರೆಯೇ ಸ್ವಾಮಿ?

ಕಾರಭಾರಿ : ಮುಗ್ಧ ಹೆಣ್ಣೆ, ನಿನ್ನ ಯೌವ್ವನದ ಬಲೆಯಲ್ಲಿ ಎಂಥಾ ದೊಡ್ಡ ಬೇಟೆ ಬಿದ್ದಿದೆಯೆಂಬ ಅರಿವು ನಿನಗಿಲ್ಲ! ಆ ದಿನ
ನಿನ್ನನ್ನು ನೋಡಿ ಮುಚ್ಚದ ಹಾಗೆ ಬಾಯಿ ತೆರೆದವರೇ ನಮ್ಮ ಮಹಾರಾಜರು!

ಸಾಂಬ : (ಆಘಾತವನ್ನು ಅನುಭವಿಸುತ್ತಾ) ಹಾಯ್! ಹಾಯ್!

ಗೋದಾವರಿ : (ಕಿಟಕಿ ಹೊರಗಡೆ ನೋಡುತ್ತ) ಅಯ್ಯಯ್ಯೋ ಆ ಹುಡುಗ ಗಜನಿಂಬೆಯ ಹತ್ತರತ್ತರಾನೇ ಬಂದು


ಮಾತನಾಡತಾನಲ್ರೀ, ನೋಡಿ ನೋಡಿ ಏ ಗಜನಿಂಬೇ ಹುಷಾರಾಗಿರೇ.

ಕಾರಭಾರಿ : ಯಾಕ್ರೀ ಕಿರಚುತೀರಿ? ಸುಮ್ಮನಿದ್ರೆ ಸರಿ. ಇಲ್ಲದಿದ್ದರೆ ಜೇಲಲ್ಲಿ ಕೊಳೀಬೇಕಾಗುತ್ತೆ, ಹೇಳಿರತೀನಿ.


(ಸಾಂಬನಿಗೆ ಮಾತ್ರ ಕೇಳಿಸುವಂತೆ) ಬಂಗಾರಿ ನಿನ್ನ ದೈವ ಖುಲಾಯಿಸಬಹುದು ನನ್ನ ಮಾತು ಕೇಳೋದಾದ್ರೆ.
ಸಾಂಬ : ಕೇಳೋದಿಲ್ಲ ಅಂದಿನಾ?

ಕಾರಭಾರಿ : ನನಗೆ ನಿನ್ನ ವಿಷಯ ತಿಳಿಯಬೇಕು.

ಸಾಂಬ : ಕೇಳೀ ಅಂದ್ರೆ. ಮದುವೆ ಆಗಿದೆಯೇ ಅಂತ ಕೇಳಿ….

ಕಾರಭಾರಿ : ಮದುವೆ ಆಗಿದೆಯೇ?

ಸಾಂಬ : ಅಯ್ಯೋ ಸ್ವಾಮೇರಾ, ನನ್ನ ಗಂಡ ಇದ್ದಿದ್ದರೆ ಈ ರೀತಿ ಬೀದಿ ಪಾಲಾಗತಿದ್ದಿನ? ಮಾರಾಯ ಲೋಕ ಬಿಟ್ಟು
ಹೊರಟೋದ ನೋಡಿ. ಬೀದಿ ನಾಯಿಗಳೆಲ್ಲಾ ನನ್ನ ಹೆಸರು ಕೇಳಿ ಕಾಲೆತ್ತಿದ್ದೇ ಎತ್ತಿದ್ದು. ನನ್ನ ಗಂಡ ಯಾಕೆ ಸತ್ತ ಅಂತ
ಕೇಳಿ.

ಕಾರಭಾರಿ : ನಿನ್ನ ಗಂಡ ಯಾಕೆ ಸತ್ತ?

ಸಾಂಬ : ನೀನೊಳ್ಳೆ ಗಂಟುಬಿದ್ದೆ. ಅವನ್ಯಾಕೆ ಸಾಯತಾನೆ, ನಾನೇ ಕೊಂದೆ.

ಕಾರಭಾರಿ : ಯಾಕೆ?

ಸಾಂಬ : ಬುಡು ಮಾರಾಯಾ ನೀನೊಳ್ಳೆ ಗಿರಾಕಿ. ಪಕ್ಕದ ಮನೆ ಹುಡುಗನೊಂದಿಗೆ ಏನೋ ಗುಟ್ಟಿನ ಯವಹಾರ
ಇಟ್ಟುಕೊಂಡಿದ್ದೆ. ಗಂಡನಿಗೆ ಗೊತ್ತಾಯಿತು.ಸುಮ್ಮನೆ ಯಾಕೆ ರಾದ್ಧಾಂತ ಅಂತ ನಾನೇ ನೇಣು ಹಾಕಿ ಕೊಂದುಬಿಟ್ಟೆ.
ಏನೇನು ಕೆಲಸ ಮಾಡ್ತಿ ಅಂತ ಕೇಳಲ್ವಾ?

ಕಾರಭಾರಿ : ಏನ ಕೆಲಸ ಮಾಡ್ತಿ?

ಸಾಂಬ : ಅದನ್ನೇ ಹೇಳೋಕೆ ಬಂದೆ. ಒಬ್ಬ ಬೇಕೂಫನ ಮನೇಲಿ ಕೆಲಸಕ್ಕಿದ್ದೆ. ನಿನ್ನಂಗೆ ತೆಳ್ಳಗೆ ಬೆಳ್ಳಗೆ ಸಂದಾಕಿದ್ದ.
ನಿನ್ನಂಗೇ ಅವನು ಏನು ಕೆಲಸ ಮಾಡತೀಯೆ ಅಂದ. ‘ನಗನಗತಾ ನೀ ಏನೇಳಿದರೂ ಮಾಡತೇನೆ (ಕಾರಬಾರಿಯ ಕೆನ್ನೆ
ಹಿಂಡುತ್ತಾ) ಆದರೆ ನೀ ನಗಬೇಕಷ್ಟೆ ಅಂದೆ’. ಇಂಗಂದು ನನ್ನ ಪಾಡಿಗೆ ನಾನು ಸುಮ್ಮನಿದ್ರೆ, ಬಂದವನೆ ಮುಂಗೈ ಹಿಡಿದು
‘ಬಂಗಾರಿ ನಿನಗೆ ಹಾಸಿಗೆ ಹಾಸಲಿಕ್ಕೆ ಬರತ್ತಾ’? ಅಂದ!

ಕಾರಭಾರಿ : (ಸಾಂಬನ ಮುಂಗೈ ಹಿಡಿದು) ನಾನೂ ಅದನ್ನೇ ಕೇಳತಾ ಇರೋದು: ಬಂಗಾರಿ ರಾಜರಿಗೆ ಹಾಸಿಗೆ
ಹಾಸಲಿಕ್ಕೆ ಒಪ್ಪಿಗೆ ಇದೆಯಾ?

ಸಾವ್ಕಾರ : ಸ್ವಾಮಿ, ಕರೆದಿರಾ?

ಗೋದಾವರಿ : ಅಯ್ಯಯ್ಯೋ, ಆ ಹುಡುಗ ನಮ್ಮ ಗಜನಿಂಬೆ ಕಿವೀಲಿ ಏನೋ ಹೇಳ್ತಿದಾನ್ರಿ. ನೋಡಿ ನೋಡಿ ಕಿವಿ
ಕಚ್ಚತಿದ್ದಾನೇಂದ್ರೆ.

ಸಾವ್ಕಾರ : ಲೇ ಗಜನಿಂಬೆ, ವಾಲೆ ಹುಷಾರು.

ಕಾರಭಾರಿ : ಬಾಯ್ಮುಚ್ಚರಿ. (ಸಾಂಬನಿಗೆ ಮಾತ್ರ ಕೇಳಿಸುವಂತೆ) ಬಂಗಾರಿ, ನೀನು ರಾಜರ ಹತ್ತಿರ ‘ನಾನು ಸಾವ್ಕಾರನ
ಮಗಳು’ ಅಂತ ಸುಳ್ಳು ಹೇಳಬೇಕು.

ಸಾಂಬ : ಓಹೋ.

ಕಾರಭಾರಿ : ರಾಜರು ನಿನಗೆ ಏನೇ ಬಹುಮಾನ ಕೊಟ್ಟರೂ, ಮುಕ್ಕಾಲು ಪಾಲು ನನಗೆ ಸಿಕ್ಕಬೇಕು.
ಸಾಂಬ : ಎಲ್ಲಾ ನೀವೇ ಇಟ್ಕಳ್ಳಿ.

ಕಾರಭಾರಿ : ರಾಜರಿಗೆ ಆಗಾಗ ನಾ ಹೇಳಿಕೊಟ್ಟ ಚಾಡಿಗಳನ್ನು ಹೇಳುತ್ತಿರಬೇಕು.

ಸಾಂಬ : ಓಹೋ.

ಗೋದಾವರಿ : ಅಯ್ಯಯ್ಯೋ ನೋಡಿ ನೋಡಿ, ತಬ್ಬಿಕೊಂಡು ಕೆನ್ನೆ ಕಚ್ಚತಿದ್ದಾನೆ. ಏ ಏ ಗಜನಿಂಬೆ-

ಕಾರಭಾರಿ : ಯೋ (ಎಂದು ಗದರಿಕೊಂಡು ಸಾಂಬನಿಗೆ ಮತ್ರ ಕೇಳಿಸುವಂತೆ) ಮಾತು ಪಕ್ಕಾ?

ಸಾಂಬ : ಪಕ್ಕಾ. ಆದರೆ ನಮ್ಮ ಭೇಟಿ ಇಲ್ಲಲ್ಲ, ಊರ ಹೊರಗೆ ಗಣೇಶನ ದೇವಸ್ಥಾನ ಇದೆಯಲ್ಲ, ಅಲ್ಲಿ.

ಕಾರಭಾರಿ : ಗಣೇಶನ ದೇವಸ್ಥಾನ ನೆಪ್ಪಿರಲಿ (ಕಂಡೆ ಕಂಡೆ ಎಂದು ಹಾಡುತ್ತಾ ಹೊಗುವನು.)


ಸಾಂಬಶಿವ ಪ್ರಹಸನ : ದೃಶ್ಯ – ೫
  (ಅರಮನೆ. ರಾಜ ಮತ್ತು ಮಂತ್ರಿ)

ರಾಜ : ಎಲಾ ಮಂತ್ರಿ,

ಮಂತ್ರಿ : ಮಹಾಪ್ರಭು ಯಾಕೆ ಕರೆದದ್ದು?

ರಾಜ : ನನ್ನ ದನಿ ಕೇಳಿಸುತ್ತಾ, ಇಲ್ಲವಾ ನೋಡೋಣ ಅಂತ ಕರೆದೆ.

ಮಂತ್ರಿ : ತಮ್ಮ ದನಿ ಕೇಳಿಸುತ್ತೆ. ಪ್ರಜೆಗಳ ದನಿ ಇನ್ನೂ ಜಾಸ್ತಿ ಕೇಳಿಸುತ್ತೆ ಪ್ರಭು.

ರಾಜ : ಅಯ್ಯಾ ಮಂತ್ರಿ ಹಿಂದಿನ ಕಾಲದ ರಾಜರು ತಮ್ಮ ದರ್ಬಾರನ್ನು ಹ್ಯಾಗೆ ಸುರು ಮಾಡುತ್ತಿದ್ದರು?

ಮಂತ್ರಿ : ಮಂತ್ರಿಗಳನ್ನು ಕರೆದು ರಾಜ್ಯದ ಯೋಗಕ್ಷೇಮವನ್ನು ಕೇಳುತ್ತಿದ್ದರು ಪ್ರಭು.

ರಾಜ : ಹೌದು, ಹೌದು, ಮೊನ್ನೆ ನಾಟಕದಲ್ಲಿ ಧರ್ಮರಾಯನ ದರ್ಬಾರು ಸುರು ಆದದ್ದು ಹಾಗೇ ಅಲ್ಲವೇ? ಎಲಾ
ಮಂತ್ರಿವರ್ಯನೇ, ನಮ್ಮ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿದ್ದು ದೇಶ ಸುಭಿಕ್ಷವಾಗಿದ್ದು ಪ್ರಜೆಗಳೆಲ್ಲ ಸ್ವಸಂತೋಷದಿಂದ
ನಿತ್ಯ ನಿರಂತರ ಕಣ್ಣು ಮುಚ್ಚಿ ಶವಧ್ಯಾನ ಮಾಡುತ್ತಿರುವರಲ್ಲವೆ?

ಮಂತ್ರಿ : ಹಾಗಿಲ್ಲ ಪ್ರಭು, ಪ್ರಜೆಗಳಲ್ಲಿ ಅಸಮಾಧಾನ ಕುದಿಯುತ್ತಿದೆ.

ರಾಜ : ನಾಟಕದ ಮಂತ್ರಿ ಹೀಗೆಲ್ಲ ಮಾತಾಡಲಿಲ್ಲ.

ಮಂತ್ರಿ : ತಾವು ನಾಟಕದ ರಾಜರೂ ಅಲ್ಲ, ಇದು ನಾಟಕವೂ ಅಲ್ಲ ಪ್ರಭು. ತಾವು ನಿಜವಾದ ರಾಜರು. ನಿಜವಾದ
ಪ್ರಜೆಗಳ ನಿಜವಾದ ನೋವಿನ ಕಡೆ ಗಮನ ಕೊಡಲೇಬೇಕು.

ರಾಜ : ಕೊಡತಾ ಇದ್ದೀನಲ್ಲಯ್ಯ. ಅದೇನಿದೆ ಒದರು.

ಮಂತ್ರಿ : ಮಹಾಪ್ರಭು ವಯಸ್ಸಿನಲ್ಲಿ ನಾನು ನಿಮಗಿಂತ ಚಿಕ್ಕವನು-

ರಾಜ : ಬುದ್ಧಿಯಲ್ಲಿ ಕೂಡ.

ಮಂತ್ರಿ : ದೇಶದ ಹಿತದೃಷ್ಟಿಯಿಂದ ಕೆಲವು ಅಪ್ರಿಯ ಸತ್ಯಗಳನ್ನು ನಿಮಗೆ ಹೇಳಲೇ ಬೇಕಾಗಿದೆ. ಕ್ಷಮಿಸಬೇಕು.

ರಾಜ : ಕ್ಷಮಿಸಿದ್ದೇನೆ ಅದೇನಿದೆ ಒದರಪ್ಪಾ ಅಂದರೆ, ಮಾತಿಗಿಂತ ಉಗುಳೇ ಜಾಸ್ತಿ ನಿನ್ನಲ್ಲಿ. ನನ್ನ ರಾಜ್ಯದಲ್ಲಿ
ಕಾಲಕಾಲಕ್ಕೆ ಸೂರ‍್ಯೋದಯ ಸೂರ್ಯಾಸ್ತವಾಗುತ್ತದೆ ಅಂತ ಬಿಳಿ ಅನೆ ಹೇಳಿದ, ಸರಿಯೋ?

ಮಂತ್ರಿ : ಪ್ರಭು, ತೆರಿಗೆ ಹೊರೆ ಜಾಸ್ತಿ ಆಗಿದೆ. ಕಳ್ಳಕಾರರ ಕಾಟ ಹೆಚ್ಚಗಿದೆ. ಮನೆ ಬೆಳೆ ಇಲ್ಲದೇ ಭ್ರಷ್ಟಾಚಾರ
ಸಮೃದ್ಧವಾಗಿದೆ.

ರಾಜ : ಲೇ ಮಂತ್ರಿ, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೆ ಅದಕ್ಕೆ ಹೊಣೆ ಯಾರು? ಮಂತ್ರಿಯಾಗಿ ನೀನು ನಿನ್ನ ಕೆಲಸ
ಸರಿಯಾಗಿ ಮಾಡಿಲ್ಲ ಅಂತಾಯ್ತು.
ಮಂತ್ರಿ : ಹ್ಯಾಗೆ ಸಾಧ್ಯ ಪ್ರಭು? ನಿಮಗಾಗಲಿ, ನಿಮ್ಮ ಬಿಳಿ ಆನೆಗಾಗಲಿ, ನನ್ನ ಮತ್ತು ಜನರ ಕಷ್ಟ ಸುಖ ತಿಳಿಯೋದಿಲ್ಲ.
ಸಕಾಲದಲ್ಲಿ ಎಚ್ಚರವಾಗದಿದ್ದರೆ ಅಪಾಯ ತಪ್ಪಿದ್ದಲ್ಲ ಪ್ರಭು. ಜನ ಒಂದಾಗುತ್ತಿದ್ದಾರೆ. ಕ್ರಾಂತಿ ಅಂತಿದ್ದಾರೆ.

ರಾಜ : ಕ್ರಾಂತಿ? ಸರ್ಕಾರದಿಂದ ನಾವೇ ಮೂರೋ ನಾಲ್ಕೋ ಕ್ರಾಂತಿ ಮಾಡಿಸಿದ್ದೀ ವಲ್ಲಪಾ?

ಮಂತ್ರಿ : ಸರ್ಕಾರದಿಂದ ?

ರಾಜ : ಹೌದು; ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ಹಳದಿ ಕ್ರಾಂತಿ, ಮಾಡಿಸಿದವರು ಯಾರು?

ಮಂತ್ರಿ : ನಿಮ್ಮ ಚೇಷ್ಟೆಗೆ ನಗೋವಷ್ಟು ಹಾಸ್ಯ ಪ್ರವೃತ್ತಿ ನನ್ನಲಿಲ್ಲ ಪ್ರಭು, ಜನರ ನೋವಿಗೆ ಅಧಿಕಾರಿಗಳ ದರ್ಪಕ್ಕೆ
ಕುರುಡನಾಗಿರೋದು ನನ್ನಿಂದಾಗೋದಿಲ್ಲ. ಈಗಲೂ ದಯವಿಟ್ಟು ನನ್ನ ಮಾತುಕೇಳಿ.

ರಾಜ : ಏನಯ್ಯಾ…. ನನಗೆ ಉಪದೇಶ ಕೊಡೋವಷ್ಟು ದೊಡ್ಡೋನಾದೇನು?

ಮಂತ್ರಿ : ಉಪದೇಶ ಅಲ್ಲ. ಖಂಡಿತ ಇದು ತುರ್ತಿನ ಪರಿಸ್ಥಿತಿ ಅನ್ನೋದನ್ನ ತಮಗೆ ಖಾತ್ರಿ ಮಾಡೋದಕ್ಕೆ ಪ್ರಯತ್ನ
ಮಾಡ್ತ ಇದ್ದೇನೆ. ಕ್ರಂತಿಯ ಎಲ್ಲ ಲಕ್ಷಣಗಳೂ ಈಗ ಗೋಚರವಾಗ್ತಿವೆ. ನಿಮ್ಮ ಕೊನೆಗಾಲ….

ರಾಜ : ಎಲಾ ಮಂತ್ರ, ನನ್ನ ಕಾಲಲ್ಲಿರೋ ಚಪ್ಲೀನೇ ನನಗೆ ಉಪದೇಶ ಹೇಳಲಿಕ್ಕೆ ಬಂದರೆ ನಾನೇನೋ ಮಾಡ್ತೀನಿ?

ಮಂತ್ರಿ : ಕಳಚಿ ಆಚೆ ಕಡೆ ಎಸೀತೀರಿ ಅಲ್ಲವ? ಇಕೋ ನನ್ನ ರಾಜೀನಾಮೆ (ರಾಜೀನಾಮೆಯನ್ನಿಟ್ಟು ಸರಸರನೆ
ಹೋಗುವನು)

ರಾಜ : ಎಲಾ ನನ ಮಗನೆ!

ಚಾರ : (ಬಂದು ನಮಸ್ಕರಿಸಿ) ಮಹಾಪ್ರಭು ಬಿಳಿ ಆನೆ ಬಂದವರೆ.

ರಾಜ : ಒಳಗೆ ಬಿಡು.

ಬಿಳಿ ಆನೆ : (ಬಂದು ನಮಸ್ಕರಿಸಿ) ಮಹಾಪ್ರಭುಗಳಿಗೆ ಜಯವಾಗಲಿ,

ರಾಜ : ಅಧೆಂಗರಿ ಜಯ ಆಗುತ್ತೆ? ಜನರಲ್ಲಿ ಅಸಮಾಧಾನ ಇದೆಯಂತೆ, ಕ್ರಾಂತಿ ಮಾಡತಾರಂತೆ? ನಿಮ್ಮನ್ನು ಕೇಳಿದರೆ
ಎಲ್ಲಾ ಚೆನ್ನಾಗಿದೆ ಅಂತೀರಾ….

ಬಿಳಿ ಆನೆ : ಮಹಾಪ್ರಭು, ತಾವು ಬೇಜಾರು ಮಾಡಿಕೊಬಾರದು. ಗುಪ್ತಬಾರರು ಈಗಷ್ಟೆ ಕಂಡು ಕೊಂಡ ವಿಚಾರವನ್ನ
ತಮ್ಮ ಕಿವಿಯಲ್ಲಿ ಹೇಳತೇನೆ, ದಯವಿಟ್ಟು ತಮ್ಮ ಕಿವಿ ಕೊಡಬೇಕು.

ರಾಜ : ಕೊಟ್ಟಿದ್ದೇನೆ, ಅದೇನು ಒದರಯ್ಯಾ.

ಬಿಳಿ ಆನೆ : ಪ್ರಭು, ಗುಪ್ತಚಾರರ ವರದಿ ಪ್ರಕಾರ ಮಹಾಮಂತ್ರಿಗಳೇ ಕ್ರಾಂತಿಯ ನಾಯಕರು.

ರಾಜ : ಏನು?

ಬಿಳಿ ಆನೆ : ಹೌದು ಪ್ರಭು. ಈ ಸಿಂಹಾಸನದ ಮೇಲೆ ಅವರ ಕಣ್ಣಿದೆ ಎನ್ನುವ ವಿಚಾರ ತಿಳಿದು ನಮಗೆಲ್ಲಾ ಅವರ ಬಗ್ಗೆ
ಕರುಣೆ ತಮ್ಮ ಬಗ್ಗೆ ಹೆಮ್ಮೆಯುಂಟಾದವು.
ರಾಜ : ಅಯ್ಯಾ ಬಿಳಿ ಆನೆ, ಯಾವುದಾದರೂ ನೆಪದಿಂದ ಆ ನನ್ನ ಮಗ ಮಂತ್ರೀನ್ನ ಜೇಲಿಗೆ
ಕಳಿಸೋದಾಕ್ಕಾಗೋದಿಲ್ಲವ?

ಬಿಳಿ ಆನೆ : ನೆಪ ಯಾಕೆ ಪ್ರಭು? ಅದಿಲ್ಲದೇ ತಮ್ಮ ಆಸೆ ಈಡೇರಿಸಲಿಕ್ಕೆ ನಾನಿಲ್ಲವೆ? ಆಯ್ತು ಬಿಡಿ. ಇವತ್ತು ಮಂತ್ರಿಗಳು
ಚೇಲಲ್ಲಿರುತ್ತಾರೆ. ಮೊನ್ನೆ ಬಂಗಾರಪೇಟೆ ಭಾಷಣದಲ್ಲಿ ಅವರ ಒಬ್ಬ ಶಿಷ್ಯ ಏನಂದನಂತೆ ಗೊತ್ತಾ ಪ್ರಭು; ಏನ್ರಿ….
ಒಬ್ಬೊಬ್ಬ ಬಿಳಿಆನೆಗೆ ಎಷ್ಟೆಷ್ಟು ಬಂಗಲೆಗಳಿವೆ ಗೊತ್ತಾ? -ಅಂದನಂತೆ; ಹೀಗೆಂದಾದರೂ ಅನ್ನಬಹುದೇ ಪ್ರಭು?

ರಾಜ : ಅನ್ನಬಹುದು.

ಬಿಳಿ ಆನೆ : ಪ್ರಭು, ಎಂಥ ಪ್ರಜೆಗಳಿರೋದರಿಂದ ತಮ್ಮಂಥ ರಾಜರಿದ್ದೀರಿ. ತಮ್ಮಂಥ ರಾಜರಿರೊದರಿಂದ ನಮ್ಮಂಥ
ಅಧಿಕಾರಿಗಳಿದ್ದೀವಿ. ನಮ್ಮಂಥ ಅಧಿಕಾರಿಗಳಿರೊದರಿಂದ ಈ ದೇಶ ಹೀಗಿದೆ. ನಾವೆ ಇಲ್ಲದಿದ್ದರೆ ಈ ದೇಶ ಹೀಗಿರುತ್ತಿತ್ತೆ,
ಪ್ರಭು? ಮಹಾಪ್ರಭುಗಳಾದ ತಮಗೆ ಅರಮನೆ ಇದೆ. ನಿಮ್ಮ ಸೇವಕರಾದ ನಮಗೆ ಒಂದೆರಡು ಚಿಕ್ಕ ಬಂಗಲೆಗಳಾದರೂ
ಬೇಡವೇ ಪ್ರಭು?

ರಾಜ : ಆದರೆ ನೀವು ಬಂಗಲೆ ಕಟ್ಟಿಸಿಕೊಂಡಲ್ಲಿ ಗುಡಿಸಲು ಇದ್ದುವಂತಲ್ಲಾ?

ಬಿಳಿ ಆನೆ : ಅದೇ ಮತ್ತೆ ಪ್ರೋಗ್ರೆಸ್ಸನ್ನೋದು – ಗುಡಿಸಲಿದ್ದಲ್ಲಿ ಬಂಗಲೆ ಬಂತೋ ಇಲ್ಲವೋ ಹೆಳಿ. ನಮ್ಮದು ಲಂಡನ್
ರಾಣಿಯ ಗುಲಾಮರ ನೇರ ಸಂತಾನ ಪ್ರಭು ಅದಕ್ಕೆ  ನಮ್ಮನ್ನು ಐ.ಎ.ಎಸ್. ಅನ್ನೋದು.

ರಾಜ : ಅದಾಯ್ತು, ನೀನೀಗ ಬಂದಿರೋ ವಿಚಾರ ಏಣು?

ಬಿಳಿ ಆನೆ : ಮಹಾಪ್ರಭು, ರಾಜ್ಯದಲ್ಲಿ ಕಳ್ಳತನದ ಕೇಸು ಜಾಸ್ತಿ ಆಗಿವೆ. ಇತ್ತೀಚಿನ ಎಂ.ವೈ.ಜಿ. ವರದಿ ಪ್ರಕಾರ ರಾಜ್ಯದ
ನಾಲ್ಕು ಕೋಟಿ ಪ್ರಜೆಗಳ ಪೈಕಿ ಮೂರು ಕೋಟಿ ತೊಂಭತೊಂಭತ್ತು ಸಾವಿರದಾ ಒಂಬೈನೂರ ತೊಂಭತ್ತೊಂಭತ್ತು ಜನ
ಕಳ್ಳರಿದ್ದಾರೆ ಅಂತ ಸಿದ್ದವಾಗಿದೆ.

ರಾಜ : ಅಂದರೆ ಆ ಉಳಿದ ಒಬ್ಬ ಯಾರು? ನಾನು ತಾನೆ?

ಬಿಳಿ ಆನೆ : ಖಂಡಿತ ಹೌದು ಪ್ರಭು.

ರಾಜ : ಹಾಗಾದರೆ ನೀನೂ ಕಳ್ಳ ಅಂತಾಯ್ತು.

ಬಿಳಿ ಆನೆ : ಅಂಕಿಸಂಖ್ಯೆ ಸ್ವಲ್ಪ ತಿದ್ದಿದ್ದಾರೆ ಪ್ರಭು. ಕೊನೇ ಅಂಕಿ ಒಂಭೈನೂರಾ ತೊಂಭತ್ತೆಂಟು ಅಂತಾ ಇದೆ. ಬೇಕಾದರೆ
ತಾವೇ ಪರಿಶೀಲಿಸಿ.

ರಾಜ : ನೀನೂ ಒಬ್ಬ ಕಳ್ಳ ಅಲ್ಲ ಅಂತಾಯ್ತು…. ಮುಂದೆ?

ಬಿಳಿ ಆನೆ : ಕಳ್ಳತನ ಕೆಟ್ಟದ್ದು ನಿಜ. ಹಾಗಂತ ಅದನ್ನ ಯಾರೂ ಬಿಡೋದಿಲ್ಲ. ಬಿಡಲಾರದ ವಿದ್ಯೆಯನ್ನು ಬಿಡಿಸೋದಕ್ಕೆ
ಯಾಕೆ ಪ್ರಯತ್ನ ಮಾಬೇಕು.

ರಾಜ : ನೀ ಹೇಳೋದೇನಯ್ಯ?

ಬಿಳಿ ಆನೆ : ಪ್ರಭು ಕಳ್ಳತನಕ್ಕೆ ಲೈಸನ್ಸ್ ಮಾಡಿದರೆ ಹೇಗೆ?

ರಾಜ : ಭಲೆ!
ಬಿಳಿ ಆನೆ : ಲೈಸನ್ಸಿಗೆ ಇಂತಿಷ್ಟು ಸರಕಾರಿ ದರ ಅಂತ ಹೇಳಿಬಿಟ್ಟರೆ ಎಲ್ಲರೂ ಲೈಸನ್ಸ್ ತೆಗೆಸ್ತಾರೆ. ಬೊಕ್ಕಸ ತುಂಬಿ
ತುಳುಕುತ್ತೆ….

ರಾಜ : ಹೌದು, ಹೊರಗಡೆ ಗಲಾಟೆ ಆಗ್ತಿದೆಯಲ್ಲ, ಯಾಕೆ?

ಬಿಳಿ ಆನೆ : ದೇಶದ ಪ್ರಜೆಗಳೆಲ್ಲಾ ಲೈಸನ್ಸ್ ತೆಗಿಸೋದಕ್ಕೆ ಕಾಯ್ತಾ ಇದ್ದಾರೆ ಪ್ರಭು; ಬೇಗನೆ ಸಹಿ ಹಾಕಿ.

ಚಾರ : ಮಹಾಪ್ರಭು ಹೊರಗೆ ಚಿಲ್ಲರೆ ಕಾಯ್ತಾ ಇದಾರೆ.

ರಾಜ : ಆಮೇಲೆ ಸಹಿ ಹಾಕೋಣ ಕಾದಿರು. ಚಿಲ್ಲರೆಯನ್ನು ಒಳಕ್ಕೆ ಬಿಡಯ್ಯ. (ಚಾರ ಹೋಗುವನು)

ಬಿಳಿ ಆನೆ : ಚಿಲ್ಲರೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಎನಂದರೂ ನಂಬಿಕಸ್ತನಲ್ಲ. ಹ್ಯಾಗೋ ತೇಲಿಸಿ ಮಾತಾಡಿ ಕಳಿಸಿಬಿಡಿ.
ಇನ್ನೊಂದು ವಿಚಾರ; ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ…. ಹೌದೆ ಪ್ರಭು? ಕೊಟ್ಟರೆ ತಗಂಡು ಬಿಡಿ,
ನೋಡಿಕೊಳ್ಳೋದಕ್ಕೆ ನಾನಿಲ್ಲವೆ? ಹೊರಗಡೆ ಕಾಯ್ತೇನೆ ಪ್ರಭು.
(ಹೊರಡುವನು. ದಾರಿಯಲ್ಲಿ ಚಿಲ್ಲರೆ ಸಿಗುವನು. ಬಿಳಿಆನೆ ಮೆಲ್ಲನೆ ಅವನ ಕಿವಿಯಲ್ಲಿ)

ಬಿಳಿ ಆನೆ : ನಮಸ್ಕಾರ…. ನಿಮ್ಮ ಬಗ್ಗೆ ರಾಜರ ಮುಂದೆ ಒಳ್ಳೆ ಮಾತಾಡಿದ್ದೀನಿ.

ಚಿಲ್ಲರೆ : ತುಂಬಾ ಉಪಕಾರವಾಯ್ತು.


(ಬಂದು ನಮಸ್ಕರಿಸಿ)
ಮಹಾಪ್ರಭುಗಳಿಗೆ ಜಯವಾಗಲಿ.

ರಾಜ : ನನ್ನ ಕಿವಿ ತಾನೇ ನಿನಗೆ ಬೇಕಾಗಿರೋದು?

ಚಿಲ್ಲರೆ : ಹೌದು ಪ್ರಭು.

ರಾಜ : ಛೆ, ನನ್ನ ಕಿವಿ ಒಂದು ಮೊಳ ಉದ್ದ ಇದ್ದಿದ್ದರೆ ಕೊಡೋದಕ್ಕೆ ಎಷ್ಟು ಅನುಕೂಲವಾಗುತ್ತಿತ್ತು? ಅಥವಾ ನಿಮ್ಮ
ಬಾಯಿಗೆ ಒಂದೊಂದು ಕಿವಿ ತುರುಕಿ ನನ್ನ ಪಾಡಿಗೆ ನಾನು ನಿದ್ದೆ ಮಾಡಬಹುದಿತ್ತು.

ಚಿಲ್ಲರೆ : ನಾವು ಕೇಳಿದಾಗಲೆಲ್ಲಾ ಉದಾರವಾಗಿ ಕಿವಿ ಕೊಟ್ಟದ್ದರಿಂದ ತಮ್ಮ ಕಿವಿ ಆಗಲೇ ಗೇಣುದ್ದ ಆಗಿವೆ ಪ್ರಭು.

ರಾಜ : ಹೌದ? ಹಾಗಿದ್ದರೆ ಇನ್ನಷ್ಟು ಉದ್ದ ಆಗಲಿ. ಅದೇನು ಹೇಳ್ತೀಯೋ ಹೇಳು.

ಚಿಲ್ಲರೆ : ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ ಹೌದೇ ಪ್ರಭು? ಕೊಟ್ಟರೆ ತಗಂಡು ಬಿಡಿ. ನೋಡಿಕೊಳ್ಳೋದಕ್ಕೆ
ನಾನಿಲ್ಲವೆ? ಅದೇನಿದ್ದರೂ ಬಿಳಿಆನೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಯಾಕೆಂದರೆ ನಂಬಿಕಸ್ತನಲ್ಲ, ಪಿತೂರಿಜನ.

ರಾಜ : ಹೊರಗಡೆ ಗಲಾಟೆ ಕೇಳಿಸುತ್ತಲ್ಲ, ಏನದು?

ಚಿಲ್ಲರೆ : ಕಲಾವಿದರೆಲ್ಲಾ ಸೇರಿ ತಮಗೆ ಜಯಕಾರ ಹೇಳುತ್ತಿದ್ದಾರೆ ಪ್ರಭು.

ರಾಜ : ಯಾಕೆ?

ಚಿಲ್ಲರೆ : ನಾನು ಈಗ ತೋರಿಸಲಿರುವ ಕಾಗದಕ್ಕೆ ತಾವು ಸಹಿ ಹಾಕಲಿದ್ದೀರಿ ಅದಕ್ಕೆ.

ರಾಜ : ಅದೇನಿದೆಯೋ ಹೇಳು ನೋಡೋಣ.


ಚಿಲ್ಲರೆ : ಪ್ರಭು, ಬಡವರ ಬಗೆಗಿನ ತಮ್ಮ ಕಾಳಜಿ ಇಡೀ ರಾಜಧಾನಿಯಲ್ಲಿ ಜಗತ್ ಪ್ರಸಿದ್ದವಾಗಿದೆ. ಬಡವರು
ಉದ್ಧಾರವಾಗಬೇಕು. ಅವರು ನಗುನಗುತ್ತ ಇರಬೇಕನ್ನೋದು ತಮ್ಮ ಗುರಿ ಅಲ್ಲವೇ ಪ್ರಭು?

ರಾಜ : ಅಲ್ಲವೇ ಮತ್ತೆ?

ಚಿಲ್ಲರೆ : ಇಕಾ ಬಡವರನ್ನ ನಗಿಸೋ ಯೋಜನೆ ತಯಾರು ಮಾಡಿದ್ದೇನೆ. ಸಹಿ ಹಾಕಿ ಪ್ರಭು.

ರಾಜ : ಹೆಂಗೆ ಹೆಳಯ್ಯಾ ಅಂದರೆ.

ಚಿಲ್ಲರೆ : ಹೀಗೆ ಪ್ರಭು; ಬಡವರನ್ನೆಲ್ಲಾ ಒಂದು ಬಯಲಲ್ಲಿ ಸೇರಿಸೋದು….

ರಾಜ : ಆಮೇಲೆ ಭಾಷಣಾ ಮಾಡೋದು ತಾನೆ?

ಚಿಲ್ಲರೆ : ಅಲ್ಲಲ್ಲ…. ಅಲ್ಲಿಗೆ ರಾಜ್ಯದ ಮಹಾನ್ ಕಲಾವಿದರು ಬುಟ್ಟಿತಗೊಂಡು ಹೋಗುತ್ತಾರೆ. ನೋಡಿದರೆ ಬುಟ್ಟಿತುಂಬಾ
ರೊಟ್ಟಿ; ಆಮೇಲೆ ಆ ಕಲಾವಿದರೂ ಬಡವರ ಎದುರಿನಲ್ಲೇ ರೊಟ್ಟಿ ತಿಂತಾರೆ; ಆಹಾ ರುಚಿ ಅಂತಾರೆ, ಬಡವರು ಕೋಪ
ತಾಪ ಹಸಿವು ಅಂತಾರೆ- ಇವರು ತಿಂತಾರೆ, ಅವರು ನೋಡುತ್ತಾರೆ. ಅವರು ನೋಡುತ್ತಾರೆ-ಇವರು ತಿಂತಾರೆ. ಕೊನೆಗೆ
ನೋಡಿದರೆ ಬುಟ್ಟಿ ತುಂಬಾ ಇರೋದು ರಟ್ಟಿನ ರೊಟ್ಟಿ; ಅರೆ, ರಟ್ಟಿನ ರೊಟ್ಟೀನ ನಿಜವಾದ ರೊಟ್ಟೀ ಹಾಗೆ ತಿಂದರಲ್ಲ!
ಅಂತ ಜನ ಹೋ ಅಂತ ಚಪ್ಪಾಳೆ ತಟ್ಟಿ ನಗುತ್ತಾರೆ.

ರಾಜ : ಜನ ನಗುತ್ತಾರೆ ಅಂತೀಯಾ?

ಚಿಲ್ಲರೆ : ಪ್ರಯೋಗ ಮಾಡಿ ನೋಡಿ ಹೇಳತ್ತಿದ್ದೇನೆ ಪ್ರಭು.

ರಾಜ : ಜನ ನಕ್ಕರ?

ಚಿಲ್ಲರೆ : ಬಿದ್ದೂ, ಬಿದ್ದು ನಕ್ಕರು ಪ್ರಭು; ಕೆಲವರಂತೂ ಬಿದ್ದವರು ಏಳಲೇ ಇಲ್ಲ. ಒಂದು ಬಾರಿಯಂತೂ ಎಲ್ಲಾ ಬಡವರು
ಈಗಷ್ಟೇ ಹುಚ್ಚಾಸ್ಪತ್ರೆಯಿಂದ ಓಡಿ ಬಂದವರ ಹಾಗೆ ನಗುತ್ತಿದ್ದರು. ಯಾಕಪ್ಪಾ ಹೀಗೆ ಅಂತ ನೋಡಿದರೆ, ಕೆಲವು
ಕಲಾವಿದರು ರಟ್ಟಿನ ರೊಟ್ಟಿ ತಿಂದಹಾಗೆ ಮಣ್ಣು ತಿಂದೂ ತಿಂದೂ ಬಡವರನ್ನ ನಗಿಸ್ತಾ ಇದ್ರು ಪ್ರಭು.

ರಾಜ : ಭೇಷ್, ಒಳ್ಳೆ ಯೋಜನೆ, ನಿಮ್ಮಂಥ ಅಧಿಕಾರಿಗಳನ್ನು ಪಡೆದ ಈ ದೇಶವೇ ಧನ್ಯ; ಎಂಥೆಂಥಾ ತಲೆಗಳಪ್ಪಾ
ನಿಮ್ಮದು; ಛೇ, ನಿಮ್ಮ ತಲೆ ಹಿಡಿಯೋ ಯೋಗ್ಯತೇನೂ ಇಲ್ಲವೇ ನಮ್ಮ ಜನಕ್ಕೆ;
(ಹೊರಗಡೆ ಗಲಾಟೆ ಜಾಸ್ತಿ ಆಗುತ್ತಲೇ ಇದೆ. ಚಾರ ಓಡಿಬರುವನು)

ಚಾರ : ಪ್ರಭು, ಹೊರಗಡೆ ಜನ ಜಮಾಯಿಸಿ ತಮ್ಮನ್ನು ಅರ್ಜಂಟಾಗಿ ನೋಡಬೇಕಂತಿದ್ದಾರೆ. (ಬಿಳಿ ಆನೆ ಒಳಕ್ಕೆ ಬಂದು)

ಬಿಳಿ ಆನೆ : ಅವರು ಪ್ರಜೆಗಳು ಪ್ರಭು, ಕಳ್ಳತನಕ್ಕೆ ಲೈಸೆನ್ಸ್ ಮಾಡಿದರೆ ತಮ್ಮನ್ನು ಅಭಿನಂದಿಸಬೇಕೆಂದು ಕಾದಿದ್ದಾರೆ.
ತಾವು ಬೇಗ ಸಹಿ ಹಾಕಿ ಪ್ರಭು….

ಚಿಲ್ಲರೆ : ಪ್ರಜೆಗಳಲ್ಲ ಪ್ರಭು, ಬಿಲ್ಲಿಗೆ ಸಹಿ ಹಾಕಿದರೆ ತಮ್ಮನ್ನು ಅಭಿನಂದಿಸಲು ಕಲಾವಿದರೆಲ್ಲ ಸೇರಿದ್ದಾರೆ.

ಬಿಳಿ ಆನೆ :  ಸೇರಿದವರು ಪ್ರಜೆಗಳು ಕಣ್ರಿ.

ಚಿಲ್ಲರೆ : ಸೇರಿದವರು ಕಲಾವಿದರು ರೀ.

ಬಿಳಿ ಆನೆ : ಈ ಬಿಲ್ ಪಾಸ್ ಮಾಡೋಕೆ ನೀವೆಷ್ಟು ತಗೊಂಡಿದ್ದೀರಿ ಅಂತ ಗೊತ್ತು ರೀ…. (ಚಾರ ಮತ್ತೆ ಓಡಿ ಬರುವನು)
ಚಿಲ್ಲರೆ : ಪ್ರಭು, ಎಲ್ಲರೂ ಕ್ರಾಂತಿಗೆ ಜಯವಾಗಲಿ ಅಂತ ಕೂಗ್ತಿದಾರೆ.

ಬಿಳಿ ಆನೆ : ಕಲಾವಿದರ ಬಿಲ್ ಪಾಸ್ ಮಾಡಿದರೆ ಜನ ಕ್ರಾಂತಿ ಮಾಡಿದೇ ಬಿಡ್ತಾರೆಯೇ ಪ್ರಭು?

ಚಿಲ್ಲರೆ : ಕಳ್ಳತನಕ್ಕೆ ಲೈಸನ್ಸ್ ಎಲ್ಲಾದರೂ ಉಂಟೆ ಪ್ರಭು!

ಬಿಳಿ ಆನೆ : (ಚಿಲ್ಲರೆಗೆ) ಏನ್ರಿ, ನಮಗ ನಾವೇ ಈ ರೀತಿ ಬಿಟ್ಟುಕೊಡೋದಾ? ನಾವು ಅಧಿಕಾರಿಗಳೆಲ್ಲಾ ಒಂದೇ
ಅಲ್ಲವೇನ್ರಿ…. ರಾಜರದೊಂದು ಶಾಹಿ ಇದ್ದರೆ ನಮ್ಮದೂ ಒಂದು ನೌಕರಶಾಹಿ ಇದೇರಿ…. (ಚಿಲ್ಲರೆಗೆ
ಕಣ್ಣುಹೊಡೆಯುವನು)

ರಾಜ : ಏನಂದ್ರೀ….

ಬಿಳಿ ಆನೆ : ಜನ ಕ್ರಾಂತಿ ಅನ್ನೋದ್ರಲ್ಲಿ ಅರ್ಥ ಇದೆ ಪ್ರಭು. ಕಳ್ಳತನಕ್ಕೆ ಲೈಸನ್ಸ್ ಕೊಡೋದು, ಕಲೆಯಿಂದ ಉದ್ದಾರ
ಮಾಡೋದು- ಇವೆಲ್ಲ ಕ್ರಾಂತಿಕಾರಕ ವಿಚಾರ ನೋಡಿ. ಅದಕ್ಕೇ ಜನ ಕ್ರಾಂತಿ ಕ್ರಾಂತಿ ಅಂತಿದ್ದಾರೆ.

ರಾಜ : ನಮ್ಮ ಮಾಜಿ ಮಂತ್ರಿ ಅಲ್ಲಿ ಇದ್ದಾನಾ?

ಚಾರ : ಜನರನ್ನು ಸಮಾಧಾನ ಮಾಡೋದಕ್ಕೆ ಪ್ರಯತ್ನ ಮಾಡ್ತಿದಾರೆ, ಆದರೆ ಅವರ ಮಾತು ಒಬ್ಬರಿಗೂ ತಿಳಿಯುತ್ತಿಲ್ಲ.
(ಗಲಾಟೆ ಇನ್ನೂ ಜಾಸ್ತಿ ಆಗುತ್ತಿದೆ. ಕ್ರಾಂತಿಗೆ ಜಯವಾಗಲಿ ಇತ್ಯಾದಿ ಘೋಷಣೆ ಕೇಳಿಸುತ್ತದೆ.)

ಚಿಲ್ಲರೆ : ಅಯ್ಯಯ್ಯೋ; ಕ್ರಾಂತೀನೇ, ಆ ಮಂತ್ರೀನೇ ಮಾಡಿಸ್ತಿದಾನೆ, ಎಲಾ, ಯಾರಲ್ಲಿ,

ಚಾರ : ಏನಪ್ಪಣೆ?

ಚಿಲ್ಲರೆ : ಪ್ರಭುಗಳು ಖುದ್ದಾಗಿ ಆಜ್ಞೆ ಮಾಡಿದ್ದಾರೆ; ಜನರ ಮೇಲೆ ಪೊಲೀಸರನ್ನು ಛೂ ಬಿಡೋದಕ್ಕೆ ಹೇಳು.

ಚಾರ : ಅಪ್ಪಣೆ (ಹೋಗುವನು, ಗಲಾಟೆ, ಲಾಠಿ ಚಾರ್ಜು, ಅಶ್ರುವಾಯು ಕೇಳಿ ಬರುತ್ತಿವೆ.)

ಬಿಳಿ ಆನೆ : ಎಲಾ ಯಾರಲ್ಲಿ!

ಚಾರ : (ಓಡಿಬಂದು) ಏನಪ್ಪಣೆ?

ಬಿಳಿ ಆನೆ : ಮಹಾಪ್ರಭುಗಳು ಅಪ್ಪಣೆ ಮಾಡಿದ್ದಾರೆ : ಜನರ ಮೇಲೆ ಸೈನ್ಯಬಿಟ್ಟು ಕಂಡಲ್ಲಿ ಗುಂಡು ಹಾರಸೋದಕ್ಕೆ ಹೇಳು.

ಚಾರ : ಅಪ್ಪಣೆ, (ಹೋಗುವನು, ಮುಂಚಿನ ಗಲಾಟೆಯ ಜೊತೆಗೆ ಈಗ ಗುಂಡಿನ ಸಪ್ಪಳ ಸೇರಿಕೊಳ್ಳುತ್ತದೆ)

ಬಿಳಿ ಆನೆ : ಪ್ರಭು, ಈ ಗಲಾಟೆಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ, ನಾವು ಇಲ್ಲಿಂದ ಪಾರಾಗುವುದೇ ಮೇಲು. (ಚಾರ ಓಡಿ
ಬರುವನು)

ಚಾರ : ದಯವಿಟ್ಟು ಹೋಗಬೇಡಿ, ಎಲ್ಲಾ ಕಡೆ ಜನ ತುಂಬಿ ಬಿಟ್ಟಿದ್ದಾರೆ. ನಿಮ್ಮ ಮುಖ ನೋಡದೇ
ಹಿಂದಿರುಗುವುದಿಲ್ಲವೆಂದು ಶಪಥ ಮಾಡಿದ್ದಾರೆ.

ರಾಜ : ನನ್ನ ಮುಖ? ಆದರೆ ಬೆಳಿಗ್ಗೆ ಎದ್ದಾಗಿಂದ ನಾನು ಮುಖಾನೇ ತೊಳೆದಿಲ್ಲವಲ್ಲ! ಹಳಸಲು ಮುಖ ಹ್ಯಗಪ್ಪ
ತೋರಿಸೋದು?

ಚಾರ : ಆದರೆ ಖಂಡಿತಾ ನಿಮ್ಮ ಮುಖ ನೋಡದೇ ಅವರು ಹೋಗೋದಿಲ್ಲ ಪ್ರಭು.


ರಾಜ : ಆಯ್ತು…. ಪ್ರಜೆಗಳು ನಮ್ಮ ಮುಖ ನೋಡಲೇಬೇಕಂತ ಹಟ ಹಿಡಿದರೆ ನಾವು ಏನು ಮಾಡಲಿಕ್ಕಾಗುತ್ತೆ?
ಹೋಗಲಿ ಬೆಳಿಗ್ಗೆದ್ದು ಸಂಡಾಸಕ್ಕೆ ಹೋಗಿ ಬಂದು ಕಾಲಮೇಲೆ ನೀರು ಹಾಕ್ಕೊಂಡಿದ್ದೇನೆ. ಕಾಲು ತೋರಿಸಿದರೆ ಸಾಕಲ್ಲವೆ?

ಬಿಳಿ ಆನೆ : ಸಾಕು ಪ್ರಭು….

ಚಿಲ್ಲರೆ : ಸಾಕಾಗೋದಿಲ್ಲ ಪ್ರಭು

ಬಿಳಿ ಆನೆ : ಸಾಕುರೀ….

ಚಿಲ್ಲರೆ : ಸಾಕಾಗೋದಿಲ್ಲ ಪ್ರಭು.

ಬಿಳಿ ಆನೆ : ರೀ, ನಿಮಗೆ ಅನುಭವ ಸಾಲದು, ಮೊದಲು ಸೀನಿಯರ ಆಫೀಸರಿಗೆ ಗೌರವ ಕೊಡೋದಕ್ಕೆ ಕಲೀರಿ.

ಚಿಲ್ಲರೆ : ಅನುಭವ, ಕತ್ತೆಗೂ ಇರುತ್ತೇರೀ….

ಬಿಳಿ ಆನೆ :  ಯಾ‌ರೀ ಕತ್ತೆ? ನಿಮ್ಮಪ್ಪ ಕತ್ತೆ,ದ ನಿಮ್ಮಮ್ಮ ಕತ್ತೆ.

ಚಿಲ್ಲರೆ : ನಿಮ್ಮಜ್ಜಿ ಕತ್ತೆ, ನಿಮ್ಮ ತಾತ ಕತ್ತೇರಿ.

ರಾಜ : ಹೋ; ನಾಯಿ ನನ್ಮಕಳ್ರಾ…. (ಇಬ್ಬರೂ ಸ್ತಬ್ಧರಾಗುವರು)

ಬಿಳಿ ಆನೆ :  ತಾವು ಒಂದು ಕಾಲು ತೋರಿಸಿದರೆ ಸಾಕು ಪ್ರಭು.

ಚಿಲ್ಲರೆ : ಸಾಲೋದಿಲ್ಲ ಪ್ರಭು…. ಪ್ರಜೆಗಳು ಭಕ್ತಿಯಿಂದ ಕೇಳುತ್ತಿದ್ದಾರೆ; ತಾವು ಕೊನೇ ಪಕ್ಷ ಎರಡು ಕಾಲುಗಳನ್ನಾದರೂ
ತೋರಿಸಬೇಕು.

ರಾಜ : ನನಗೆ ಇನ್ನೆರಡು ಕಾಲು ಮೂಡಿಲ್ಲವಾದ್ದರಿಂದ ಸಧ್ಯ ಈಗಿರೋ ಎರಡು ಕಾಲನ್ನೇ ತೋರಿಸೋಣ. (ಇಬ್ಬರು
ಅಧಿಕಾರಿಗಳು ಮೇಲೆ ಕೈ ಊರಿ ತನ್ನ ಎರಡೂ ಕಾಲುಗಳನ್ನು ಕಿಡಿಕಿಯಲ್ಲಿ ತೂರುವನು. ಹೊರಗೆ ಗಲಾಟೆ ಹಾಗೇ
ನಡೆದಿದೆ. ಚಾರನನ್ನು ಕುರಿತು.)

ರಾಜ : ನೀನು ಹೋಗಿ “ರಾಜರ ಮುಖ ಕೊಳೆಯಾಗಿದೆ. ಈಗ ರಾಜರ ಕಾಲನ್ನು ಮಾತ್ರ ನೋಡಿ ತೃಪ್ತಿಪಟ್ಟುಕೊಳ್ಳಿ ಅಂತ
ಹೇಳು” (ಚಾರು ಹೋಗುವನು)

ರಾಜ : ಕಾಲು ಒದ್ದೆಯಾಯ್ತಲ್ಲ….

ಚಿಲ್ಲರೆ : ಬಹುಶಃ ಪ್ರಜೆಗಳು ತಮ್ಮ ಪಾದತೊಳೆದು ಪೂಜೆ ಮಾಡುತ್ತಿರಬೇಕು ಪ್ರಭು….

ರಾಜ : ನೀರು ಬೆಚ್ಚಗಿದೆ? ಯಾರೋ ಉಚ್ಚಿ ಹೊಯ್ದಿರಬಹುದು ಮಾರಾಯಾ;


(ಗಲಾಟೆ ಹಾಗೇ ಮುಂದುವರಿದಿರುವಾಗ ರಾಜನ ಕಾಲಿಗೆ ಏಟು ಬೀಳುತ್ತದೆ)

ರಾಜ : ಅಯ್ಯಯ್ಯೋ; ಯಾರೋ ಹೊಡೀತಿದಾರೆ…. ಬೇಗನೇ ಕಾಲೆಳೀರಿ…. ಬೇಗ, ಬೇಗ.

ಚಿಲ್ಲರೆ : ಜೀವೊ ಇಲ್ಲದೆ ಕಾಲೆಳೆಯೋದು ತಪ್ಪಲ್ಲವೇ?

ರಾಜ : ನಾನು ಹೇಳ್ತಿದ್ದೇನೆ ಎಳೀರಯ್ಯಾ.


ಚಿಲ್ಲರೆ : ಇವಯ್ಯಾ ಎಲ್ಲಾದಕ್ಕೂ ಕೊಕ್ಕೆ ಹಾಕ್ತಾರೆ. ಮೊದಲು ಇವರನ್ನ ಸರಿಪಡಿಸಿಕೊಳ್ಳಿ ಪ್ರಭು.

ರಾಜ : ಅಯ್ಯೋ ಅವರು ಆ ಕಡೆಯಿಂದ ಎಳೀತಿದಾರೆ. ಅಯ್ಯಯ್ಯೋ ನನ್ನ ಕಾಲು ನನ್ನ ಕಾಲು, ಕಿತ್ತು ಹೋಗುತ್ರೋ….

ಬಿಳಿ ಆನೆ :  (ಎಳೆಯುತ್ತ) ಜೀವೊ ನಾನು ನೋಡಿಕೊಳ್ತೇನೆ. ಎಳೆಯಿರಿ. ನಿಮ್ಮ ಕಾಲು ಕಿತ್ತು ಕೊಂಡು ಹೋದರೂ
ನಿಮ್ಮನ್ನು ನಾವು ಬಿಡೋದಿಲ್ಲ ಪ್ರಭೂ….ಎಳೀರಿ ಎಳೀರಿ. ಜೋರಾಗಿ ಎಳೀರಿ. (ಇವರು ರಾಜನನ್ನು ಇತ್ತ
ಎಳೆಯುತ್ತಿದ್ದಾರೆ. ಪ್ರಜೆಗಳು ಅತ್ತ ಎಳೆಯುತ್ತಿದ್ದಾರೆ, ನಡುವೆ ರಾಜ ಒದ್ದಾಡುತ್ತಿದ್ದಾನೆ. ಯಾರೊಬ್ಬರೂ ಸೋಲುತ್ತಿಲ್ಲ.
ರಾಜ ಅಯ್ಯಯ್ಯೋ ಎಂದು ಸಂಕಟ ಪಡುತ್ತಿದ್ದಾನೆ. ಅಷ್ಟರಲ್ಲಿ ಶಿವ ‘ಪ್ರಭೂ’ ಎನ್ನತ್ತ ಓಡಿ ಬರುತ್ತಾನೆ.)

ಶಿವ : ಪ್ರಭು ನೀವು ನನಗೊಂದು ಅವಕಾಶ ಕೊಟ್ಟರೆ ಒಂದೇ ಕ್ಷಣದಲ್ಲಿ ಹೊರಗಡೆ ಜನರನ್ನೆಲ್ಲಾ ಓಡಿಸಿಬಿಡುತ್ತೇನೆ.

ರಾಜ : ಕೊಟ್ಟಿದ್ದೇನೆ, ಅದೇನ್ಮಾಡ್ತೀಯೋ ಬೇಗ ಮಾಡಯ್ಯಾ.

ಶಿವ : ಡಿಂಗ್‌ಡಾಂಗ್; (ಹೊರಗಡೆಯಿಂದ ಕತ್ತೆಯ ಹೇಂಕಾರ ಭಯಂಕರವಾಗಿ ಕೇಳಿ ಬರುತ್ತದೆ) ಡಿಂಗ್‌ಡಾಂಗ್, ರಾಜರ
ಜೀವ ಉಳಿಸೋದು ನಮ್ಮ ಕರ್ತವ್ಯ ಅಲ್ಲವಾ? (ಮತ್ತೆ ಕತ್ತೆಯ ಹೇಂಕಾರ)ಹಾಗಿದ್ದರೆ ಹೊರಗಡೆಯ ಜನರನ್ನೆಲ್ಲಾ
ಒದ್ದೋಡಿಸು. (ಈಗ ಈತನಕ ಕೇಳಿಸುತ್ತಿದ್ದ ಗಲಾಟೆಯ ಸಪ್ಪಳದಲ್ಲಿ ವ್ಯತ್ಯಾಸವಾಗುತ್ತದೆ. ಕತ್ತೆಯ ಹೇಂಕಾರ
ಭಯಂಕರವಾಗಿ, ಅದು ಒದೆಯುವುದು, ಜನ ಕಿರುಚುವುದು, ಒದರುವುದು ಕೇಳಿಸುತ್ತದೆ. ಸ್ವಲ್ಪ ಸಮಯದಲ್ಲೇ ರಾಜನ
ಕಾಲು ಸ್ವತಂತ್ರವಾಗುತ್ತವೆ. ರಾಜ ಮತ್ತು ಉಳಿದವರು ಕಿಟಕಿಯಲ್ಲಿ ಹಣಕಿ ಹಾಕಿ ಆನಂದ, ಆಶ್ಚರ್ಯಗಳಿಂದ
ಹೊರಗಡೆಯ ಕತ್ತೆಯ ಚಟುವಟಿಕೆಗಳನ್ನು ನೋಡುತ್ತಾರೆ.)

ರಾಜ : ಅಬ್ಬಾ; ಇದು ಕುದುರೆಯೋ! ಕತ್ತೆಯೋ! ರಾಕ್ಷಸನೋ!

ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ ನೋಡಿ; ಇದು ಗಾಡ್ಲಿ ಪ್ರಾಣಿ ಪ್ರಭು;

ಬಿಳಿ ಆನೆ :  ಇಂಗ್ಲಂಡ್ ಅಮ್ಮನವರ ಹತ್ತಿರ ಇಂಥಾದ್ದು ಎರಡೋ ಮೂರೋ ಇದೆ ಪ್ರಭು.

ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ; ಜನ ಎಲ್ಲಾ ಹ್ಯಾಗೆ ಓಡಿ ಹೋದರು ನೋಡಿ;

ಬಿಳಿ ಆನೆ :  ಗ್ರೇಟ್; ಗ್ರೇಟ್; ಹೆಸರು ನೋಡಿ; ಡಿಂಗ್‌ಡಾಂಗ್-ಅಂತ;

ರಾಜ : ಡಿಂಗ್‌ಡಾಂಗ್!

ಬಿಳಿ ಆನೆ :  ಈ ಕತ್ತೇ ಹುಡುಗನಿಗೆ ನಾನೇ ಹೇಳಿಕಳಿಸಿದ್ದೆ ಪ್ರಭು….

ರಾಜ : ಡಿಂಗ್‌ಡಾಂಗ್!
ಭಲೇ; ಭಲೆ, ಏನೋ ಮರಿ ನಿನ್ನ ಹೆಸರು?

ಶಿವ : ಶಿವಾ ಅಂತ…. ಬಡವ ಪ್ರಭು, ದಯಮಾಡಿ ಒಂದು ನೌಕರಿ ಕೊಟ್ಟರೆ ಬದುಕಿಕೊಳ್ತೇನೆ.

ಬಿಳಿ ಆನೆ : ಹೌದು, ಹೌದು, ಇವನನ್ನ ಕಾಡುಪ್ರಾಣಿ ರಕ್ಷಣಾ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಬೇಕೂಂತ ನನ್ನ
ಶಿಫಾರ್ಸು ಪ್ರಭು.

ಚಿಲ್ಲರೆ : ಛೆ, ಹಿಂದುಳಿದ ವರ್ಗದ ನಿಗಮಕ್ಕೆ ಅಧ್ಯಕ್ಷನನ್ನಾಗಿ ಮಾಡಿ ಪ್ರಭು.

ರಾಜ : ಅಯ್ಯಾ ಶಿವಾ, ಹೋಗು, ನಿನ್ನ ಡಿಂಗ್‌ಡಾಂಗ್ ನನ್ನ ಕರದುಕೊಂಡು ಬಾ. (ಶಿವ ಹೋಗಿ ಡಿಂಗ್‌ಡಾಂಗ್ ಜೊತೆ
ಬರುವನು. ಅದನ್ನು ನೋಡುತ್ತಿದ್ದಂತೆ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಗುತ್ತದೆ.)
ರಾಜ : ಪವಾಡ! ಪವಾಡ! ಅದರ ಮೈಕಟ್ಟೇನು; ಕಾಲೇನು; ಕಿವಿಯೇನು! ಇಂಥ ಕಿವಿ ನನಗಿರಬಾರದಿತ್ತೆ ಎನಿಸುತ್ತೆ.

ಬಿಳಿ ಆನೆ :  ಅಯ್ಯೋ ಡಿಂಗ್‌ಡಾಂಗ್ ಥರ ನನಗೂ ನಾಲ್ಕು ಕಾಲಿರಬಾರದೇ ಅಂತ ಅನಿಸುತ್ತೆ ಪ್ರಭು.

ಚಿಲ್ಲರೆ : ಛೆ, ಶನಿವಾರದ ಬದಲು ಭಾನುವಾರ ಹುಟ್ಟಿದ್ದರೆ ನಾನೇ ಡಿಂಗ್‌ಡಾಂಗ್ ಆಗಿ ಹುಟ್ಟುತ್ತಿದ್ದೆನೋ ಏನೊ;

ಬಿಳಿ ಆನೆ : (ಶಿವನ ಕಿವಿಯಲ್ಲಿ) ರಾಜರ ಹತ್ತಿರ ನಿನ್ನ ಬಗ್ಗೆ ತುಂಬಾ ಹೇಳಿದ್ದೀನಿ. ಆಮೇಲೆ ಬಂದು ಭೇಟಿ ಮಾಡು.

ರಾಜ : ನೋಡ್ರಯ್ಯ ಎಲ್ಲರೂ ಕೇಳಿ ಇವೊತ್ತಿನಿಂದ ಈ ರಾಜ್ಯದ ಪ್ರಧಾನ ಮಂತ್ರಿ….

ಬಿಳಿ ಆನೆ :  ಪ್ರಧಾನಮಂತ್ರಿ ಶಿವಣ್ಣನವರಿಗೆ

ಎಲ್ಲರೂ : (ರಾಜನನ್ನು ಬಿಟ್ಟು) ಜಯವಾಗಲಿ….

ರಾಜ : ಸರಿಯಾಗಿ ಕೇಳಿಕೊಳ್ರಯ್ಯಾ, ಇವೊತ್ತಿನಿಂದ ಈ ರಾಜ್ಯದ ಮಂತ್ರಿ ಶಿವಣ್ಣ ಅಲ್ಲ; ಡಿಂಗ್‌ಡಾಂಗ್!

ಬಿಳಿ ಆನೆ : ಪ್ರಭೂ!

ರಾಜ : ಪ್ರಧಾನಮಂತ್ರಿ ಡಿಂಗ್‌ಡಾಂಗ್ಗೆ ಜಯವಾಗಲಿ ಅನ್ರೊ….

ಎಲ್ಲರೂ : ಜಯವಾಗಲಿ.

ರಾಜ : ಡಿಂಗ್‌ಡಾಂಗ್ ಪ್ರಧಾನಮಂತ್ರಿ, ಶಿವಾ ಅದರ ಪೀಯೆ. ನೋಡಯ್ಯಾ ಶಿವ, ನೀನು ಪ್ರಧಾನಮಂತ್ರಿಗಳ
ಉಸ್ತುವಾರಿ ನೋಡಿಕೊಂಡು ಅವರ ಆಸೆಗಳನ್ನು ಭಾಷಾಂತರ ಮಾಡಿ ನಮಗೆ ಹೇಳುತ್ತಿರಬೇಕು. ಪಾರ್ಕಿನಲ್ಲಿರೋ
ಅರಮನೆ ನಿಮ್ಮದು. ತಿಳೀತೋ? ಅಯ್ಯಾ ಚಾರ, ಇವರನ್ನ ಪಾರ್ಕಿನ ಅರಮನೆಗೊಯ್ದು ಮುಟ್ಟಿಸು. ಎಲ್ಲಾ ವ್ಯವಸ್ಥೆ
ಮಾಡು. ಹೊಸ ಆಜ್ಞೆಗಳನ್ನು ಬರೆದುಕೊಳ್ರಯ್ಯಾ (ರಾಜ ಒಳಕ್ಕೆ ಹೋಗುತ್ತಾನೆ. ನೇಪಥ್ಯದಿಂದ ಕಾರಭಾರಿ ಆಜ್ಞೆ ಓದುವ
ದನಿ ಕೇಳಿಸುತ್ತದೆ. ಬಿಳಿ ಆನೆ ಚಿಲ್ಲರೆ ಬರೆದುಕೊಳ್ಳುತ್ತಾರೆ)
ಕಾರಭಾರಿಯ ಧ್ವನಿ : ಅ) ಇನ್ನು ಮುಂದೆ ಡಿಂಗ್‌ಡಾಂಗ್ ಸಾಹೇಬರಿಗೆ ಯಾರೂ ಕತ್ತೆ ಅನ್ನಬಾರದು, ಅಥವಾ ಯಾರೂ
ಡಿಂಗ್‌ಡಾಂಗ್ ಸಾಹೇಬರನ್ನು ಟೀಕಿಸಬಾರದು. ಹೊರಗಾಗಲೀ ಮನಸ್ಸಿನಲ್ಲಾಗಲಿ ಅವರಿಗೆ ಕತ್ತೆ ಅಂದವರಿಗೆ,
ಟೀಕಿಸಿದವರಿಗೆ ಪೋಲಿಕಾನೂನು ಪ್ರಕಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ
ವಿಧಿಸಲಾಗುವುದು. ಇನ್ನು ಮುಂದೆ ನಮಸ್ಕಾರ ಮಾಡುವಾಗ ರಾಂ, ರಾಂ ಅನ್ನೋದರ ಬದಲು ಎಲ್ಲರೂ ಡಿಂಗ್‌ಡಾಂಗ್
ಅನ್ನತಕ್ಕದ್ದು.
ಆ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರು ಕ್ರಾಂತಿಕಾರಿಗಳನ್ನು ಓಡಿಸಿ ರಾಜರ ಪ್ರಣ ರಕ್ಷಣೆ ಮಾಡಿದ್ದನ್ನು ಪ್ರಜೆಗಳು
ವಿಶೇಷವಾಗಿ ಜ್ಞಾಪಿಸಿಕೊಳ್ಳತಕ್ಕದ್ದು ಹಾಗೂ ಅದರ ಜ್ಞಾಪಕಾರ್ಥ ಹೊರಡಿಸಲಾಗುವ ಜಾಸ್ತಿ ಬೆಲೆಯ ಅಂಚೆ ಚೀಟಿಯನ್ನು
ಪ್ರತಿಯೊಬ್ಬ ಪ್ರಜೆಯೂ ಭಕ್ತಿಯಿಂದ ಕೊಳ್ಳತಕ್ಕದ್ದು.
ಇ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರ ಊಟಕ್ಕಾಗಿ ಆಸ್ಟ್ರೇಲಿಯಾದಿಂದ ಹುಲ್ಲನ್ನೂ, ಆಮೇರಿಕದಿಂದ ಹಿಂಡಿಯನ್ನೂ
ಚೈನಾದಿಂದ ಬೂಸಾವನ್ನು ಇಂಗ್ಲಂಡಿನಿಂದ ರದ್ದೀ ಕಾಗದವನ್ನೂ ತರಿಸುವ ವಿಶೇಷ ಖರ್ಚಿಗಾಗಿ ‘ಬೂಸಾಟ್ಯಾಕ್ಸ್’ ಎಂಬ
ಹೊಸ ತೆರಿಗೆಯನ್ನು ಹುಜೂರು ಖಜಾನೆಗೆ ಈ ದಿನದಿಂದಲೇ ಪ್ರಜೆಗಳು ಕಟ್ಟತಕ್ಕದ್ದು. ಓವರ್.

ಚಿಲ್ಲರೆ : ಸ್ವಾಮಿ ಶಿವಣ್ಣೋರೆ, ಆರ್ಡರಿನಲ್ಲಿ ಡಿಂಗ್‌ಡಾಂಗ್ ಸಾಹೇಬರ ರಾತ್ರಿ ವ್ಯವಸ್ಥೆ ಹ್ಯಾಗೆ ಅಂತ ಹೇಳಲಿಲ್ಲವಲ್ಲಾ?
ಸಾಹೇಬರಿಗೆ ಮದುವೆ ಆಗಿದೆಯೆ?

ಶಿವ : ಇಲ್ಲ.

ಚಿಲ್ಲರೆ : ಸಾಹೇಬರಿಗೆ ಮದುವೆ ಆಗಿಲ್ಲ ಅಂದಮೇಲೆ ರಾತ್ರಿ ಹಡಗು ಮೀನು ಇತ್ಯಾದಿ ವ್ಯವಸ್ಥೆ ಬೇಡವಾ?
ಶಿವ : ಹಡಗು ಮೀನು ಅಂದರೆ?

ಚಿಲ್ಲರೆ : ನಮ್ಮ ಪಾರ್ಟಿ ಹತ್ತಿರ ಎರಡು ಬಿಳಿ ಹೆಚ್ಚುಕತ್ತೆ ಇವೆ. ಎರಡಕ್ಕೂ ಭರ್ತಿಪ್ರಾಯ, ಗನೋರಿಯಾ ಇತ್ಯಾದಿ ಏನೂ
ಇಲ್ಲ. ಡಾಕ್ಟರ ಸರ್ಟಿಫಿಕೇಟ್ ಇದೆ. ನಿಮ್ಮದು ಇಷ್ಟು ಪರ್ಸೆಂಟೇಜ್ ಅಂತ ಗೊತ್ತಾದರೆ ಬಿಲ್ ಪಾಸ್ ಮಾಡಿಸ್ತೀನಿ.
ಇಲ್ಲಾಂದರೆ ಎಳೆ ಪ್ರಾಯದ ಮರಿಕುದುರೆ ಇದೆ. ಕಂದುಬಣ್ಣದ್ದು. ಅಸಲಿ ವರ್ಜಿನ್, ಬೇಕಾದರೆ ಟೆಸ್ಟ್ ಮಾಡಿ
ನೋಡಬಹುದು…. ಫಿಪ್ಟಿ ಫಿಪ್ಟಿ ಒಪ್ಪೋದಾದರೆ ಪಾರ್ಟೀನ್ನ ಕರಕೊಂಬರ್ತೀನಿ. ಸಾಯಂಕಾಲ ಮಂತ್ರಾಲಯ ಬಾರಿಗೆ
ಬನ್ನಿ, ಕಾಯ್ತಾ ಇರತ್ತೀನಿ (ಹೋಗುವನು)

ಬಿಳಿ ಆನೆ : ಡಿಂಗ್‌ಡಾಂಗ್ ಶಿವಣ್ಣ.

ಶಿವ : ಡಿಂಗ್‌ಡಾಂಗ್ ಸ್ವಾಮಿ.

ಬಿಳಿ ಆನೆ : ಇನ್ನೇನಿಲ್ಲ ಡಿಂಗ್‌ಡಾಂಗ್ ಸಾಹೇಬರಿಗೆ ಕತ್ತೆ ಕುದುರೆ ಕೊಟ್ಟು ಅವಮಾನ ಪಡಿಸೋದು ಒಳ್ಳೇದಲ್ಲ ಅನ್ಸುತ್ತೆ.
ಅವರೇನೋ ಮರ್ಯಾದೆ ಮೀರಬಾರದು ಅಂತ ನೀವು ಕೊಟ್ಟದ್ದನ್ನು ಏರಬಹುದು. ಆದರೆ ಯೋಚನೆ ಮಾಡಿ : ರಾಜ್ಯದ
ಪ್ರಧಾನಿಗೆ ಕತ್ತೆ ಕುದುರೆ ಅಂದರೆ ರಾಜರ ಮರ್ಯಾದೆ ಏನು? ನಮ್ಮ ಮರಿಯಾದೆ ಏನು? ನೀವು ಮನಸ್ಸು
ಮಾಡೋದಾದರೆ ಹುಡಿಗೇರು ರೆಡಿ ಇದ್ದಾರೆ. ಕರೆಸಲಾ? ಯಾವುದಕ್ಕೂ ಸಂಜೆ ಬಾಲಾಜಿ ಕ್ಲಬ್ ಗೆ ಬನ್ನಿ (ಹೋಗುವನು)
ಸಾಂಬಶಿವ ಪ್ರಹಸನ : ದೃಶ್ಯ – ೬
(ಗಣೇಶನ ದೇವಸ್ಥಾನ. ಸಾಂಬ ದಿನಪತ್ರಿಕೆ ತಗೊಂಡು ಹಾಡುತ್ತ ಬರುತ್ತಾನೆ. ಆದರೆ ಆಗಲೇ ಮೂಲೆಯಲ್ಲೊಬ್ಬ ವ್ಯಕ್ತಿ
ಕುಡಿಯುತ್ತ ಕೂತಿದ್ದಾನೆ. ಸಾಂಬ ಅವನನ್ನು ಗಮನಿಸುವುದಿಲ್ಲ.)

ಸಾಂಬ :

ಏನಹೋಗಿ ಏನ ಬಂತು ಎಂಥಾ ಕಾಲ ಬಂದೀತಣ್ಣ


ದೇಶದಲ್ಲಿ ವಿಷದಗಾಳಿ ಬೀಸೀತಲ್ಲ.
ಆಹಾ! ಗುಂಡು ತೇಲಿ ಬೆಂಡು ಮುಳುಗಿ ಹೋದೀತಲ್ಲ
ಬುದ್ಧ ಬಸವ ಎಂಕನಾಣಿ ಯಾರಯ್ಯಾರಿಲ್ಲಾ
ಇಲ್ಲಿ! ಜಾರಿದಷ್ಟು ದಾರಿ ದೂರ ಬೆಳೆದೀತಲ್ಲ!
ಉಘೆ, ಉಘೆ ಎಂದಾರೋ ಸ್ವಾಮಿ
ಡಿಂಗಡಾಂಗೆಂದಾರೋ ||

ಹೆಣ್ಣು ಗಂಡೂ ಕೈಕಾಲೂರಿ ಕತ್ತೀಹಾಗೆ ಕುಣೀತಾರೆ


ಬಾಡಿಗೆ ಮುಖ ಧರಿಸ್ಯಾರಲ್ಲ ಬುದ್ಧಿವಂತರ
ಬಾಲ ಮೂಡೇತಿಲ್ಲೋ ಅಂತ ಮುಟ್ಟಿ ನೋಡ್ಯಾರಲ್ಲ
ಕತ್ತೇ ಬಾಲಕ್ಕೆಲ್ಲಾ ದೇವರ ಕಟ್ಯಾರಲ್ಲಾ
ತಾಜಾ ಚಳ್ಳೆ ಹಣ್ಣು ತಿಂದು ತಿಂದು  ತೇಗ್ಯಾರಲ್ಲ
ಉಘೆ, ಉಘೆ ಎಂದಾರೋ ಸ್ವಾಮಿ
ಡಿಂಗ್‌ಡಾಂಗೆಂದಾರೋ ||

ಛೆ, ಏನು ಹುಚ್ಚು ಈ ಮಂದಿಗೆ; ಯಾವ ಪೇಪರ್ ತೆಗೆದರೂ ಡಿಂಗ್‌ಡಾಂಗ್ ಸುದ್ದಿ; ಯಾರನ್ನೂ ಮಾತಾಡಿಸಿದರೂ
ಡಿಂಗ್‌ಡಾಂಗ್  ಸುದ್ದಿ; ಇವತ್ತೇನಿದೆ…. (ಪತ್ರಿಕೆಯನ್ನು ತಿರುವಿ ಹಾಕುತ್ತಿ ಓದುವನು) ಡೀಜೀಕೆ ರಸ್ತೆಯಲ್ಲಿ ಡಿಂಗ್‌ಡಾಂಗ್ 
ಸಾಹೇಬರ ಶಿಲಾಮೂರ್ತಿ ಪ್ರತಿಷ್ಠಾಪನೆ…. ಹೆಣ್ಣು ಕತ್ತೆಗಳ ಕಳ್ಳ ಸಾಗಾಣಿಕೆ…. ಡಿಂಗ್‌ಡಾಂಗ್ ಅಭಿಮಾನಿಗಳ
ಸಂಘದಿಂದ ರಕ್ತದಾನ ಸಮಾರಂಭ …. ಭೂಸಾ ತೆರಿಗೆಯನ್ನು ಪುನಃ ಏರಿಸುವುದಾಗಿ ಮಹಾರಾಜರ ಭರವಸೆ….
ಗ್ರಾಹಕರಿಗೆ ಎಚ್ಚರಿಗೆ;
ಡಿಂಗ್‌ಡಾಂಗ್ ಎಂಬ ಹೆಸರಿನಲ್ಲಿ ಇತ್ತೀಚೆಗೆ ಅನೇಕ ಕಂಪನಿಗಳು ಟಾಲ್ಕಂ ಪೌಡರ್ ತಯಾರಿಸುತ್ತಿರುವುದು ಸರಿಯಷ್ಟೆ?
ಆದರೆ ನಿಜವಾದ ಡಿಂಗ್‌ಡಾಂಗ್ ಲದ್ದಿಯನ್ನು ಉಪಯೋಗಿಸಿ ಪೌಡರ್ ತಯಾರಿಸುವ ಸರಕಾರೀ ಕಂಪನಿ ಒಂದು ಮಾತ್ರ
ಇದ್ದು ಉಳಿದುವು ಬೇರೆ ಪ್ರಾಣಿಗಳ ಸೆಗಣಿಯಿಂದ ಪೌಡರ್ ತಯಾರಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ
ಹುಷಾರಾಗಿರಬೇಕೆಂದು ಸರಕಾರಿ ವಕ್ತಾರರು ಗ್ರಾಹಕರನ್ನು ಎಚ್ಚರಿಸಿದ್ದಾರೆ.

ಬೀರಯ್ಯ : ಇದೇನು ಮಹಾ ಅಂತ ಹೇಳ್ತಿ ಬಿಡು ಗುರು. ಕಾಲೇಜು ಹುಡಿಗೀರು ಡಿಂಗ್‌ಡಾಂಗ್‌ಗೆ ಲವ್ ಲೆಟರ್
ಬರೀತಿದ್ದಾರೆ ಗೊತ್ತ?

ಸಾಂಬ : (ತನ್ನಲ್ಲಿ) ಎಲಾ ಇವನ; ಒಬ್ಬನೇ ಕುಡೀತಿದಾನೆ. ಇವನನ್ನೆಲ್ಲೋ ನೋಡಿದ ಹಾಗಿದೆಯಲ್ಲಾ….

ಬೀರಯ್ಯ : ಒಬ್ಬ ಹುಡುಗಿ ಏನು ಬರದಿದಾಳೆ ಗೊತ್ತ? ಮೊನ್ನೆ ರಾತ್ರಿ ಅವಳಿಗೆ ಡಿಂಗ್‌ಡಾಂಗ್ ಜೊತೆ ಡಿಸ್ಕೋ ಡ್ಯಾನ್ಸ್
ಮಾಡಿದ ಹಾಗೆ ಕನಸಾಯ್ತಂತೆ;

ಸಾಂಬ : ಹೌದು. ಡ್ಯಾನ್ಸ್ ಮಾಡೋವಾಗ ಡಿಂಗ್‌ಡಾಂಗ್ ಗೆ ಎರಡುಕಾಲು ಕಮ್ಮಿ ಆಗಿದ್ದುವ? ಇಲ್ಲಾ ಇವಳಿಗೇ ಇನ್ನೆರಡು
ಕಾಲು ಮೂಡಿದ್ದುವ?
ಬೀರಯ್ಯ : ನಾನು ಹಾಗೆಲ್ಲ ಇನ್ನೊಬ್ಬರ ಕನಸಲ್ಲಿ ಕದ್ದು ಹೋಗೋ ಪೈಕಿ ಅಲ್ಲ ಗುರು. ನನ್ನ ನೋಡಿ ಹೇಳು ನಾನು ಅಂಥ
ಕಳ್ಳ ಅಂತ ಅನ್ನಿಸುತ್ತ?

ಸಾಂಬ : ನಿನ್ನನ್ನೆಲ್ಲೋ ನೋಡಿದ ಹಾಗಿದೆಯಲ್ಲಾ….

ಬೀರಯ್ಯ : ಅದಿರಲಿ ಗುರೂ, ಮಾರ್ಕೆಟ್ಟಲ್ಲಿ ಬೂಸಾ, ಹಿಂಡಿ ಎಷ್ಟು ತುಟ್ಟಿ ಆಗಿದೆ ಗೊತ್ತ?

ಸಾಂಬ : ಯಾಕೆ, ಮನುಷ್ಯರೂ ಹಿಂಡಿ ತಿನ್ನೋದಕ್ಕೆ ಸುರು ಮಾಡಿದರ?

ಬೀರಯ್ಯ : ಮತ್ತೆ ಹೋಟಲಲ್ಲೀಗ ಒಂದು ಪ್ಲೇಟ್ ಬೂಸಾ ಹಿಂಡಿಗೆ ಮೂರು ರೂಪಾಯಿ;

ಸಾಂಬ : ಭಲೆ; ನಾನೂ ಎಷ್ಟೋ ಜನರನ್ನ ಕಂಡೆ, ಪಲ್ಲೆ ಇಲ್ಲದೇ ರೊಟ್ಟಿ ತಿಂದವರನ್ನ ಕಂಡೆ. ಸಾರಿಲ್ಲದೇ ಅನ್ನ
ಉಂಡವರನ್ನ ಕಂಡೆ; ಆದರೆ ಪಲ್ಲೆ ಇದ್ದರೂ ಸಾರಿದ್ದರೂ ಬೂಸಾ ಹಿಂಡಿ ತಿಂದು ಬದುಕೋರನ್ನ ಕಂಡಿರಲಿಲ್ಲಪ್ಪ!

ಬೀರಯ್ಯ : ನಾ ಹೇಳಿದೆ; ಇದು ಊಟ ಅಲ್ರಯ್ಯ ಅಂತ, ಆದರೆ ಅದು ಬದುಕೋ ದಾರಿ ಅಂತಾರೆ!

ಸಾಂಬ : ಇವರಿಗ್ಯಾರೂ ಬುದ್ಧೀ ಹೇಳೋರಿಲ್ಲವಾ?

ಬೀರಯ್ಯ : ಇದ್ದಾನೆ ನಮ್ಮಲ್ಲೊಬ್ಬ ಪಂಡಿತ. ಬರೀ ಪುಸ್ತಕದ ಬಗ್ಗೆ ಮಾತಾಡತಾನೆ. ನಿದ್ದೆ ಮಾಡುವಾಗಲೂ ಬಾಯಿ
ತೆರೆದಿರತಾನೆ. ಬಾಯಿ ತೆರೆದಾಗೆಲ್ಲಾ ಪುಸ್ತಕದ ಬಗ್ಗೆ ಮಾತಾಡತಾನೆ. ಒಂದು ಸಲವೂ ಅನ್ನ ಸಾರಿನ ಬಗ್ಗೆ ಮಾತಾಡೇ
ಇಲ್ಲ. ಅವ ಪುಸ್ತಕದ ಬಗ್ಗೆ ಮಾತಾಡತಾನೆ. ಅವನ ಪಾಲಿನ ಅನ್ನ ಸಾರು ಇಲಿ ತಿನ್ನುತ್ತವೆ. ತಿಂದೂ ತಿಂದೂ ಇಲಿ
ದಪ್ಪಗಾದವು. ಅವ ಸೊರಗಿ ಕಡ್ಡಿ ಆದ. ಯಾಕಣ್ಣ ಹೀಗೆ ಅಂದರೆ ನನ್ನ ಹೆಸರು ಪಂಡಿತ ಅಂತಾನೆ!

ಸಾಂಬ : ಛೇ, ನೀನು ಬಹಳ ನಗಸ್ತೀಯಪ. ನಿನ್ನೆ ಕಣಸಿನಲ್ಲಿ ಒಬ್ಬವ್ನ ನೋಡಿದೆ. ಥೇಟ್ ಎಳೇ ಮೀನಿನ ಥರ ಇದ್ದ!

ಬೀರಯ್ಯ : ಹೌದ? ಯಾರವನು?

ಸಾಂಬ : ಅದೇ ನೆನಪಾಗವೊಲ್ದು, ನೀನೇ ಇದ್ದಿರಬೇಕೇನು ಅಂತ….

ಬೀರಯ್ಯ : ನೀನು ನನಗೆ ಮೀನಂದರೂ ಸೈ, ಮೊಸಳೆ ಅಂದರೂ ಸೈ. ಇಷ್ಟು ದಿವಸದಲ್ಲಿ ನನಗೆ ತಿಳಿಯೋ ಹಾಗೆ
ಮತಾಡಿದವನು ನೀನೊಬ್ಬನೇ ಕಣಯ್ಯ.

ಸಾಂಬ : ಛೆ, ಛೆ ಕನಸಿನಲ್ಲಿ ಹಾಗೆ ಕಂಡಿತ್ತು ಅಷ್ಟೆ ಮಾರಾಯಾ, ಮನಸ್ಸಿಗೆ ಹಚ್ಚಿಕೋಬೇಡ ಮತ್ತೆ. ಹೆಂಡಗಿಂಡ ನೀನೇ
ಕುಡೀತಿಯಲ್ಲ, ನಿನಗೂ ಬೇಕೇನಂತ ಕೇಳೋವಷ್ಟು ಸಂಸ್ಕೃತೀನೇ ಇಲ್ಲವಲ್ಲಪ ನಿನ್ನಲ್ಲಿ?

ಬೀರಯ್ಯ : ಈಗೇನು ನನ್ನ ಸಂಸ್ಕೃತಿ ಬೇಕ, ಇಲ್ಲ ಹೆಂಡ ಬೇಡ?

ಸಾಂಬ : ಹೆಂಡ.

ಬೀರಯ್ಯ : ಹಾಗಿದ್ದರೆ ಮುಚ್ಚಿಕೊಂಡು ಕೇಳು: ರಾಜಕಾರಣ ಅಂದರೆ ಭಾಷಣ, ಟೇಬಲ್ ಗುದ್ದಿ ಭಾಷಣಾ ಮಾಡೋದು
ವ್ಯವಸ್ಥೆ, ಗಾಳಿಗುದ್ದಿ ಭಾಷಣ ಮಾಡೋದು ಕ್ರಾಂತಿ. ನಮ್ಮ ನಾಯಕ ಇದಾನಲ್ಲ-ಅವನೇ ಪುಸ್ತಕದೋನು – ಗಾಳೀಗುದ್ದಿ
ಭಾಷಣ ಮಾಡುತ್ತಿದ್ದ. ಯಾವುದುದರ ಬಗ್ಗೆ ಗೊತ್ತ? ಅದೇ ಪುಸ್ತಕದ ಬಗ್ಗೆ ಪುಸ್ತಕದಲ್ಲಿರೋ ಕ್ರಾತಿ ಬಗ್ಗೆ. ನನಗೆ ನನ್ನ ಮೇಲೆ
ಸಿಟ್ಟು ಬಂತು ನೋಡು, ಯಾಕಂತೀಯೋ? ತಿಗಾಬಾಯಿ ಮುಚ್ಚಿಕೊಂಡು ಇದನೆಲ್ಲಾ ಕೇಳ್ತಾ ಇದ್ದೀನಲ್ಲಾ ಅಂತ
ಸಿಟ್ಟುಬಂತು. ನನ್ನ ನಾನೇ ಮನಸ್ಸಿನಲ್ಲಿ ಒದ್ದುಕೊಂಡುಬಿಟ್ಟೆ.

ಸಾಂಬ : ಭಲೆ, ಒಳ್ಳೆ ಕೆಲಸ ಮಾಡಿದೆ, ಹಾಗೇ ನಿನ್ನ ಮನಸ್ಸಿನಲ್ಲಿ ಅವನನ್ನು ಒಂದು ಸಲ ಒದ್ದಿದ್ದರೆ ಚೆನ್ನಾಗಿರೋದು.
ಬೀರಯ್ಯ : ಎಲ್ಲ ಕಾಲಕ್ಕೂ ಪ್ರಾಮಾಣಿಕವಾಗಿರೋದು ಹ್ಯಾಗೆ ಸಾಧ್ಯ ಗುರು?

ಸಾಂಬ : ನಿಜ, ನಿಜ. ನನಗೆ ನೀನೀಗಲೂ ಮೀನಿನ ಥರ ಕಾಣಸ್ತೀಯಪ, ಹಾಗಂತ ಹೇಳಲಿಕ್ಕಾಗುತ್ತ….? ಇಂದ್ರ ಚಂದ್ರ
ಅನ್ನಬೇಕು. ಇಲ್ಲದಿದ್ದರೆ ನೀ ನನಗೆ ಹೆಂಡ ಕೊಡೋದಿಲ್ಲ….

ಬೀರಯ್ಯ : ಅದು ಬದುಕೋ ದಾರಿ. ನಮ್ಮ ನಾಯಕ ದೇವರಲ್ಲ ಅಂತ ನನ್ನ ಅಭಿಪ್ರಾಯ. ನೀ ಏನಂತೀ? ಅಷ್ಟೇ ಅಲ್ಲ.
ಅವ ಯಾರು ಅಂದರೆ ಮನುಷ್ಯ ಅಂತ ನನ್ನ ಅಭಿಪ್ರಾಯ ಯಾಕಂತಿಯೋ….

ಸಾಂಬ : (ಸಿಡಿದು) ನನಗೆ ಮಾತುಬೇಡ, ಹೆಂಡ ಬೇಕು, ಕೊಡ್ತಿಯೋ? ಇಲ್ಲವೋ?

ಬೀರಯ್ಯ : ಕೊಡೋದಿಲ್ಲ, ಬೇಕಾದರೆ ಇನ್ನರಡು ಮಾತು ಹೇಳಲ?

ಸಾಂಬ : ಬೇಡ, ಮುಚ್ಚಿಕೊಂಡು ಬಿದ್ದುಕೋ, ಸಾಕು.

ಬೀರಯ್ಯ : ಛೇ ನಿನ್ನ ಕನಸನ್ನೇ ಹೆಳಲಿಲ್ಲವಲ್ಲ ಗುರು.

ಸಾಂಬ : ಯಾವ ಕನಸು?

ಬೀರಯ್ಯ : ನಾ ಬಂದಿದ್ದೆ ಅಂತ ಹೇಳಿದೆಯಲ್ಲ ಅದು.

ಸಾಂಬ : ಹೆಂಡ ಕೊಡು ಹೇಳ್ತೀನಿ.

ಬೀರಯ್ಯ : ಬರೀ ಹೆಂಡ ಯಾಕೆ, ಪ್ರಾಣ ಕೊಡ್ತೀನಿ ಗುರು, ಮೊದಲು ಆ ಕನಸು ಹೇಳು.

ಸಾಂಬ : ಹೇಡ ಕೊಟ್ಟರೇನೇ ಹೇಳೋದು.

ಬೀರಯ್ಯ : ಛೆ, ಕುಡಿದೋರೆಲ್ಲಾ ಪುಸ್ತಕದ ಬಗ್ಗೆ ಭಾಷಣ ಮಾಡ್ತಾರೆ. ನನಗೆ ಭಾಷಣ ಅಂದರೆ ಬೋರು ಕಣಣ್ಣ!

ಸಾಂಬ : ಹೆಂಡ ಇಲ್ಲದೆ ನನ್ನ ನಾಲಗೆ ಏನೋದಿಲ್ಲ ಕಣಣ್ಣಾ.

ಬೀರಯ್ಯ : ಛೇ ನೀನೂ ನನ್ನ ನಾಯಕರ ಹಾಗೇ ಮಾತಾಡ್ತೀಯಲ್ಲಣ್ಣ….(ಅಳುವನು)

ಸಾಂಬ : ಎಲ್ಲೀ ಇವಳ; ಅಳೋವಂಥಾದ್ದೇನಾತೋ ಮಾರಾಯಾ?

ಬೀರಯ್ಯ : ಯಾಕಳಬಾರದು ಹೇಳು, ನನಗ್ಯಾಕಪ್ಪ ದುಃಖ ಅಂದರೆ ಈ ಸಿಟಿ ಬಗ್ಗೆ ನನ್ನ ಅಭಿಪ್ರಯ ಏನು ಅಂತ ಯಾರು
ಕೇಳೋದೇ ಇಲ್ಲ. ನೀ ಕೇಳ್ತೀಯೇನೋ ಅಂದರೆ ನನಗೆ ಹೆಂಡಾ ಬೇಕಾಗಿದೆ.

ಸಾಂಬ : ಕೇಳ್ತೀನಿ ಹೆಂಡ ಕೊಡ್ತಿಯೇನಣ್ಣಾ?

ಬೀರಯ್ಯ : ತಗೊ. (ಕೊಡುವನು. ಸಾಂಬ ಮನಸಾರ ಕುಡಿದು ಕುಡಿದ ಮ್ಯಾಲೆ) ಕೇಳು.

ಸಾಂಬ : ತಮ್ಮಾ ಈ ಸಿಟಿ ಬಗ್ಗೆ ನಿನ್ನ ಆಭಿಪ್ರಾಯ ಏನು?

ಬೀರಯ್ಯ : (ಉತ್ಸಾಹದಿಂದ) ಈ ಸಿಟಿ ಅಂದರೆ ಕೇಳು ಗುರು ಒಂದು ಚರಂಡಿ ಕೆರೆ. ನೋಡಣ್ಣಾ ಇದುಮೂಲದಲ್ಲದಿ
ನದೀನೇ. ಆದರೆ ಒಡ್ಡುಕಟ್ಟಿ ಕೆರೆ ಮಾಡಿದ್ದಾರೆ. ಇದರ ಸುತ್ತ ಕಾಡು. ಅಂದರೆ ಗಿಡಗಂಟಿ ಮರಗಳು ದಟ್ಟವಾಗಿ ಬೆಳೆದ
ಪ್ರದೇಶ ಅಂತ ಅರ್ಥ. ಆದರೆ ನಾನು ಹೇಳೋ ಕಾಡಿನಲ್ಲಿ ಅಂಥ ಮರಗಿಡ ಇಲ್ಲ. ಬರೀ ಮುಳ್ಳಿನ ಗಿಡಗಳು, ಮುಳ್ಳಿನ
ಮರಗಳು. ಈ ಗಿಡ ಮರಗಳಿಗೆ ಹಣ್ಣ ಜೋತು ಬಿದ್ದಿವೆ; ಈ ಹಣ್ಣು ತಿನ್ನಬೇಕೂಮತೀಯಾ ಕಳ್ಳ ನೀನು. ಹತ್ತಿರ ಹೋಗಿ
ನೋಡಿದರೆ ಹಣ್ಣಲ್ಲ, ಅವು ಮನುಷ್ಯರ ತಲೆಬುರುಡೆಗಳು! ಹ್ಯಾಗಿದೆ?

ಸಾಂಬ : (ಇವನೂ ಉತ್ಸಾಹದಿಂದ) ಏನೋ ತಮ್ಮ ನೀನು ನನ್ನ ಕನಸಿನ ಮೊದಲರ್ಧ ಹೇಳ್ತಾ ಇದ್ದೀಯ; ನೀನು
ತಲೆಬುರುಡೆ ಅಂತ ಹೆದರಿ ಓಡಿದೆಯಲ್ಲ, ಆಮೇಲೆ ನಾನು ಹೋದೆ ಅಲ್ಲಿಗೆ. ತಲೆಬರುಡೆ ಇದ್ದುವಲ್ಲ, ನಾ ಹೋದಾಗ
ಅವೆಲ್ಲ ಚಪ್ಪಾಳೆ ತಟ್ಟಿ ನಗತಾ ಇವೆ! ಯಾಕಪ್ಪ ಅಂತ ನೋಡಿದರೆ ಒಬ್ಬ ಧಾಂಡಿಗ ಬೆಸ್ತ ಆ ಕೆರೇಲಿರೋ ಚಿಳಿಮಿಳಿ
ಮೀನುಗಳನ್ನು ಹಿಡಿದು ಹಿಡಿದು ಹಾಗಾಗೇ ನುಂಗುತಾ ಇದ್ದ; ನನಗೂ ಒಂದು ಮರಿ ಮೀನು ಸಿಕ್ಕಿತು. ಟೇಬಲ್ ಮೇಲಿಟ್ಟು
ಕುಯ್ಯೋಣ ಅಂದರೆ ಅದು ಹಾಡೋದಕ್ಕೆ ಸುರು ಮಾಡಿತೆ!

ಬೀರಯ್ಯ : ಏನಂತ?

ಸಾಂಬ :

ಉಳಿಸೆನ್ನ ಜೀವಾ
ಉಪಕಾರ ಮಾಡೋ
ಸೂರ್ಯನ್ನ ಕೊಡತೇನೆ
ಕೆರೆಕಟ್ಟೆ ಒಡೆಯೋ

ಬೀರಯ್ಯ : ಆಮೇಲೆ?

ಸಾಂಬ : ಇಲ್ಲೀತನಕ ನಾನು ಮೀನಿನ ಕಣ್ಣೇ ನೋಡಿರಲಿಲ್ಲ; ನೋಡ್ತ ನೋಡ್ತ ಗಾಬರಿ ಆಗಿ ಎಚ್ಚರಾಯ್ತು, ಅದರ ಕಣ್ಣು
ಥೇಟ್ ನಿನ್ನ ಕಣ್ಣ ಹಾಗೇ ಇದ್ದುವು!

ಬೀರಯ್ಯ : ಛೇ, ಅಷ್ಟು ಬೇಗನೇ ನೀ ಎಚ್ಚರಾದದ್ದು ತಪ್ಪು ಕಣಣ್ಣ.

ಸಾಂಬ : ಇವತ್ತೇನಾರ ಆ ಮೀನು ಕನಸಲ್ಲಿ ಮತ್ತೆ ಬಂದು ಕೆರೆಕಟ್ಟೆ ಒಡೆ ಅಂತ ಗುದ್ದಲಿ ಪಿಕಾಸಿ ಕೊಟ್ಟರೆ ಒಡದೇ
ಬಿಡತೀನಿ ಅಷ್ಟೆ. ಯಾಕಂತೀಯೋ, ಪಾಪ ಚಿಳಿಮಿಳಿ ಮೀನು ಸಾಯೋದನ್ನ ನೋಡಕ್ಕಾಗೋದಿಲ್ಲ ನನ್ನಿಂದ.

ಬೀರಯ್ಯ : ಅಷ್ಟೇ ಅಲ್ಲಪ್ಪ, ಕೆರೆಕಟ್ಟೆ ಒಡೆಯೋದು ನಿನ್ನೊಬ್ಬನಿಂದಲೇ ಆಗದ ಕೆಲಸ. ಪಕ್ಕದಲ್ಲಿ ಗುದ್ದಲಿ ಪಿಕಾಸಿ
ಇಟ್ಟುಕೊಂಡು ನಾನೂ ಮಲಗಿರತೀನಿ. ನನ್ನನ್ನು ಕರೆ.

ಸಾಂಬ : ಏನಂತ ಕರೀಲಿ?

ಬೀರಯ್ಯ : ಬೀರಯ್ಯ ಅಂತ ಕೂಗು, ಸಾಕು. ಇಕಾ ಇಷ್ಟೂ ಹೆಂಡ ನೀನೇ ಕುಡಿ, ಸುಖವಾಗಿ ನಿದ್ದೆ ಬರಲಿ. ಆ ಕನಸು ಮತ್ತೆ
ಬೀಳಲಿ. ನಾನೂ ಬೇಗ ಬರತೀನಿ.

ಸಾಂಬ : ಎಲ್ಲಿಗೆ ಹೊರಟೆ ತಮ್ಮಾ?

ಬೀರಯ್ಯ : ಗುದ್ದಲಿ, ಪಿಕಾಸಿ ತರೋದಕ್ಕೆ, ನೆಪ್ಪಿರಲಣ್ಣಾ ಈಗಷ್ಟೆ ನನ್ನ ಮನಸ್ಸಿನಲ್ಲಿ ಬೀಜ ಬಿತ್ತಿದ್ದೀಯಾ. ನಿನಗಾದರೆ
ಅದು ಬರೀ ಬೀಜ; ನನಗೆ ಅದರ ಫಲ ಕಾಣತಾ ಇದೆ!
        ಸೂರ್ಯನ್ನ ಕೊಡತೇನೆ
        ಕೆರೆಕಟ್ಟೆ ಒಡೆಯೋ….
(ಹಾಡುತ್ತ ಹೋಗುವನು)
ಸಾಂಬಶಿವ ಪ್ರಹಸನ : ದೃಶ್ಯ-೭
(ರಾಜ ಮತ್ತು ಕಾರುಭಾರಿ, ಅರಮನೆ.)

ರಾಜ : ಯಾಕೊ, ಮಗನೇ ತುಂಬಾ ಸಂತೋಷವಾಗಿದ್ದೀಯಾ?

ಕಾರಭಾರಿ : ಅಳೋದಕ್ಕೇನೂ ಕಾರಣ ಎಲ್ಲಾ ಪ್ರಭು.

ರಾಜ : ಎಷ್ಟು ಕಾರಣ ಬೇಕು ನಿನಗೆ? ನೂರು? ಸಾವಿರ?

ಕಾರಭಾರಿ : ಎರಡು ಹೇಳಿ ಪ್ರಭು, ಸಾಕು.

ರಾಜ : ಬಾಯ್ಮುಚ್ಚು, ನಿನ್ನಂಥ ಅಯೋಗ್ಯನಿಂದಲೇ ಹೀಗೆಲ್ಲ ಆದದ್ದು.

ಕಾರಭಾರಿ : ಆದರೆ ಪ್ರಭು….

ರಾಜ : ಬಾಯ್….
(ಕಾರಬಾರಿ ಕೈಯಿಂದ ಬಾಯಿ ಮುಚ್ಚಿಕೊಳ್ಳವನು)

ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ ಹೇಳು.

ಕಾರಭಾರಿ : ಬಾಯ್ಮುಚ್ಚು ಅಂದಿರಲ್ಲ ಪ್ರಭು.

ರಾಜ : ಪರವಾಗಿಲ್ಲ, ಮುಚ್ಕೊಂಡೇ ಹೇಲು

ಕಾರಭಾರಿ : ಏನು ಹೇಳಲಿ ಪ್ರಭು?

ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ.

ಕಾರಭಾರಿ : ಬಂದಿದೆಯಲ್ಲಾ ಪ್ರಭು.

ರಾಜ : ಬರಬೇಕಾದ್ದೇ ಅನ್ನು.

ಕಾರಭಾರಿ : ಬರಬೇಕಾದ್ದೆ

ರಾಜ : ಎಷ್ಟು ಕಡೆ ಕೋಪ ಬಂದಿದೆ ಗೊತ್ತಾ?

ಕಾರಭಾರಿ : ಗೊತ್ತಿಲ್ಲ ಪ್ರಭು

ರಾಜ : ಎರಡು ಕಡೆ. ಹ್ಯಾಗೆ? ಯಾಕೆ? ಅನ್ನು.

ಕಾರಭಾರಿ : ಹ್ಯಾಗೆ? ಯಾಕೆ?


ರಾಜ : ಆ ಕತ್ತೆ ಡಿಂಗ್‌ಡಾಂಗು ನನ್ನ ಪ್ರಾಣ ಉಳಿಸಿತು ಅಂತ ಮಂತ್ರೀ ಮಾಡಿದರೆ ರಾಜ್ಯದ ತುಂಬಾ ಏನಯ್ಯಾ ಅವನ
ಖ್ಯಾತಿ! ಯಾರು ಬಾಯೊಳಗೆಲ್ಲ ಕತ್ತೆ ಹೆಸರೆ; ಅದರದ್ದೆ ಹಾಡು; ಅದರದ್ದೇ ಕೀರ್ತನೆ; ಒಬ್ಬರಿಗಾದರೂ ನಾನು ರಾಜ, ನನ್ನ
ಹೆಸರು ಕಾಲ್ಮಡಿ ಮಹಾರಾಜ ಅಂತ ನೆನಪಿದೆಯಾ? ನನ್ನ ತಲೆಗೆ ಕೋಪ ಬರುತ್ತೋ ಇಲ್ವೋ?

ಕಾರಭಾರಿ : ಬರಬೇಕಾದ್ದೆ, ಬರಬೇಕಾದ್ದೆ. ಇನ್ನೆಲ್ಲಿ ಕೋಪ ಬಂತು ಪ್ರಭು?

ರಾಜ : ಇನ್ನೆಲ್ಲಿ ಕೋಪ ಬಂತು ಅಮತೀಯಾ ಮಗನೇ? ಆ ಹುಡಿಗೀನ್ನ ಕರಕೊಂಬರತ್ತೀನಿ ಅಂದೆ. ಕರಕೊಂಬಂದೆಯಾ?
ಎಷ್ಟು ದಿನ ಕಾಯೋದು? ನನ್ನ ಸೊಂಟಕ್ಕೆ ಕೋಪ ಬರುತ್ತೋ ಇಲ್ವೊ ಹೇಳು?

ಕಾರಭಾರಿ : ಬರಬೇಕಾದ್ದೇ ಪ್ರಭು. ಉದಾರರಾದ ತಾವು ಈ ದಿನವೂ ನನಗೆ ತಮ್ಮ ಕಿವಿಗಳನ್ನು ದಾನ ಮಾಡಿದರೆ
ತಮ್ಮ ಎರಡೂ ಕಡೆಯ ಕೋಪಗಳನ್ನು ಆಯಾಯಾ ಸ್ಥಳದಲ್ಲೇ ಶಾಂತ ಮಾಡಬಲ್ಲೆ.

ರಾಜ : ಅದೇನು ಬೊಗಳು.

ಕಾರಭಾರಿ : ಪ್ರಭು ನಿಮ್ಮ ಮಂತ್ರಿ ಡಿಂಗ್‌ಡಾಂಗ್ ಸಾಹೇಬರು ಈಗ ಮೀನುಗುತಾರೆ! ಬುದ್ಧಿವಂತರ ತಲೆಯಲ್ಲಿ,


ಹುಡುಗಿಯರ ಹೃದಯದಲ್ಲಿ, ಮುದಿಯರ ಕಣ್ಣಲ್ಲಿ, ನಮ್ಮ ರಾಜ್ಯದ ಆಕಾಶದಲ್ಲಿ ಮಿನುಗುತಾರೆ.

ರಾಜ : ಹೌದು.

ಕಾರಭಾರಿ : ಪ್ರಭು ಈಗ ಮಿನುಗುತಾರೆಯರೆಲ್ಲ ಯಾವಾಗ ಇದ್ದಿಲಾಗುತ್ತಾರೆ?

ರಾಜ : ಯಾವಾಗ?

ಕಾರಭಾರಿ : ಮಧುವೆ ಆದಾಗ! ಡಿಂಗ್‌ಡಾಂಗ್ ಸಾಹೇಬರಿಗೆ ಒಂದು ಮದುವೆ ಮಾಡಿ.

ರಾಜ : ಭಲೇ! ಕಾರಭಾರೀ, ನೀನೂ ಬುದ್ಧಿಜೀವಿ ಆಗಿಬಿಟ್ಟೆಯಲ್ಲೋ ನನ್ನ ದಯದಿಂದ! ಎಲಾ ಯಾರಲ್ಲಿ?

ಚಾರ : (ಪ್ರವೇಶಿಸಿ) ಏನಪ್ಪಣೆ ಪ್ರಭೂ?

ರಾಜ : ಬೀಳಿ ಆನೇನ್ನ ಕರಿ.

ಚಾರ : ಅಪ್ಪಣೆ (ಹೋಗುವನು)

ರಾಜ : ಕಾರಭಾರೀ, ಆ ಡಿಂಗ್‌ಡಾಂಗ್ ಕತ್ತೆಗೆ ಒಂದು ಒಳ್ಳೇ ಮದುವೇನೇ ಮಾಡೋಣ. ಆದರೆ ಕತ್ತೆ ಜೊತೆ ಬೇಡ.
ಮುದ್ದಾಗಿರೋ ಹುಡಿಗೀ ಜೊತೆಗೇ ಮಾಡೋಣ. ಡಿಂಗ್‌ಡಾಂಗ್ ಹೆಂಗೂ ಕತ್ತೆ! ಮದುವೆ ಮಾಡಿದರೆ ಅದರ ಹೆಂಡತಿ
ಕೊನೆಗೂ ಒರೋದು ನಮ್ಮ ಹತ್ತಿರಾನೇ; ಹ್ಯಾಗಿದೆ ಐಡಿಯಾ?

ಕಾರಭಾರಿ : ಅದ್ಭುತ ಪ್ರಭೂ!

ಬಿಳಿ ಆನೆ : (ಒಂದು ನಮಸ್ಕರಿಸಿ) ಪ್ರಭೂ ಕರೆಸಿದಿರಂತೆ.

ರಾಜ : ಅಯ್ಯಾ ಬಿಳಿ ಆನೆ, ನಮ್ಮ ಮಂತ್ರಿ ಡಿಂಗ್‌ಡಾಂಗನಿಗೆ ಸ್ವಯಂವರದ ಏರ್ಪಾಡು ಮಾಡು. ಇಷ್ಟವಿದ್ದವರೆಲ್ಲಾ
ತಂತಮ್ಮ ಹುಡಿಗೇರನ್ನ ಕರಕೊಂಬಂದು ಸ್ವಯಂವರ ದಲ್ಲಿ ಭಾಗವಹಿಸಬಹುದು. ಆಯ್ಕೆ ಮಾತ್ರ ಡಿಂಗ್‌ಡಾಂಗನದೇ.
ತಿಳಿಯಿತೊ?
ಬಿಳಿ ಆನೆ : ತಿಳಿಯಿತು. ಆದರೆ ಇದು ಸ್ವಯಂವರ ಅಲ್ಲ; ಡಿಂಗ್‌ಡಾಂಗ್ ಸಾಹೇಬರು ತಮ್ಮ ವಧುವನ್ನು ತಾವೇ
ಆಯ್ದುಕೊಳ್ಳೋದರಿಂದ ಇದು ಸ್ವಯಂವಧು ಸಮಾರಂಭ ಪ್ರಭೂ.

ರಾಜ : ಸರಿ. ಈಗಲೇ ರಾಜ್ಯಾದ್ಯಾಂತ ಡಂಗುರ ಸಾರಿ ಕೂಡಲೇ ಸ್ವಯಂವಧು ಸಮಾರಂಭ ಏರ್ಪಡಿಸು.

ಬಿಳಿ ಆನೆ : ಆಗಲಿ ಪ್ರಭು (ಹೋಗುವನು)

ರಾಜ : ಆಯ್ತಯ್ಯಾ, ಕಾರಭಾರಿ, ಡಿಂಗ್‌ಡಾಂಗ್ ನ ವಿಚಾರ ಇಲ್ಲಿಗೆ ಸಮಾಪ್ತಿ ಆಯ್ತು. ತಲೆಕೋಪ ಉಪಶಮನವಾಯ್ತು.
ಈಗ ಸೊಂಟದ ಕೋಪಕ್ಕೆ ಏನು ಹೇಳುತ್ತೀ- ಅದರೆ  ಕೋಪವೇ  ಜಾಸ್ತಿ.

ಕಾರಭಾರಿ : ಆ ಭಾಗದ ಕೋಪದ ಬಗ್ಗೆ ಹೇಳೋದಾದರೆ, ಪ್ರಭು-ಅದೂ ವಿನಾಕರಣ

ರಾಜ : ಅಂದರೆ?

ಕಾರಭಾರಿ : ತಾವು ಹೇಳಿದ ಹುಡುಗಿಯನ್ನು ನಾನಾಗಲೇ ನೋಡಿ ಬಂದಿದ್ದೇನೆ.

ರಾಜ : (ಉತ್ಸಾಹದಿಂದ) ಪ್ರತ್ಯಕ್ಷ ಕಂಡೆಯಾ?

ಕಾರಭಾರಿ : ಪ್ರತ್ಯಕ್ಷ ಕಣ್ಣಾರೆ ಕಂಡೆ ಪ್ರಭು.

ರಾಜ : ನೋಡೋಕೆ ಹ್ಯಾಗಿದಾಳೆ?

ಕಾರಭಾರಿ : ಅಯ್ಯೋ ಅದೇನು ಕೇಳುತ್ತೀರ…. ಗೊಂಬೆ ಗೊಂಬೆ!

ರಾಜ : ಪರಮ ಸುಂದರಿ ಅಲ್ವಾ?

ಕಾರಭಾರಿ : ತ್ರಿಲೋಕ ಸುಂದರಿ ಅಂದ್ರೆ!

ರಾಜ : ಸ್ವಭಾವ ಹ್ಯಾಗೆ?

ಕಾರಭಾರಿ : ತುಂಬಾ ಮೃದು.

ರಾಜ : ನಡವಳಿಕೆ?

ಕಾರಭಾರಿ : ಅದಿನ್ನೂ ಚೆಂಚ. ಅವಳ ಕಣ್ಣು ಮಲ್ಲಿಗೆ ಹೂವಿನ ಥರ, ಕಿವಿ ಸಮಪಿಗೆ ಥರಾ, ತುಟಿ ಸೀಬೆ ಹಣ್ಣಿನ ಥರಾ –
ಒಟ್ಟಿನಲ್ಲಿ ಆಕೆ ಮುಖ ಎದರಹಾಗಿದೆ ಅಂದ್ರೆ, ಅದು ಎದರ ಹಾಗೆ ಅಂತ ಹೇಳೋಕೆ ಆಗೋದೇ ಇಲ್ಲ ಪ್ರಭು.

ರಾಜ : ಅಂದ್ರೆ ಅವಳು ಅಷ್ಟು ಚೆಂದ ಇದ್ದಾಳಂತೀಯಾ?

ಕಾರಭಾರಿ : ಅಯ್ಯೋ ಅಯ್ಯೋ!

ರಾಜ : ಮೂರ್ಖ, ಮತ್ತೆ ನಾವು ಹ್ಯಾಗಿದೀವಿ?

ಕಾರಭಾರಿ : ಅವಳು ಚೆಂದ ಇದಾಳೆ. ತಾವು ಅವಳಿಗಿಂತ ಚೆಂದ ಇದ್ದೀರಿ.

ರಾಜ : ಅವಳ ನಡು?


ಕಾರಭಾರಿ : ತೆಳ್ಳಗಿದೆ. ನಿಮ್ಮದು ಅವಳಿಗಿಂತ ತೆಳ್ಳಗಿದೆ.

ರಾಜ : ಅವಳ ಮುಖ?

ಕಾರಭಾರಿ : ದಾಸವಾಳದ ಹೂವಿನ ಹಾಗೆ, ನಿಮ್ಮದು ಕಮಲದ ಹಾಗೆ.

ರಾಜ : ಮತ್ತೇ?

ಕಾರಭಾರಿ : ಏನೇನು ಮಾತಾಡಿಕೊಂಡ್ವಿ ಗೊತ್ತಾ ಪ್ರಭು?

ರಾಜ : ನಮ್ಮ ಬಗ್ಗೆ? ಏನೇನು?

ಕಾರಭಾರಿ : ನಮ್ಮ ರಾಜರು ಎಷ್ಟು ಒಳ್ಳೆಯವರು! ಎಷ್ಟು ಗಂಭೀರ! ಎಷ್ಟು ಧೀರ! ಎಷ್ಟು ಶೂರ!

ರಾಜ : ಅಂದಳಾ?

ಕಾರಭಾರಿ : ಅವಳಲ್ಲ ನಾನಂದೆ.

ರಾಜ : ಅವಳೇನಂದಳು?

ಕಾರಭಾರಿ : ಕೇಳಿದಳಷ್ಟೇ

ರಾಜ : ಮತ್ತೆ, ನೀ ಏನೂ ಹೇಳಲಿಲ್ವ?

ಕಾರಭಾರಿ : ಬಂದೆ ಬಂದೆ. ಅದನ್ನೇ ಹೇಳೋಣಾಂತಿದ್ದೆ.ದ ನೀವಂದ್ರೆ ಅವಳಿಗೆ ಪ್ರಾಣ ಏನ್ಹೇಳಿ?

ರಾಜ : ಪ್ರಾಣ! ವಯಸ್ಸಿನ ಬಗ್ಗೆ ಏನಾದರೂ ಅಂದಳಾ?

ಕಾರಭಾರಿ : ಛೇ ನಿಮ್ಮ ನ್ನೋಡಿದರೆ ಮದುವೆ ಆಗಿದೆಯಾ ಸ್ವಾಮಿ ಅಂತ ಕೇಳೋಣ ಅನ್ಸತ್ತೆ.

ರಾಜ : ಹೌದಾ? ಹಾಗನ್ನಿಸತ್ತಾ?

ಕಾರಭಾರಿ : ಈ ವಯಸ್ಸಿನಲ್ಲೂ ಹೀಗೆ ಕಾಣುತ್ತೀರಲ್ಲ ಪ್ರಭು!

ರಾಜ : ಈ ವಯಸ್ಸಿನಲ್ಲೂ ಅಂದ್ರೆ? ಏನು ಮಹಾ ನನಗಾಗಿರೋದು? ಅಬ್ಬಬ್ಬಾ ಅಂದ್ರೆ ಅರವತ್ತಾಯ್ತಷ್ಟೆ.

ಕಾರಭಾರಿ : ಅರವತ್ತಾ? ಛೇ, ಛೇ. ನಿಮ್ಮನ್ನೋಡಿದರೆ ಇಪ್ಪತ್ತು ತಪ್ಪಿದರೆ ಹದಿನೈದಾಗಿರ ಬಹುದು ಅನ್ನಿಸುತ್ತೆ.

ರಾಜ : ಅವಳ ತಂದೆ ಏನಾದರೂ ಅಂದನಾ?

ಕಾರಭಾರಿ : ಅಂದರೆ?

ರಾಜ : ಇದು ಇಜ್ಜೋಡಾಯ್ತು…. ಅಂತ ಹೀಗೇನಾದರೂ?


ಕಾರಭಾರಿ : ಛೀ ಛೀ! ನಿಜ ಹೇಳತೀನಿ ಪ್ರಭು; ಆ ಇಡೀ ಮನೆತನಕ್ಕೆ ಮುದುಕರ ಖಯಾಲಿ ಇರೋ ಹಾಗಿದೆ. ಅವರ
ಮನೇಲಿ ಯಾರಯ್ಯಾ ಫೋಟೋ ಇವೆ ಅಂದಿರಿ? ಅಮಿತಾಬ್ ಬಚ್ಚನ್, ರಾಜಕುಮಾರ ಇಂಥ ಪಡ್ಡೆ ಹುಡುಗರದು ಒಂದೂ
ಕೇಳಬೇಡಿ. ಜನಕರಾಜ, ಭೀಷ್ಮ, ಗಾಂಧಿ, ಟಾಲ್ ಸ್ಟಾಯ್, ವ್ಯಾಸ, ದುರ್ವಾಸ ಎಲ್ಲ ಮುದುಕರ ಫೋಟೋಗಳೇ!

ರಾಜ : ಹೌದಾ? ಅದ್ಭುತ; ಒಳ್ಳೆ ಸುಸಂಸ್ಕೃತಿ ಇದೆ ಅಂತ ಆಯ್ತು.

ಕಾರಭಾರಿ : ಮತ್ತೆ, ನಾ ಹೆಂಗಸಾಗಿದ್ರೂ ಅಷ್ಟೆ. ಹುಡುಗರನ್ನ ಕಣ್ಣೆತ್ತಿ ನೋಡುತ್ತಿರಲಿಲ್ಲ. ಬರೀ ನಿಮ್ಮಂಥ ಮುದುಕರನ್ನೇ
ಇಷ್ಟಪಡುತ್ತಿದೆ.ದ ಹುಡುಗರಲ್ಲಿ ಏನು ಇರತದೆ ಹೇಳಿ ಪ್ರಭು?

ರಾಜ : ಹೌದು ಹೌದು. ಅದ್ಯಾಕೆ ಆ ಹಾಳಾದ ಹುಡುಗೀರು, ಹುಡುಗರೂ ಅಂದ್ರೆ ಸಾಯ್ತಾರೋ ನಾ ಬೇರೆ ಕಾಣೆ.

ಕಾರಭಾರಿ : ಅದೇ ಪ್ರಭು, ಪಡ್ಡೆ ಹುಡುಗೇರು ಇದಾರಲ್ಲ, ಕೀಳು ಮನೆತನದವರು, ಅವರಷ್ಟೇ ಹಾಗೆ. ದೊಡ್ಡ ಮನೆತನದ
ಹುಡುಗೇರನ್ನೋಡಿ – ಯಾವಾಗಲೂ ಮುದುಕರನ್ನೇ ನೋಡೋದು, ಅದೂ ನಿಮ್ಮಂಥವರನ್ನೆ; ಯಾಕಂದ್ರೆ ಸಂಸ್ಕೃತಿ
ಇದೆ ನೋಡಿ….

ರಾಜ : ಹಾಗಂತೀಯಾ?

ಕಾರಭಾರಿ : ಮತ್ತೇನು ಆರ್ಡಿನರಿ ಅಂದುಕೊಂಡಿರಾ ಪ್ರಭು? ನಿಮ್ಮ ಆಕಾರ ಏನು! ನಡಿಗೆ ಏನು! ನಿಂತರೆ ನಿಲುವೇನು;
ಕೂತರೆ ಕುಲುವೇನು; ಬಿದ್ದರೆ ಬಿಲುವೇನು; ನಿಮ್ಮಲ್ಲೇನು ದೋಷವಿದೆ ಹೇಳಿ?

ರಾಜ : ಹೇಹೆ ಏನಿದೆ? ಆಗಾಗ ಒಂಚೂರು ಉಬ್ಬಸ ಬರುತ್ತೆ ಅಷ್ಟೆ.

ಕಾರಭಾರಿ : ಅಯ್ಯೋ, ಅಯ್ಯೋ, ಅಯ್ಯೋ ಅದೆಂಥಾ ಉಬ್ಬಸ ಬಿಡಿ, ಮಕ್ಕಳಿಗೂ ಇರುತ್ತೆ. ನಾನು ಸ್ವಥಾ ಸೋಡಿದ್ದೇನೆ :
ಉಬ್ಬಸ ಪಡುವಾಗ ಎಷ್ಟು ಚೆನ್ನಾಗಿ ಕಾಣುತ್ತೀರಿ ಗೊತ್ತಾ ನೀವು? ನಮ್ಮಕ್ಕಳು ಈ ಹುಡುಗರು ಕೆಮ್ಮಲಿ ನಿಮ್ಮ ಹಾಗೆ
ನೋಡೋಣ; ಹುಡುಗಾಟವಾ?

ರಾಜ : ಅವಳ ಹೆಸರೇನು?

ಕಾರಭಾರಿ : ಅವಳ ಹೆಸರು ಬಂಗಾರಿ ಅಂತ.

ರಾಜ : ಹೆಸರು ಚೆನ್ನಾಗಿದೆ. ಯಾವಾಗ ಬರತ್ತಾಳೆ?

ಕಾರಭಾರಿ : ಈಗಂದ್ರೆ ಈಗಲೇ.

ರಾಜ : ಬೇಡ ಬೇಡ ಮೊದಲು ರಾಜ ವೈದ್ಯನನ್ನು ಕರಕೊಂಬಾ.

ಕಾರಭಾರಿ : ತಮ್ಮ ಆರೋಗ್ಯ ಚೆನ್ನಾಗೇ ಇದೆಯಲ್ಲಾ ಪ್ರಭು.

ರಾಜ : ಚೆನ್ನಾಗೇ ಇದೆ. ಕೆಲವು ಭಾಗಕ್ಕೆ ಜಾಸ್ತಿ ಆರೋಗ್ಯ ಬೇಕು. ಕಾರ್ಯಕ್ರಮ ನಾಳೆ ರಾತ್ರಿ ಇರಲಿ. ಪ್ರವಾಸಿ
ಮಂದಿರದಲ್ಲಿ ಆದೀತೋ? ರಾತ್ರಿ ಹತ್ತು ಗಂಟೆಗೆ ನಾವು ಬರುತ್ತೇವೆ. ಎಲ್ಲಾ ಸರಿಯಾದ ವ್ಯವಸ್ಥೆ ಆಗಿರಬೇಕು. ಆ
ನನ್ಮಕ್ಕಳು ಬಿಳಿಆನೆ, ಚಿಲ್ರೆ ಇದ್ದಾರಲ್ಲಾ-ಅವರಿಗೆ ಹೇಳಿ ವ್ಯವಸ್ಥೆ ಮಾಡು. ವ್ಯವಸ್ಥೆಯಲ್ಲಿ ಏನಾದರೂ ಯಪರಾ ತಪರಾ
ಆದರ ಮಗನೆ, ನಾವು ಯಾರನ್ನೂ ಕ್ಷಮಿಸೋದಿಲ್ಲ. (ಹೋಗುವನು)

ಕಾರಭಾರಿ : ಯಾರಲ್ಲಿ? (ಚಾರ ಬರುವನು)

ಚಾರ : ಸ್ವಾಮಿ ಏನಪ್ಪಣೆ?


ಕಾರಭಾರಿ : ಬೀಳಿ ಆನೇನ್ನ ಕರಿ. (ಕರೆದುಕೊಂಡು ಬರುವನು)

ಕಾರಭಾರಿ : ಬೀಡಯ್ಯಾ ಬಿಳಿ ಆನೆ, ನಾಳೆ ರಾತ್ರಿ ಪ್ರವಾಸಿ ಮಂದಿರದಲ್ಲಿ ರಾಜರಿಗೆ ಬೇಕಾದವರು ಯಾರೋ ಬರುತ್ತಾರೆ.
ಸರಿಯಾಗಿ ವ್ಯವಸ್ಥೆ ಮಾಡು.
(ಕಾರಭಾರಿ ಹೋಗುವನು. ಬಿಳಿ ಆನೆ ತನ್ನ ಜೇಬಿನಲ್ಲಿಯ ಕಲಿಂಗ್ ಬೆಲ್ ತೆಗೆದು ಒತ್ತುವನು. ಚಿಲ್ರೆ ಬರುವನು)

ಬಿಳಿ ಆನೆ : ಯೋ…. ಬೇಕಾದವರು ಯಾರೋ ಬರತಾರೆ ನಾಳೆ ರಾತ್ರಿ, ಪ್ರವಾಸಿ ಮಮದಿರಕ್ಕೆ. ಸರಿಯಾಗಿ ವ್ಯವಸ್ಥೆ
ನೋಡಿಕೊ.
(ಬಿಳಿ ಆನೆ ಹೋಗುವನು. ಚಿಲ್ಲರೆ ತನ್ನ ಜೇಬಿನಲ್ಲಿಯ ಕಾಲಿಂಗ್ ಬೆಲ್ ಒತ್ತುವನು. ಅದು ಧ್ವನಿ ಮಾಡುವುದಿಲ್ಲವಾದ್ದರಿಂದ
ತೆಗೆದುಕೊಂಡು ಒಳಗೆ ಹೋಗುವನು.)
ಸಾಂಬಶಿವ ಪ್ರಹಸನ : ದೃಶ್ಯ-೮
(ಪ್ರವಾಸಿ ಮಂದಿರ, ಕೋಣೆಯಲ್ಲಿ ಸಾಂಬ ಸೀರೆ ಉಟ್ಟು ಉಳಿದಂತೆ ಶೃಂಗಾರ ಮಾಡಿಕೊಳ್ಳುತ್ತಿದ್ದಾನೆ. ಶಿವ
ಆಶ್ಚರ್ಯದಿಂದ ನೋಡುತ್ತಿದ್ದಾನೆ.)

ಶಿವ : ನನ್ನ ಕೇಳಿದರೆ ನಾವು ಈ ಊರನ್ನ ಎಷ್ಟು ಬೇಗನೆ ಬಿಟ್ಟರೆ ಅಷ್ಟು ಉತ್ತಮ. ಆ ರಾಜ, ಆ ಬಿಳಿ ಆನೆ, ಆ ಕಾರಭಾರಿ-
ಇವರ ಜೊತೆಗೆಲ್ಲಾ ನೀ ಆಟ ಆಡೋದನ್ನ ಕಂಡರೆ ನನಗ್ಯಾಕೋ ಹೆದರಿಕೆ ಆಗುತ್ತಪ್ಪ.

ಸಾಂಬ : ಹೆದರಿಕೊಳ್ಳೋವಂಥಾದ್ದೇನಿದೆ? ಆಟ ಆಡೋದಪ್ಪ. ಗೆದ್ದರೆ ಸ್ತೀಲಾಭ. ಸೋತರೆ ಕತ್ತೇಬಾಲ ಹೋಯ್ತು.


ಗಣೇಶನ ವರ ಹುಸಿಹೋದರೆ-ಅದು ದೇವರ ಕೇಡು. ನೀ ಇದಕ್ಕೆಲ್ಲಾ ತಲೆ ಕೆಡೆಸಿಕೋಬೇಡ. ಆ ಮುತ್ತುಕೊಡು, ಗಜನಿಂಬೆ
ಸಿಕ್ಕಿದ್ದಳ?

ಶಿವ : ಸಿಕ್ಕಿದ್ದಳು.

ಸಾಂಬ : ಏನಂತೆ?

ಶಿವ : ಇನ್ನೇನಂತೆ. ಸ್ವಯಂವರ ಅಲ್ಲ ಸ್ವಯಂವಧು ಸಮಾರಂಭಕ್ಕೆ ಬಂದರೆ ಸರಿ ಇಲ್ಲದಿದ್ದರೆ ಹೊರಿಸಿಕೊಂಡು
ಹೋಗತೇನೆ ಹುಷಾರಂತ ಅವಳಮ್ಮ ಹೆದರಿಕೆ ಹಾಕುತ್ತಿದ್ದಳು.

ಸಾಂಬ : ಅಲ್ಲಿಗೆ ಸರಿಹೋಯ್ತಲ್ಲ.

ಶಿವ : ಎಂಥ ಸರಿಹೋಯ್ತು? ಸತ್ತರೂ ಕತ್ತೆ ಜೊತೆ ಮದುವೆ ಆಗೋದಿಲ್ಲ ಅಂತ ಇವಳು ಹಟಹಿಡಿದಿದ್ದಳು.

ಸಾಂಬ : ಮುಂದೆ?

ಶಿವ : ಉಪಾಯ ಹೇಳಿಕೊಡೋಣ ಅಂದರೆ ಆ ಮುದಿ ಹೆಂಗಸು ಇವಳನ್ನ ಬಿಟ್ಟು ಅಲುಗಾಡಲಿಲ್ಲ. ಕೊನೆಗೇನೋ
ಉಪಾಯ ಮಾಡಿ ಹೇಳ್ದೆ. ಕತ್ತೆ ಸ್ವಯಂವರಕ್ಕೆ ನೀನು ಬಾ. ಅದು ನಿನ್ನನ್ನೇ ಆರಿಸೋ ಹಾಗೆ ಮಾಡ್ತೀನಿ. ಹೆಸರಿಗೆ ಕತ್ತೆ
ಆದರೂ ನಾನಿರತೀನಲ್ಲವ? -ಅಂದೆ.

ಸಾಂಬ : ನಾಳೆ ಸ್ವಯಂವರಕ್ಕೆ ಬರತಾಳೋ ಹ್ಯಾಗೆ?

ಶಿವ : ಬರತೀನಿ; ಮುಂದೇನೇ ಅಪಾಯ ಅದರೂ ನೀನೇ ಜವಾಬ್ದಾರಿ ಅಂದಳು. ಆಗಲಿ ಬಾ ಅಂದೆ. ಬರತಾಳೆ. ಏನಪ್ಪಾ
ಒಳ್ಳೆ ಹೆಂಗಸಿನ ಥರ ಮೇಕಪ್ ಮಾಡಿಕೊಳ್ತ ಇದ್ದೀಯ.

ಸಾಂಬ : ಮಗನೇ ಈ ಆಟದ ಮೋಜು ಇದೇ ಕಣೊ. ಎಲ್ಲರೂ ಮೇಕಪ್ ಮಾಡಿ ಕೊಳ್ತಾರೆ ಇಲ್ಲಾ ತೆಗೀತಾರೆ. ಮೇಕಪ್
ಮಾಡಿಕೊಂಡರೆ ಕತ್ತೆ ರಾಜ ಆಗುತ್ತದೆ. ತೆಗೆದರೆ ರಾಜ ಕತ್ತೆ ಆಗತಾನೆ. ಹೆಂಗಸು ಗಂಡಸಾಗುತ್ತೆ. ಗಂಡಸು
ಹೆಂಗಸಾಗುತ್ತೆ. ಚಿಲ್ಲರೆ ಬಂದ ಅಂತ ಕಾಣತ್ತೆ ಹೋಗಿ ನೋಡು.

ಶಿವ : ನನಗ್ಯಾಕೋ ಗಾಬರಿ ಆಗುತ್ತೇ. ನಾ ಹೋಗಲೇನಷ್ಟ?

ಸಾಂಬ : ಇರಯ್ಯ, ಒಳ್ಳೆ ಮನರಂಜನೆ ಕೊಡ್ತೀನಿ.


(ರಂಗದ ಇನ್ನೊಂದು ಬದಿಗೆ ಅಂದರೆ ಕೋಣೆಯ ಹೆರಗೆ ಚಿಲ್ಲರೆ ಬರುವನು.)

ಚಿಲ್ಲರೆ : ಯಾರಯ್ಯಾ ಅಲ್ಲಿ?


ಚಾರ : ಡಿಂಗ್‌ಡಾಂಗ್ ಸ್ವಾಮಿ.

ಚಿಲ್ಲರೆ : ಯಾರೋ ಬಂದವರಂತೆ, ಎಲ್ಲಯ್ಯಾ ಅವನು?

ಚಾರ : ಡಿಂಗ್‌ಡಾಂಗ್ ಸಾಹೇಬರ ಪೀಯೆ ಒಳಗವರೆ.

ಚಿಲ್ಲರೆ : ಯಾರು. ಶಿವಾನ?

ಚಾರ : ಹೌದು, ಅವರ ಜೊತೆ ಇನ್ನೊಬ್ಬರವರೆ.

ಚಿಲ್ಲರೆ : ಹೌದು, (ಸಮೀಪಿಸಿ ಕಿವಿಯಲ್ಲಿ) ಗಂಡಸೊ? ಹೆಂಗಸೊ?

ಚಾರ : ಗಂಡಸ್ರು ಸ್ವಾಮಿ,

ಚಿಲ್ಲರೆ : ನಮ್ಮ ಸಾಹೇಬರಿಗೇನು ಸಂಬಂಧ?

ಚಾರ : ಸಾಹೇಬರಿಗೆ? ಛೇ, ಅವರಯ್ಯಾರೋ ಬೇವಾರ್ಸಿಗಳ ಥರ ಇದಾರೆ ಸ್ವಾಮಿ, ಅವರಯ್ಯಾರು ದೊಡ್ಡೋರಲ್ಲ ಬಿಡಿ.

ಚಿಲ್ಲರೆ : ಆರ್ಡಿನರಿ ಅಂತಿಯಾ? ಹಾಗಿದ್ದರೆ ನಮ್ಮ ಸಾಹೇಬರು ಹೇಳೋ ವ್ಯಕ್ತಿ ಇನ್ನೂ ಬಂದಿಲ್ಲವೋ ಏನೊ! ಹೋಗಲಿ
ಶಿವನಿಗೆ ಹೇಳು, ಸಣ್ಣ ಸಾಹೇಬರು ಬಂದಿದ್ದಾರೆ ಬರಬೇಕಂತ ಹೇಳು.

ಶಿವ : (ಹೊರಬರುತ್ತ) ಡಿಂಗ್‌ಡಾಂಗ್ ಸ್ವಾಮೀ.

ಚಿಲ್ಲರೆ : ಡಿಂಗ್‌ಡಾಂಗ್! ಸಾಹೇಬರು ಹೇಳಿದರು; ಯಾರೋ ದೊಡ್ಡವರು ಬರತ್ತಾರಂತೆ, ಬಂದಿದಾರಾ?

ಶಿವ : ದೊಡ್ಡೋರಯಾರು ಬಂದಿಲ್ಲ, ಯಾವುದೋ ಒಂದು ಹೆಂಗಸಿದೆ.

ಚಿಲ್ಲರೆ : ಹೆಂಗಸು? ಇವನ್ಯಾವನೋ ಗಂಡಸು ಅಂದನಲ್ಲಯ್ಯಾ, ಹ್ಯಾಗಿದಾಳೆ?

ಶಿವ : ಚೆನ್ನಾಗಿದಾಳೆ, ರೂಮು ಬೇಕು ಅಂದಳು.

ಚಿಲ್ಲರೆ : ಒಬ್ಬಳ ೇ  ಇದಾಳಾ?

ಶಿವ : ಹೌದು.

ಚಿಲ್ಲರೆ : ಅಯೋಗ್ಯ, ಒಳಗಡೆ ನೀನೋಬ್ಬನೇ ಏನ್ಮಾಡುತ್ತಿದ್ದೆ?

ಶಿವ : ಏನಿಲ್ಲ ದೇವರು, ಸಂಡಾಸ ಎಲ್ಲಿದೆ ಅಂದಳು; ತೋರಿಸ್ತಿದ್ದೆ.

ಚಿಲ್ಲರೆ : (ತನ್ನಲ್ಲಿ) ಓಹೋ ಯಾರೋ ದೊಡ್ಡವರು ಅಂತ ಹೇಳಿ, ಗಾಬರಿ ಹುಟ್ಟಿಸಿ ಒಳಗೊಳಗೇ ಏನೋ ವ್ಯವಹಾರ
ಮಾಡ್ತಿದ್ದಾನೆ ನನ್ನ ಮಗ ಬಿಳಿ ಆನೆ! ಇರಲಿ.
(ಪ್ರಕಾಶ) ಯೋ, ನೀನೇನಯ್ಯಾ ಅವಳಿಗೆ ಸಂಡಾಸ ತೋರಿಸೋದು? ಅದನ್ನ ತೋರಿಸೋದಕ್ಕೆ ನಾನಿಲ್ಲವ?
ಹೋಗ್ಹೋಗು ಡಿಂಗ್‌ಡಾಂಗ್ ಹಸಿದಿರಬೇಕು. ಮೇವು ಹಾಕ್ಹೋಗು. (ಶಿವ ಹೋಗುವನು. ಚಿಲ್ಲರೆ ಒಳಗೆ ಹೋಗುವನು.)
ಸಾಂಬ : (ಇವನನ್ನು ನೋಡಿ) ಅಯ್ಯಯ್ಯಯ್ಯಯ್ಯೋ! ನಿಮ್ಮನ್ನೋಡಿ ತುಂಬ ಸಂತೋಷವಾಯ್ತು! ಎಷ್ಟು ಸಂತೋಷ
ಅಂದರೆ, ಅಯ್ಯಯ್ಯೋ ನನಗೆ ಹೇಳೋಕ್ಕೇ ಆಗ್ತಿಲ್ಲ. ನನಗೆ…. ನನಗೆ ತುಂಬಾ ಸಂತೋಷವಾಯ್ತು ಬಿಡಿ. ನಿಮಗೂ
ಆಗಲಿಲ್ಲವ?

ಚಿಲ್ಲರೆ : (ತಬ್ಬಿಬ್ಬಾಗಿ) ಏನಂದ್ರಿ?

ಸಾಂಬ : ನಿಮಗೂ ಸಂತೋಷ ಆಗಲಿಲ್ಲವ?

ಚಿಲ್ಲರೆ : ಇಲ್ಲ.

ಸಾಂಬ : ಅಯ್ಯಯ್ಯೋ ಆಗಿದ್ದರೆ ತುಂಬ ಚೆನ್ನಾಗಿತ್ತು.

ಚಿಲ್ಲರೆ : ಏನಾಗಿದ್ದರೆ?

ಸಾಂಬ : ಅದೇ ಸಂತೋಷ.

ಚಿಲ್ಲರೆ : ಯಾಕೆ?

ಸಾಂಬ : ಯಾಕೆಂದರೆ- ಮನುಷ್ಯನಿಗೆ ಸಂತೋಷ ಆದರೆ ಒಳ್ಳೇದಲ್ಲವ? ಆರೋಗ್ಯಚೆನ್ನಾಗಿರುತ್ತೆ. ಚೆನ್ನಾಗಿ ಹಸಿವಾಗುತ್ತೆ.


ಚೆನ್ನಾಗಿ ಭೇದಿಯಾಗುತ್ತೆ.

ಚಿಲ್ಲರೆ : ಹೌದೋ ಏನೋ!

ಸಾಂಬ : ಅದಕ್ಕೇ ಮತ್ತೆ, ಪಾಪ ಆಗಿದ್ದರೆ ಚೆನ್ನಾಗಿತ್ತು.

ಚಿಲ್ಲರೆ : ಏನಾಗಿದ್ದರೆ?

ಸಾಂಬ : ಅದೇ ಸಂತೋಷ.

ಚಿಲ್ಲರೆ : ಓ! ಹೌದು, ನೀವ್ಯಾರು, ಸಾಹೇಬರ ಪೈಕೀನ?

ಸಾಂಬ : ಅಯ್ಯೋ ಒಳಗೆ ಬನ್ನೀಂದ್ರೆ.

ಚಿಲ್ಲರೆ : ನೀನು ಯಾರು? ಇಲ್ಲಿಗ್ಯಾಕೆ ಬಂದೆ?

ಸಾಂಬ : ಚಿಲ್ಲರೆ ಆಫೀಸಲ್ಲಿ ಅಟೆಂಡರ‍ಕೆಲಸ ಇದೆಯಂತಲ್ಲಾ?

ಚಿಲ್ಲರೆ : ಹೌದು ಖಾಲಿ ಇದೆ.

ಸಾಂಬ : ಕೊಡಿಸಿ ಬಿಳಿ ಆನೆ ಸಾಹೇಬರ ಆ ಕೆಲಸ ಅಂದೆ. ಪ್ರವಾಸಿ ಮಂದಿರಕ್ಕೆ ಬಾ ಕೊಡತೀನಿ ಅಂದರು, ಅದಕ್ಕೇ
ಬಂದೆ.

ಚಿಲ್ಲರೆ : ಭಲೆ ನನ ಮಗನೆ! ನನ್ನ ಆಫೀಸಲಲ್‌ಇ ಇವನು ಕೆಲಸ ಕೊಡಿಸೋನಂತೆ! ಏನೇ ನಿನ್ನ ಹೆಸರು?

ಸಾಂಬ : ಸುಂದರಿ.
ಚಿಲ್ಲರೆ : ನೋಡೇ ಸುಂದರೆ, ಅವನಿದ್ದಾನಲ್ಲ ನನ್ನ ಮಗ ಬಿಳಿಯಾನೆ, ಲೋಫರ ನನಮಗ-ಸುಳ್ಳು ಸುಳ್ಳೇ ನಿನಗೆ ಕೆಲಸ
ಕೊಡ್ತೀನಿ ಅಂತ ಹೇಳಿದಾನೆ. ಯಾರರ್ಯ್ಯಾದೋ ಹತ್ತಿರ ಹೋಗಿ ನೀನು ಮೋಸ ಹೋಗಬೇಡ.

ಸಾಂಬ : ಅವಯ್ಯಾ ಏನೇನು ಹೇಳ್ದಾ ಅಂತ! ಬಂದದ್ದಕ್ಕೆ ಒಳ್ಳೇದೇ ಆಯ್ತು, ಸಧ್ಯ ದೇವರಂಥ ನೀವು ಸಿಕ್ಕಿರಿ. ನೀವೇ ಆ
ಕೆಲಸ ಕೊಡಿಸಿ ಸ್ವಾಮೇರಾ.

ಚಿಲ್ಲರೆ : ಆ ನನ್ನ ಮಗ ಹೀಗೆ ಎಷ್ಟು ಜನ ಹುಡಿಗೇರಿಗೆ ಮೋಸ ಮಾಡಿದನೊ! ಅಂದ ಹಾಗೆ ಹೆಸರೇನಂದಿ?

ಸಾಂಬ : ಸುಂದರಿ.

ಚಿಲ್ಲರೆ : ಹೆಸರು ಚೆನ್ನಾಗಿದೆ. ಹತ್ತಿರ ಬಾ, ಒಂದು ವಿಷಯ ಗೊತ್ತಿಲ್ಲ ನಿನಗೆ. ರಾಜರು ನನ್ನ ಮಾತನ್ನೇ ಕೇಳೋದು. ಮೊನ್ನೆ
ಏನಂದರು ಗೊತ್ತ? – ಬಿಳಿ ಆನೆಗೆ ಬುದ್ದಿ ಕಡಿಮೆ, ನನ್ನ ಮಗನಿಗೆ ಕೊಡೋ ಒಂದು ಗೂಸ- ಅಂದರು. ಹ್ಯಾಗೆ ಕೊಡಲಿ
ಪ್ರಭು ಅಂದೆ. ಪ್ರಭುಗಳ ಏನು ಮಾಡಿದರು ಗೊತ್ತ? ‘ಹೀಗೆ!’ಅಂದು ನನ್ನ ತಿಗದ ಮೇಲೆ ಒದ್ದೇ ಬಿಟ್ಟರು, ಅಂದರೆ!
(ಎಂದು ಹೇಳಿ ಆನಂದದಿಂದ ನಗುವನು)

ಸಾಂಬ : ಅಬ್ಬ! ಅಷ್ಟು ಸಲಿಗೆ ಇದೆಯೆ ರಾಜರ ಹತ್ತಿರ ನಿಮಗೆ? ಹಂಗಾದರೆ ರಾಜರಿಗೆ ಹೇಳಿ ನೀವೇ ಒಂದು ಕೆಲಸ
ಕೊಡಿಸಿ ಸ್ವಾಮಿ.

ಚಿಲ್ಲರೆ : ರಾಜರು ಯಾಕೆ, ನಾನಿಲ್ಲವೆ? ನಾನೇನಾದರೂ ಬರೆದು ಕೊಟ್ಟರಾಯ್ತು. ರಾಜರು ಒಂದಕ್ಷರ ಆಚೀಚೆ ಬದಲಿ
ಮಾಡಲಿ ನೋಡೋಣ. ರಾಜರ ಆರ್ಡರೆಲ್ಲಾ ನಾನೇ ಬರೆಯೋದು ಗೊತ್ತಾ?

ಸಾಂಬ : ಅಯ್ಯಯ್ಯೋ ಹಂಗಾರೆ ನೀವೇ ಗತಿ. ಕೆಲಸ ಕೊಡಿಸಿ ಸ್ವಾಮೇರಾ.

ಚಿಲ್ಲರೆ : ಕೊಡಿಸೋಣ. ಕೊಡಿಸಿದರೆ ಮಾಮೂಲಿ, ವಗೈರೆ….ಗೊತ್ತಲ್ಲ?

ಸಾಂಬ : ಅಯ್ಯೋ ನೀವ್ಯಾಕೆ ಯೋಚನೆ ಮಾಡ್ತೀರಿ? ನನಗಿನ್ನೇನಿಲ್ಲ ನಾ ಕೊಡೋದರೊಳಗೆ ಆ ದೊಡ್ಡ ಸಾಹೇಬ


ಬಂದಗಿಂದಾನು ಅಂತ ಗಾಬರಿ ಅಷ್ಟೆ.

ಚಿಲ್ಲರೆ : ಬಂದರೆ? ನಾ ಹೆದರತ್ತೀನ? ಆ ಮಗನಿಗೆ ನಾ ಡೋಂಟ್ ಕೇರ ಮಾಸ್ಟರಂತ ಗೊತ್ತಿಲ್ಲವ? ಅವನಲ್ಲ, ಅವರಪ್ಪ
ಬಂದರೂ ಜಪ್ಪಯ್ಯಾ ಅನ್ನಲ್ಲ ನಾನು. ಏನ್ ಅಂದುಕೊಂಡಿದಾನೆ ಆ ನನ್ನ ಮಗ?

ಸಾಂಬ : ಅರೆರೇ, ಹಾಂಗಿದ್ದರೆ ತಡ ಯಾಕೆ ಬೇಗ ಬಂದು ಸೇವೆ ಒಪ್ಪಿಸ್ಕೊಳ್ಳಿ ಅಂದರೆ….

ಚಿಲ್ಲರೆ : ಸೇವೆ ಅಂದರೆ?

ಸಾಂಬ :

ತರವೇ ಮಾರನೇ ಇದು,


ನಾರಿಯಾದೆನ್ನೊಳು ಕ್ರೂರಸೊಭಾವವು
ಗುರಿಯಿಟ್ಟು ಬಾಣವ
ಟಸಪಸ ಟಸಪಸ ಎಸೆವೂದು ತರವೇನೊ

ಚಿಲ್ಲರೆ : ಭಲೆ ಸುಂದರಿ ನನ್ನ ಹೃದಯವನ್ನು ನಿನ್ನ ಪಾದಾರವಿಂದಕ್ಕೆ ಅರ್ಪಿಸಿರುವೆನು. (ಇಬ್ಬರ ತಬ್ಬಿಕೊಳ್ಳೂವಷ್ಟರಲ್ಲಿ
ಬಾಗಿಲು ಬಡಿದ ಶಬ್ದ)
ಸಾಂಬ : ಯಾರದು?
ಹೊರಗಿಂದ : ದೊಡ್ಡ ಸಾಹೇಬರು ಬಂದವರೆ, ಬಾಗಿಲು ತಗೀರಿ.

ಚಿಲ್ಲರೆ : ಅಯ್ಯಯ್ಯೋ ದೊಡ್ಡ ಸಾಹೇಬರು!

ಸಾಂಬ : ಒಳಗಡೆ ಸಣ್ಣ ಸಾಹೇಬರಿದ್ದಾರೆ, ಹೋಗಯ್ಯಾ ಮುದಿಯಾ ಅಂತ ಹೇಳತೇನೆ ಬಿಡಿ.

ಚಿಲ್ಲರೆ : ಅಯ್ಯಯ್ಯೋ ಸುಂದರಿ, ದಯಮಾಡಿ ಹಾಗೆ ಹೇಳಬೇಡ, ಬಾಗಿಲು ಹಾಕಿದೆ. ಒಳಗಡೆ ನಾವಿಬ್ಬರೇ ಇದ್ದೀವಿ.
ನೋಡಿದರೆ ಸಾಹೇಬರು ಏನಂದುಕೊಳ್ತಾರೆ? ಅಯ್ಯೋ ನಿನ್ನ ಕಾಲುಬೀಳ್ತೀನಿ. ನನ್ನ ನೌಕರಿ ಹೋಗುತ್ತೆ ದಮ್ಮಯ್ಯಾ!

ಹೊರಗಿಂದ : ಬೇಗ ಬಾಗಿಲು ತಗೀರಿ.

ಚಿಲ್ಲರೆ : ಏನು ಮಾಡಲಿ? ಹ್ಯಾಗೆ ಪಾರಾಗಲಿ?

ಸಾಂಬ : ಮತ್ತೆ ಡೋಂಟ್‌ಕೇರ್ ಮಾಸ್ಟರಂದಿರಿ?

ಚಿಲ್ಲರೆ : ನಿನ್ನ ಕಾಲು ಹಿಡೀತೀನಿ ಸುಂದರೀ. ನಿನಗೆ ನಾಳೇನೇ ಕೆಲಸ ಕೊಡಸ್ತೀನಿ, ಈಗ ಹ್ಯಾಗಾದರೂ ಪಾರು ಮಾಡು.

ಸಾಂಬ : ಹೆಂಗೆ ಮಾಡೋದು? ಸಂಡಾಸಿಗೆ ಬಾಕಲಿಲ್ಲ. ಒಂದು ಕೆಲಸ ಮಾಡು. ಸೀರೆ ಉಟ್ಟುಕೊಂಡು ಬಾಗಿಲ ಹತ್ತಿರ
ಕೂತಿರು. ಇವಳ್ಯಾರುಂತ ದೊಡ್ಡ ಸಾಹೇಬ ಕೇಳಿದರೆ ‘ನನ್ನ ಜೊತೆ ಬಂದವಳೆ’ ಅಂತ ಹೇಳ್ತೀವ್ನಿ. ಸಾಹೇಬರು
ಹೋದಮ್ಯಾಕೆ ಸರಿ ಹೋಯ್ತದೆ, ಏನಂತೀಯಾ?

ಚಿಲ್ಲರೆ : ಸೀರೆ ಉಡೋದೆ?

ಹೊರಗಿಂದ : ಯಾರೀ ಅದು? ಒಳಗಡೆ ಏನ್ನಡೀತಿದೆ?

ಚಿಲ್ಲರೆ : ಕೊಡು ಕೊಡು ಅದನ್ನೇ ಕೊಡು.


(ಸೀರೆ ಕೊಡುವನು. ತನ್ನ ಬಟ್ಟೆ ಬಿಚ್ಚಿ ಅವಸರದಲ್ಲಿ ಸೀರೆ ಉಡುವನು, ಸಾಂಬ ಅವನ ಒಟ್ಟೆಗಳನ್ನೊಯ್ದು, ಅವನಿಗೆ
ಸಿಕ್ಕದ ಸ್ಥಳದಲ್ಲಿ ಬಚ್ಚಿಡುವನು)

ಸಾಂಬ : ಯಾರೀ ಅದು, ಬರೋತನಕ, ತಡೀಬಾರದೇ? ಇರಿ ಬರತೇನೆ. (ಕೈ ಸನ್ನೆಯಿಂದ ಕೂರೋದಕ್ಕೊಂದು ಸ್ಥಾನ
ತೊರಿಸಿ ಹೋಗಿ ಬಾಗಿಲು ತೆಗೆಯುವನು)

ಬಿಳಿ ಆನೆ : ಯಾರಯ್ಯಾ ಇವರು?

ಶಿವ : ಗುರುತಿಲ್ಲ ಸಾರ್, ಯಾರೋ ನಿಮ್ಮ ಪೈಕಿ ಅಂದರು.

ಬಿಳಿ ಆನೆ : ನಮ್ಮ ಪೈಕಿ? ಬುದ್ಧಿಯಿಲ್ಲವೇನಯ್ಯಾ ನಿನಗೆ? ಆ ಚಿಲ್ಲರೆ ನನ್ನ ಮಗ ಎಲ್ಲಿ ಕತ್ತೆ ಕಾಯ್ತಿದಾನೆ?

ಶಿವ : ಗೊತ್ತಿಲ್ಲ ಸ್ವಾಮಿ.

ಬಿಳಿ ಆನೆ : ಯಾರೀ ನೀವು?

ಸಾಂಬ : ಚಿಲ್ಲರೆ ಸಾಹೇಬರು ಯಾವುದೋ ಪೀಯೆ ಕೆಲಸ ಬಿಳಿಆನೆ ಆಫೀಸಲ್ಲಿ ಕೊಡಿಸ್ತೇನೆ ಬಾ ಅಂದರು. ಅದಕ್ಕೆ
ಕಾಯ್ತಾ ಇದೀನಿ.
ಬಿಳಿ ಆನೆ : ಎಲಾ ನನ ಮಗ! ರಾಜರು ಆಜ್ಞೆ ಮಾಡಿದ್ದೇನು, ಈತ ಮಾಡ್ತಿರೋದೇನು! ಇವನಿಗೆ ಮಾಡ್ತೀನಿರು. ನೋಡಿ,
ಈಗ ಇಲ್ಲಿಗೆ ರಾಜರ ಅತಿಥಿಗಳು ಬರೋದರಿದ್ದಾರೆ. ಈ ರೂಮು ಖಾಲಿ ಮಾಡತೀರ?

ಸಾಂಬ : ಆದರೆ ಆ ಕಾರಭಾರಿಗಳು ಹೇಳಿದರು: ಇವತ್ತು ಇಲ್ಲಿಗ್ಯಾರೂ ಬರೋದಿಲ್ಲ. ಬೇಕಾದರೆ ನೀವಿಲ್ಲಿ ಇರಿ ಅಂತ
ನನಗೆ ಹೇಳಿದರು.

ಬಿಳಿ ಆನೆ : ಕಾರಭಾರಿಗಳು ಹೇಳಿದರೆ? ಹಾಂಗಿದ್ದರೆ ಯಾರು ಬರೋದಿಲ್ಲಾಂತ ಆಯ್ತು. ನೀನ್ಯಾಕಯ್ಯಾ ಶಿವಾ ಇಲ್ಲಿಗೆ
ಬಂದೆ ? ಡಿಂಗ್‌ಡಾಂಗ್ ಸಾಹೇಬರನ್ನ ನೋಡಿ ಕೊಳ್ಳೋದಿಲ್ಲವ?

ಶಿವ : ತಾವು ಬಾಗಿಲಾ ಬಡೀತಿದ್ದಿರಿ. ಸಹಾಯ ಮಾಡೋಣ ಅಂತ ಬಂದೆ.

ಬಿಳಿ ಆನೆ : ನನಗೆ ಯಾರ ಸಹಾಯ ಬೇಕಿಲ್ಲ ಹೋಗಯ್ಯಾ, ಮಹಾ ಬಂದ ಕಾಪಾಡೋ ದೇವರ ಹಾಗೆ!
(ಶಿವಹೋಗುವನು) ನೋಡಿ ನೀವು ಸುಶಿಕ್ಷಿತರು. ಹೀಗೆಲ್ಲಾ ಎಂತೆಂಥದೋ ಲೋಫರಸಿಗೆಲ್ಲಾ ಮೋಸ ಹೋಗಬಾರದು.
ನಿಮ್ಮನ್ನೇ ಬುಟ್ಟಿಗೆ ಹಾಕ್ಕೊಂಡಿದಾನೆ ಅಂದರೆ ಎಂಥಾ ಖಿಲಾಡಿ ಇರಬೇಕವನು! ಹೀಗಿನ್ನೂ ಎಷ್ಟು ಜನಕ್ಕೆ ಮೋಸ
ಮಾಡಿದ್ದಾನೋ, ರಾಜರ ಹತ್ತಿರ ಒಂದು ಬಾರಿ ನಿಮ್ಮನ್ನ ಕರಕೊಂಡು ಹೋಗ್ತೀನಿ. ಈ ವಿಷಯ ರಾಜರಿಗೆ ನೀವೇ
ಹೇಳಬೇಕು.

ಸಾಂಬ : ಓಹೋ ರಾಜಾ ಏನು, ಅವರಜ್ಜೀ ಹತ್ತಿರ ಬೇಕಾದರೂ ಹೇಳತೀನಿ.

ಬಿಳಿ ಆನೆ : ಆ ನನ್ನ ಮಗ ತಾ ನೌಕರಿ ಸೇರಬೇಕಾದರೂ ನನ್ನ ತಂಗೀನ್ನ ರಾಜರ ಹತ್ತಿ ಕಳಿಸಿ ಕೆಲಸ ಗಿಟ್ಟಿಸಿಕೊಂಡ.
ಅದನ್ನ ಮರೆತು ನಿನಗೆ ಕೆಲಸ ಕೊಡತೀನಿ ಅಂತಾನಲ್ಲ….

ಸಾಂಬ : ಡೋಂಟ್‌ಕೇರ್ ಮಾಸ್ಟರಂತೆ.

ಬಿಳಿ ಆನೆ : ಅವನಜ್ಜೀ ಪಿಂಡ.

ಸಾಂಬ : ಅವನ ಹೆಸರೇನು?

ಬಿಳಿ ಆನೆ : ಲೋಫರ್.

ಸಾಂಬ : ನಿಮ್ಮ ಹೆಸರೇನು

ಬಿಳಿ ಆನೆ : ಕತ್ತೇಬಾಲ.

ಸಾಂಬ : ರಾಜರ ಹತ್ತಿರ ಹೇಳಿ ಒಂದು ಕೆಲಸ ಕೊಡಿಸಿ ಸ್ವಾಮಿ.

ಬಿಳಿ ಆನೆ : ಇದಕ್ಕೆಲ್ಲಾ ರಾಜರ್ಯಾಕೆ? ನಾನಿಲ್ಲವೆ? ನನ್ನ ತುತ್ತೂರಿ ನಾನೇ ಊದಿಕೊಳ್ಳೋ ಪೈಕಿ ಅಲ್ಲ ನಾನು. ಆದರೂ
ಒಂದು ಮಾತು ಹೇಳತೇನೆ. ನಾನಿದ್ದೀನಿ ಅಂತ ರಾಜ್ಯ ಇರೋದು, ಒಂದೇ ದಿನ ನಾ ಇಲ್ಲಾ ಅಂದರೆ ಗೊತ್ತ ಈ ರಾಜ್ಯ
ಏನಾಗುತ್ತೆ ಅಂತ?

ಸಾಂಬ : ಏನ್ಸಾಮಿ?

ಬಿಳಿ ಆನೆ : ದಿವಾಳಿ! ನಾನಿಲ್ಲದೆ ರಾಜರು ಒಂದು ದರ್ಬಾರು ಮಾಡಲಿ, ನೋಡೋಣ. ಅದೂ ಹೋಗಲಿ, ಒಂದೂ
ಸ್ಪೆಲ್ಲಿಂಗ್ ಮಿಸ್ಟೇಕಿಲ್ಲದೆ ಇಡೀ ದರ್ಬಾರಲ್ಲಿ ಒಬ್ಬನಾದರೂ, ರಾಜರ ಹೆಸರನ್ನ ಬರೀಲಿ ನೋಡೋಣ. ಕಚೇರಿ ಅಂದರೆ
ಹುಡುಗಾಟವ? ರಾಜ-ಅಂದರೆ ಇಸ್ಪೀಟ್ ರಾಜ ಇದಾನಲ್ಲಾ, ಕಾಲ್ಮಡಿ ರಾಜ-ನನ್ನ ಕಂಡರೆ ಗಡಗಡ ನಡಗತಾನೆ ಗೊತ್ತ?
ಇದೆಲ್ಲಾ ಹೇಳಿದ್ದರ ಅರ್ಥ ಇಷ್ಟೇ ಇವರೆ; ಕೆಲಸ ಇದೆ ಕೊಡ್ತೀನಿ. ಆದರೆ ನೀವು ಆ ನಮ್ಮ ಚಿಲ್ಲರೆಗೆ ಏನ್ ಕೊಡ್ತಿದ್ದಿರೋ
ಅದನ್ನ ನನಕ್ಕೊಡಿ ಅಷ್ಟೆ.

ಸಾಂಬ : ಏನೋ ನಿಮ್ಮನ್ನಂಬಿ ಬಂದೀನಿ. ನೀರಲ್ಲಾದರೂ ಅದ್ದಿ ಹಾಲಲ್ಲಾದರೂ ಅದ್ದಿ.

ಬಿಳಿ ಆನೆ : ಆಲ್ಕೊಹಾಲಲ್ಲಿ ಅದ್ದತೀನಿ ಇರಿ. (ಹೋಗಿ ಬಾಗಿಲಿಕ್ಕುವನು)


(ಹೊರಗಡೆ ರಾಜ, ಕಾರಭಾರಿ ಬರುವರು)

ಸಾಂಬ :

ಎಂತು ತಾಲೂವೆ ಕಂತು ಕೋಪವ


ನಾಂತು ಕೊಲ್ಲುವ
ಆಹಾ ಕಾಂತೆಯನ್ನು
ಸಂತವಿಸದೆ
ನಿಂತು ಬಿಡುವುದೇ

ರಾಜ : (ಹೊರಗೆ) ವ್ಯವಸ್ಥೆಯೆಲ್ಲಾ ಸರಿಯಾಗಿ ಆಗಿದೆಯೇನಯ್ಯಾ?

ಕಾರಭಾರಿ : ನೀವೇನೂ ಯೋಚನೆ ಮಾಡಬೇಡಿ ಪ್ರಭು. ಬಿಳಿ ಆನೆ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ. (ಒಳಗಡೆ
ಕುಡಿಯುತ್ತಿರುವ ಬಿಳಿ ಆನೆ ರಾಜರ ದನಿ ಕೇಳಿ ಗಾಬರಿಯಾಗುವನು. ರಾಜ ತನ್ನ ಶೃಂಗಾರವನ್ನು ಮತ್ತೆ ಮತ್ತೆ
ತಿದ್ದಿಕೊಳ್ಳುವನು)

ಬಿಳಿ ಆನೆ : ಹೊರಗಡೆ ರಾಜರು ಬಂದಹಾಗಿದೆ.

ಸಾಂಬ : ಹೌದು ಅವರ ದನಿ ಇದ್ದಂಗಿತ್ತು.

ರಾಜ : ಅವಳು ಬಂದಿರುವಳೆ?

ಕಾರಭಾರಿ : ಓಹೊ.

ರಾಜ : ನೀನಿನ್ನು ಹೋಗಬಹುದು.

ಕಾರಭಾರಿ : ಅಪ್ಪಣೆ ಪ್ರಭೂ.

ರಾಜ : ಹಾಗೇ ಇಲ್ಲಿರೋ ಚಿಲ್ಲರೆ ಆಳುಗಳನ್ನೆಲ್ಲ ಕರೆದುಕೊಂಡು ಹೋಗು.

ಕಾರಭಾರಿ : ಅಪ್ಪಣೆ ಪ್ರಭು.

ಬಿಳಿ ಆನೆ : ಅಯ್ಯಯ್ಯೋ ಹಾಳಾದೆ. ದೇವರೇ ರಾಘವೇಂದ್ರಾ ನೀನೇ ಕಾಪಾಡೋ ತಂದೆ ಸುಂದರೀ ಹ್ಯಾಗಾದರೂ
ಮಾಡಿ ನನ್ನನ್ನು ಬೇಗ ಪಾರುಮಾಡು.

ಸಾಂಬ : ಈ ರೂಮಿಗೆ ಬಾಗಿಲಿರೋದು ಅದೊಂದ, ತಗೀಲ?

ಬಿಳಿ ಆನೆ : ಬೇಡ ಬೇಡ….

ಸಾಂಬ : ಅದ್ಯಾಕೆ, ನಿಮ್ಮನ್ನೋಡಿ ರಾಜ ಗಡಗಡ ನಡುಗೋದಿಲ್ಲವ?


ಬಿಳಿ ಆನೆ : ನಿನಗ್ಗೊತ್ತಿಲ್ಲ ಸುಂದರೀ, ಎಲ್ಲಾ ಆಮೇಲೆ ಹೇಳ್ತೇನೆ. ದಯಮಾಡಿ ಈಗ ಪಾರು ಮಾಡು. ನಿನ್ನುಪಕಾರ
ನಾನೆಂದು ಮರೆಯೋದಿಲ್ಲ.

ರಾಜ : ಹೊರಟೇಬಿಟ್ಟೆಯಾ? ಇರು (ಬಲಗೈ ಎತ್ತಿ ನನ್ನ ಬಗಲನ್ನು ಸೂಚಿಸುತ್ತ) ಸುವಾಸನೆ ಬರತ್ತ ನೋಡು.(ಕಾರಭಾರಿ
ಹಾಗೇ ಮಾಡುವನು. ಇನ್ನೊಂದು ಕೈಯೆತ್ತಿ ಹಾಗೇ ತೋರಿಸುವನು. ಕಾರಭಾರಿ ಹಾಗೇ ನೋಡುವನು)

ಕಾರಭಾರಿ : ಇನ್ನೇನೂ ಎತ್ತೋದು ಬೇಡ ಪ್ರಭೋ. ಸರ್ವಾಂಗದಲ್ಲೂ ಸುವಾಸನೆ ಚೆನ್ನಾಗಿ ಬರತ್ತಾ ಇದೆ.

ರಾಜ : ಕರೆ ಅವಳನ್ನ-ಸುಂದರೀ ರಾಜರು ಬಂದಿದ್ದಾರೆ ಬಾಗಿಲು ತೆರೆ ಅನ್ನು. ಅಲ್ಲಲ್ಲ ಸುಂದರೀ ಮಹಾಪ್ರಭುಗಳು
ಬಂದಿದ್ದಾರೆ ಬಾಗಿಲು ತೆಗಿ ಅನ್ನು- ಹಾಗೆ ಬೇಡ- ಪರಮಸುಂದರೀ ಲೋಕೈಕ ಸುಂದರಾಂಗನಾದ ಕಾಲ್ಮಡಿ
ಮಹಾರಾಜರು ಬಂದಿದ್ದಾರೆ; ಬಾಗಿಲು ತೆಗೆದು ಬರಮಾಡಿಕೊ ಅನ್ನು. ಅಥವಾ “ಬಾಗಿಲು ತೆಗೆಯೇ ಭದ್ರೇ”-ಅಂತ ಒಂದು
ಪದ ಗೊತ್ತಿದೆ ಹೇಳಲಾ?

ಕಾರಭಾರಿ : ಬೇಡ ಪ್ರಭು, ಹೊರಗಡೆ ಗಲಾಟೆ ಯಾಕೆ? ಬೇಕಾದರೆ ಒಳಗಡೆ ಹಾಡಿಕೊಳ್ಳಿ.

ರಾಜ : ಹೌದು ಅದೇ ಮೇಲು, ಹಾಗಿದ್ದರೆ ರಾಜರು ಬಂದಿದ್ದಾರೆ ಬಾಗಿಲು ತೆಗೆ ಅನ್ನು – ಅಥವಾ ಅದೆಲ್ಲಾ ಯಾಕೆ ಬರೀ
ಬಾಗಿಲು ಅನ್ನು, ಅಥವಾ ಅನ್ನೋದ್ಯಾಕೆ ಬಾಗಿಲು ಬಡಿ, ಸಾಕು. (ಕಾರಭಾರಿ ಬಾಗಿಲು ಬಡಿಯುವನು)

ಬಿಳಿ ಆನೆ : ನಿನ್ನ ಕಾಲು ಬೀಳ್ತೀನಿ ಸುಂದರೀ, ಹ್ಯಾಗಾದರೂ ಮಾಡಿ ನನ್ನ ಪಾರು ಮಾಡು.

ಸಾಂಬ : ಹ್ಯಾಗೆ ಮಾಡೋದು? ನೋಡಿ, – ಈ ಸೀರೆ ಉಟ್ಕೊಂಡು ಒಳಗಿರಿ. ಇವಳ್ಯಾರು ಅಂತ ರಾಜರು ಕೇಳಿದರೆ ನನ್ನ
ಜೊತೆ ಬಂದಿದ್ದಾಲೆ ಅಂತ ಹೇಳತೀನಿ. ರಾಜರು ಹೋದಮೇಲೆ ಎಲ್ಲ ಸರಿಹೋಗುತ್ತೆ, ಏನಂತೀರಿ?

ಬಿಳಿ ಆನೆ : ಏನು, ಸೀರೆ ಉಡೋದೆ?

ಕಾರಭಾರಿ : ಸುಂದರೀ ರಾಜರು ಬಂದಿದ್ದಾರೆ ಬಾಗಿಲು ತೆಗಿ, ಸುಂದರೀ….

ಬಿಳಿ ಆನೆ : ಕೊಡು ಕೊಡು ಅದನ್ನೇ ಉಡತೀನಿ.

ಕಾರಭಾರಿ : ಸುಂದರೀ ಯಾಕೆ ಬಾಗಿಲು ತೆಗೆಯುತ್ತಿಲ್ಲ?

ಸಾಂಬ : ಕಾರಬಾರಿಗಳೆ, ಏಕಾಂಗಿಯಾಗಿ ರಾಜದ ದಾರಿಯನ್ನು ನೋಡಿ, ನೋಡಿ, ವಿರಹ ವೇದನೆಯಿಂದ ಮಲಗಿರಲಾಗಿ
ನಿಮ್ಮ ಮಹಾರಾಜರೇ ಈ ಪರಿ ತಡ ಮಾಡಿ ಬರುವುದು ವಿಹಿತವೇ? (ಬಿಳಿಆನೆಗೆ) ಬೇಗನೆ ಸುತ್ತಿಕೊಳ್ಳೋ ಮಗನೆ.
ಹೋಗಿ ಒಳಗಡೆ ಸಂಡಾಸಿನಲ್ಲಿ ಎರಡೂ ಮುಚ್ಚಿಕೊಂಡು ಕೂತಿರು. ಒಳಗಡೆ ಒಂದು ಹೆಂಗಸಿದೆ; ಅವಳಿಗೇನಾರ
ಕೈಯಿಟ್ಟೀಯಾ, ಹೇಳಿರತೀನಿ.
(ಬಾಗಿಲು ತೆಗೆಯುವನು. ರಾಜ ಒಳಗೆ ಬರುವನು. ಕಾರಭಾರಿ ಹೋಗುವನು. ಸಾಂಬ ಸೆರಗಿನಿಮದ ಮುಖ
ಮುಚ್ಚಿಕೊಂಡಿರುವನು)

ರಾಜ : ಆಹಾ ಪ್ರಿಯೆ ಮದನೋತ್ಸವದಲ್ಲಿ ನಿನ್ನ ದರ್ಶನದಿಂದ ಪುಳಕಿತನಾದಾಗಿನಿಂದ ನನ್ನ ಹೃದಯ ಕುರುಡಾಗಿದೆ.
ಬಾಳು ಬರಡಾಗಿದೆ. ದೇಹ ಕೊರಡಾಗಿದೆ. ಮನವು ಮರಡಿಯಾಗಿದೆ. ಉದರ ಕೊಡವಾಗಿದೆ. ಬೇಗನೆ ಬಂದೆನ್ನ ವಿರಹ
ವೇದನೆಯನ್ನು ಉಪಶಮನ ಮಾಡಬಾರದೆ?

ಸಾಂಬ : ಪ್ರಭು ಸುಂದರಿಯು ನಾಚಿ ನೀರಾಗಿ ಒಳಗೆ ಅಡಗಿರುವಳು.

ರಾಜ : ನೀನು ಯಾರು?


ಸಾಂಬ : ನಾನು ಅವಳ ದಾಸಿ ಪ್ರಭು, ಅಕ್ಕತಂಗಿಯರಿಬ್ಬರೂ ತಮ್ಮ ಸೇವೆಗೆ ಬಂದಿರುವರು. ಹಿರಿಯವಳು ಮಂಜರಿ,
ಕಿರಿಯವಳು ಸುಂದರಿ. ಪ್ರಾರಂಭದಲ್ಲಿ ಇಬ್ಬರೂ ತುಂಬ ಚೆನ್ನಾಗಿ ನೃತ್ಯ ಮಾಡುತ್ತಾರೆ. ತಾವು ದೊಡ್ಡ ಮನಸ್ಸು ಮಾಡಿ
ಅವರ ನೃತ್ಯವನ್ನು ನೋಡಲೇಬೇಕೆಂದು ಇಬ್ಬರೂ ಹಟ ಹಿಡಿದಿದ್ದಾರೆ.

ರಾಜ : ಓಹೋ, ನಾವಿಬ್ಬರೇ ಏಕಾಂತದಲ್ಲಿದ್ದೇವೆಂದು ನಮ್ಮ ಭಾವನೆಯಾಗಿತ್ತು. ಆಗಲಿ ಮೊದಲು ಇವರ


ಕಲಾಸೇವೆಯನ್ನು ಒಪ್ಪಿಸಿಕೊಳ್ಳೋಣ. ಎಲ್ಲಿ ಬರಲಿ.

ಸಾಂಬ : ಸಖಿಯರೇ, ಮಹಾಪ್ರಭುಗಳು ನಿಮ್ಮ ಗೀತನೃತ್ಯ ಸೇವೆಯನ್ನು ಸ್ವೀಕರಿಸಲು ಒಪ್ಪಿದ್ದಾರೆ. ಬೇಗನೆ ಬಂದು
ಕಲಾಸೇವೆ ಮಾಡಿ. (ಇಬ್ಬರೂ ಗಾಬರಿಯಾಗಿ ಪರಸ್ಪರ ನೋಡಿಕೊಳ್ಳುತ್ತಿದ್ದಾರೆ) ಬೇಗನೆ ಬರಬಾರದೆ? ಪ್ರಭುಗಳು
ಮೊದಲೇ ರಸಿಕ ಶಿಖಾಮಣಿಗಳು ನೀವು ತಡ ಮಾಡಿದರೆ ಪ್ರಭುಗಳು ಖುದ್ದಾಗಿ ನೀವಿರುವಲ್ಲಿಗೆ ಬಂದು ನಿಮ್ಮ
ಅಧರಪಾನ ಮಾಡಬೇಕೆಂದು ನಿಮ್ಮ ಆಸೆಯೇನು? ಬನ್ನಿ ಬನ್ನಿ. ಪ್ರಭು ತಾವೇ ಖುದ್ದಾಗಿ ಕರೆಯಬೇಕೆಂದು ಅವರಾಸೆ.
ಅವರ ಈ ಆಸೆಯನ್ನು ಈಡೇರಿಸುವಿರಾ?

ರಾಜ : ಓಹೋ ಅಗತ್ಯವಾಗಿ. ಎಲ್ಲಿ ಸುಂದರಿಯರೇ ಬನ್ನಿ. ನಿಮ್ಮ ಕಲಾ ಪ್ರದರ್ಶನ ಸಾಗಲಿ

ಸಾಂಬ :  ಸಖಿಯರೇ ಗಾಬರಿಯಾಗಬೇಡಿ. ಪ್ರಭುಗಳು ಮಹಾಕಲಾಪ್ರೇಮಿಗಳು. ಬೇಗ ಬನ್ನಿ. ಬರುವರೋ ಅಥವಾ


ನೀವಿದ್ದಲ್ಲಿಗೆ ಪ್ರಭುಗಳೇ ಬರಬೇಕೋ? ಪ್ರಭು (ಹೆದರಿಕೊಂಡು ಇಬ್ಬರೂ ಬರವರು) ಅಕೋ ಬಂದರು. ನಾನು
ಹಾಡುತ್ತೇನೆ; ಅವರು ಕುಣಿಯುತ್ತಾರೆ. ಪ್ರಭು.

ಓ ರಾಜಾ!
ಐತೆ ಮಹಾ!
ಪ್ರಾಯವರಳೈತೆ ಆಹಾ ತಾಜಾ ತಾಜಾ
ಉರಿವ ಮೋಹ
ತೀರದ ದಾಹ
ಕರೆಯುವೆ ಬಾಬಾ ರಾಜಾ ||

ನಾನೊಂದು ರಸಪುರಿಹಣ್ಣು
ಮೈಮರೆತ ರೂಪಸಿ ಹೆಣ್ಣು
ಹಾಗೇಕೆ ಬಿಡುವಿಯೊ ಕಣ್ಣು
ಸವಿಸವಿಯುತ ತಿನ್ನು |

ಅರಳಿವೆ ಮೈಮನ
ಚಿಮ್ಮುವ ಯೌವನ
ಸೂರೆ ಮಾಡಲು ಬಾ ||

ನಿನಗಾಗಿ ಹೊಂಚುತ ಕಾದೆ


ನೀ ಯಾಕೆ ಬಾರದೆ ಹೋದೆ
ನಾ ತಾಳೆ ಮದನನ ಬಾಧೆ
ಬೇಕಿಲ್ಲ ಯಾವ ತಗಾದೆ
ಹಾಡುತ ಓಡುತ ಚಿಮ್ಮುತ ನಲಿಯುತ
ನಗೆಯ ಬೀರುತ ಬಾ. ||

(ಹಾಡಿಗೆ ಇಬ್ಬರೂ ಅಧ್ವಾನವಾಗಿ ಕುಣಿಯುವರು)

ಸಾಂಬ : ಪ್ರಭು ಇನ್ನು ಮೇಲೆ ತಾವುಂಟು. ತಮ್ಮ ಪ್ರೇಯಸಿಯರುಂಟು. ನಾನು ಬರುತ್ತೇನೆ. ಪ್ರಭೂ ನನ್ನ ಸಖಿಯರಿನ್ನೂ
ಚಿಕ್ಕವರು. ಸರ್ವೀಸಾಗಿಲ್ಲ. ಸ್ವಲ್ಪ ಗಲಾಟೆ ಆದೀತು. ಅನುಭವಿಕರಾದ ತಾವು ದಯಮಾಡಿ ಸಹಿಸಿಕೋಬೇಕು.
ರಾಜ : ಹೌದು ಹೌದು. ನೀನೂ ಅಷ್ಟೆ. ಬಾಗಿಲು ಹಾಕಿಕೊಂಡು ಹೊರಗಡೆ ಬೋಲ್ಟ್ ಹಾಕಿಕೊಂಡು ಹೋಗು. ಏನೇ
ಗಲಾಟೆ ಆದರೂ ಬೆಳತನಕ ನೀವ್ಯಾರೂ ಈ ಕಡೆ ಸುಳಿಯಕೂಡದು.
(ಬಿಳಿಆನೆ, ಚಿಲ್ಲರೆಗಳ ತೆಗೆದಿಟ್ಟ ಬಟ್ಟೆ ಸಮೇತ ಸಾಂಬ ಹೊರಗೋಡಿ ಬಾಗಿಲಿಕ್ಕಿ ಕೊಳ್ಳುವನು.)
ಸಾಂಬಶಿವ ಪ್ರಹಸನ : ದೃಶ್ಯ-೯
(ಗಣೇಶನ ಗುಡಿ, ಸಾಂಬ ನಗುತ್ತಿದ್ದಾನೆ. ಶಿವ ಪೆಚ್ಚಾಗಿದ್ದಾನೆ.)

ಶಿವ : ನಿಲ್ಲಿಸಪ್ಪಾ ನಗೋದನ್ನ ಅಂದರೆ….

ಸಾಂಬ : ಹೋ ಹೋ….

ಶಿವ : ನಿನಗೇನು ಹುಚ್ಚು ಹಿಡೀತೇನಪ್ಪ?

ಸಾಂಬ : ಅದೇ ಗಣೇಶನ ದಯ ಕಣೊ; ನನಗಿನ್ನೂ ಹುಚ್ಚು ಹಿಡಿದಿಲ್ಲ. ನಿನ್ನ ಹುಡುಗಿ ಇದಾಳಲ್ಲ, ಕೊನೇಪಕ್ಷ
ಅವಳಿಗಾದರೂ ಹುಚ್ಚು ಹಿಡೀದಿರಲಿ ಅಂತ ದೇವರಲ್ಲಿ ಬೇಡಿಕೊ.

ಶಿವ : ಅಥವಾ ನಮಗೆ ಹುಚ್ಚು ಹಿಡಿದಿದೆಯೋ ಏನೊ.

ಸಾಂಬ : ಹೌದೌದು. ಅವರು ಹಾಗೇ ಅಂದ್ಕೋತಿರಭೌದು. ಲೇ ಶಿವಾ. ಈ ಊರಿನ ನೀರಿನಲ್ಲೇನಾದರೂ ಸ್ಪೆಶಲ್ ಹೆಂಡ
ಇರಭೌದ? ಯಾಕಂತೀನಿ: ಇಲ್ಲೀತನಕಾ ನಾನು ಥರಾವರಿ ಹೆಂಡ ಕುಡಿದೀನಿ, ಹಿಂಗೆಂದೂ ಹೀಗೆ ಆಗಿರಲಿಲ್ಲವೇ! ಜಾಸ್ತಿ
ಕುಡಿದಾಗ-ಇಡೀ ಜಗತ್ತು ಒಂದೊಂದ್ಸಾರಿ ತಲೆ ಕೆಳಗಾಗಿ ಬುಡ ಮೇಲಾಗಿ ನಡೆಯೋ ಹಾಗೆ ಕಾಣ್ಸತ್ತೆ. ಚಿಕ್ಕದು
ದೊಡ್ಡದಾಗಿ ದೊಡ್ಡದು ಚಿಕ್ಕದಾಗಿ ಕಾಣತ್ತೆ. ಒಂದಿದ್ದದ್ದು ಎರಡಾಗಿ ಕಾಣತ್ತೆ, ಒಂದು ಸಾರಿ, ಅದೂ ಒಂದು ಸಾರಿ ಮಾತ್ರ
ನಿಮ್ಮಮ್ಮ ಹಸುವಿನ ಥರ ಕಂಡಿದ್ದಳಪ್ಪ. ಆದರೆ ಎಲ್ಲರೂ ಹುಚ್ಚರಾಗಿ ಹುಚ್ಚುಚ್ಚಾರ ಮಾತಾಡ್ತ, ಹುಚ್ಚುಚ್ಚಾರ
ನಡೆದುಕೊಳ್ಳೋದನ್ನ ನನಗೆ ಯಾವ ಹೆಂಡಾನೂ ತೋರಿಸಿಲ್ಲ ಬಿಡು. ಈ ಊರ ನೀರಲ್ಲಿ ಯಾವುದೋ ದೇವಲೋಕದ
ಹೆಂಡ ಇರಬೇಕಪೊ!

ಶಿವ : ಹೆಂಡ ಬಿಟ್ಟು ಬೇರೇನೂ ಹೊಳೆಯೋದೇ ಇಲ್ಲ ನಿನಗೆ.

ಸಾಂಬ : ಯೋಚನೆ ಮಾಡೋ ಮಗನೇ…. ನೀನು ಯಾವುದಾದರೂ ಕತೆ, ಕನಸಲ್ಲಿ-ಕತ್ತೆ ಸ್ವಯಂವರ, ಅಲ್ಲ
ಸ್ವಯಂವಧು ಸಮಾರಂಭ ಅಂತ ಕಂಡಿದೀಯಾ? ನಾವು ಮನುಶರು ಕೇಳಿದರೆ ಹುಡಿಗೇರನ್ನ ಕೊಡೋದಿರಲಿ
ತೋರಿಸೋದೂ ಇಲ್ಲ. ನನ್ನ ಮಗಂದು ಆ ಕತ್ತೆಗೆ ಹೆಣ್ಣು ಕೊಡೋದಕ್ಕೆ ನಾ ಮುಂದು ತಾ ಮುಂದು ಅಂತಾರೆ! ಇವತ್ತು
ನೀ ನೋಡಲಿಲ್ಲ ಕಣೋ, ಇಬ್ಬರು ಹುಡಿಗೇರು ಅಳತಾ ನಿಂತಿದ್ದರು. ಪಾಪ ಕತ್ತೆ ಜೊತೆ ಬಲವಂತವಾಗಿ ಮದುವೆ
ಮಾಡಿಕೊಡೋದಕ್ಕೆ ಎಳಕೊಂಬಂದಾರೇನೋ – ಅದಕ್ಕೇ ಆಳ್ತಾ ಇವೆ.- ಸದ್ಯ ಮನುಶರು ಅಂತ ಅನ್ನೋಕೆ
ಒಬ್ಬಿಬ್ಬರಾದರೂ ಸಿಕ್ಕರಲ್ಲಾ- ಅಂತ ನಾ ಅಂದು ಕೊಂಡರೆ-ಲೇ ಶಿವಾ, ಅವರ‍್ಯಾಕೆ ಆಳುತ್ತಿದ್ದರು ಗೊತ್ತೇನೊ? ನಿನ್ನ ಕತ್ತೆ
ಅವರನ್ನ ಆರಿಸಲಿಲ್ಲ; ಅದಕ್ಕೆ! ಹೋಹೋಹೋ ಇಲ್ಲೀ ಹೆಂಗಸರಿಗೆ ಕತ್ತೇನೇ ಸೈ ಕಣೊ.

ಶಿವ : ಪಾಪ ಆ ರಾಜರ ಕಡೆ ನೋಡೋದಕ್ಕಾಗ್ತಿರಲಿಲ್ಲ. ಮುಖ ಎಲ್ಲಾ ಪರಚಿ ಹೋಗಿತ್ತು. ಕೈಕಾಲೆಲ್ಲ ಬ್ಯಾಂಡೇಜಿತ್ತು. ಆ
ಬಿಳಿಆನೆ ಚಿಲ್ಲರೆ ಸೇರಿ ಏನೇನು ಮಾಡಿದ್ದರೋ ಪಾಪ. ಆಂದಹಾಗೆ ಆವರಯ್ಯಾಕೆ ಈ ಹೋತ್ತು ಕಾಣಲಿಲ್ಲ?

ಸಾಂಬ : ಅವರಿಗೂ ಹಂಗೇ ಆಗಿರಭೌದು ಕಣೋ ಮೈ ತುಂಬ ಗಾಯ….

ಶಿವ : ಸ್ವಯಂವರ ನಡೆದಾಗ, ಆ ಕಾರಭಾರಿ ನನ್ನ ಬಿಡುವೊಲ್ಲ. ಬಂದೂ ಬಂದೂ ಕಿವಿಯಲ್ಲಿ ‘ಸುಂದರಿ ಗೊತ್ತ? ಅವಳ
ವಿಷಯ ಏನು?-ಅಂತಿದ್ದ. ಎದ್ದು ಹೋಗೋಣ ಅಂದರೆ ಗಜನಿಂಬೆ ಸರದಿ ಬರವೊಲ್ದು. ಕೊನೇಗೇ ಗಜನಿಂಬೆ ಬಂದಳಲ್ಲಾ
ಅಂದರೆ ಡಿಂಗ್‌ಡಾಂಗ್ ಒದರವೊಲ್ದು! ಗಜನಿಂಬೆ ಇನ್ನೇನು ಒದರಿತು. ‘ಡಿಂಗ್‌ಡಾಂಗ್ ಸಾಹೇಬರ ಆಯ್ಕೆ ಇವಳೇ
ಪ್ರಭು’ ಅಂತ ಆ ಕಡೆ ನೋಡಿದರೆ – ಬಾಗಿಲು ದಾಟಿ ಹೊರಗಡೆ ಹೋಗುತ್ತಿದ್ದಳು- ಕತ್ತೆ ಬಾಲ ಮುರಿದೆ ನೋಡು –
ರಾಜರಾಗಲೇ ಕಾರಭಾರಿ ಮೇಲೆ ಉಗೀತಿದಾರೆ!

ಸಾಂಬ : ಏನಂತ?
ಶಿವ : ‘ಇವಳೇ ಕಣೊ ಬೋಳೀಮಗನೇ ಹಸಿರು ಸೀರೆ ನೀಲಿ ರವಿಕೆ ಉಟ್ಟಿದ್ದವಳು. ನೀನು ಯಾರಯ್ಯಾರೋ
ದರಿದ್ರವರನ್ನು ಕರಕೊಂಬಂದು ನನ್ನ ಕೈಕಾಲು ಮುರಿಸಿ ಹಾಕಿದೆ’ – ಅಂತ.

ಸಾಂಬ : ಓಹೊ ರಾಜಾ ಆ ದಿನ ಗಜನಿಂಬೇನ್ನ ನೋಡಿದ್ದನಂತೊ? ಸರಿಬಿಡು…. ಆ ನನ್ನ ಮಗನಿಗೆ ಹಂಗೇ
ಆಗಬೇಕಿತ್ತು.

ಶಿವ : ಅವನಿಗೇನಾರ ಆಕ್ಕೊಳ್ಳಲಿ, ನನ್ನ ಗತಿ ಹೇಳಪ್ಪಾ ಅಂದರೆ….

ಸಾಂಬ : ನಿನಗೇನೋ ಆಗಿದೆ? ಎಲ್ಲಾ ನೀ ಬಯಸಿದ ಹಾಗೇ ಆಗ್ತಿದೆ. ಗಜನಿಂಬೆ ಡಿಂಗ್‌ಡಾಂಗ್ ನ ಹೆಂಗಡಿ ಆದಳು.
ಇವತ್ತೇ ಪ್ರಸ್ತ ಇದೆ. ಹೋಗು ಕತ್ತೇನ್ನ ಕಟ್ಟಿಹಾಕಿ ಗಜನಿಂಬೆ ಹತ್ತಿರ ಹೋಗಿ ಮಜಮಾಡು. ಕತ್ತೆ ಹ್ಯಾಂಕರಿಸಿದರೆ ಎರಡು
ಒದೆ ಕೊಡು – ಅಷ್ಟೆ.

ಶಿವ : ಅಷ್ಟು ಸುಲಭ ಅಲ್ಲ ಕನಪ್ಪ ಅದು. ಕಾರಭಾರಿ ರಾಜರಿಗೇನೋ ಸಂಚು ಹೇಳತಿದ್ದ ಗೊತ್ತ?

ಸಾಂಬ : ಏನಂತೆ?

ಶಿವ : ಹಸಿರು ಸೀರೆ ನೀಲಿ ರವಿಕೆಯವಳು ಇವಳೇ ಹೌದಾದರೆ ಸಿಕ್ಕು  ಬಿದ್ದಳಲ್ಲ ಪ್ರಭು. ಹ್ಯಾಗೂ ಡಿಂಗ್‌ಡಾಂಗ್ 
ಇವಳನ್ನೇ ಆರಿಸಿಕೊಂಡಿದಾರೆ.ದ ಇವತ್ತೇ ಪ್ರಸ್ತ ಇಡೋಣ. ಕತ್ತೆ ಅವಳ ರೂಮಿಗೆ ಹೋದಕೂಡಲೇ “ಅಯ್ಯೋ ಕತ್ತೆ
ಜೊತೆ ಬಾಳುವೆ ಮಾಡಲಾರೆ ಕಾಪಾಡಿ ಕಾಪಾಡಿ”- ಅಂತ ಪದ ಹಾಡ್ತಾಳೆ. ತಾವು ದೇವರ ಹಾಗೆ ಹೋಗಿ
ಕಾಪಾಡಿದರಾಯ್ತು-ಅಂತ. ಇವತ್ತು ರಾತ್ರಿ ಅವರು ಬರೋದು ಖಾತ್ರಿ. ನಾನಲ್ಲಿ ಸಿಕ್ಕುಬಿದ್ದರೆ ನನ್ನ ಕಥೆ ಮುಗಿಯೋದೂ
ಖಾತ್ರಿ. ಈಗ ಹೆಂಗ ಮಾಡೋಣ, ಹೇಳು.

ಸಾಂಬ : ಹೆಂಗೇನು? ನಾ ಪ್ಲಾಸ್ ಮಾಡಿದ ಪ್ರಕಾರ ನೀನು ಗಜನಿಂಬೆ ಹತ್ತಿರ ಹೋಗು ಬೇಕಷ್ಟೆ.

ಶಿವ : ನೀನು ತಿರುಗಾ ಸೀರೆ ಉಟ್ಟರೆ ಬಗಿಹರಿಯೋದಿಲ್ಲ. ಈ ಸಾರಿ ಉಟ್ಟರಂತೂ ನಿನ್ನನ್ನೂ ಜೀವಂತ ಬಿಡೋದಿಲ್ಲ. ಈಗ
ಈ ಸಮಸ್ಯೆಯನ್ನು ಹೆಂಗ ಬಿಡಿಸೋದು ಅಂತ ವಿಚಾರ ಮಾಡು.

ಸಾಂಬ : ಸದ್ಯ ನನ್ನ ಸಮಸ್ಯೆ ಅಂದರೆ ನಿನ್ನ ಖಾಲೀತಲೆ ಒಂದೇ. ಲೋ ಶಿವಾ, ನಿನಗೆ ಗಣೇಶನ ಕೃಪೆ ಆಗಿದೆ.
ಮಾತಾಡೋದನ್ನ ಕಡಿಮೆ ಮಾಡಿ ಪಂಚೇಂದ್ರಿಯಗಳನ್ನು ಚುರುಕು ಮಾಡಿಕೊ, ಕೆಲಸ ಮಾಡು. ಕತ್ತೆ ಲದ್ದಿಗೆ, ಅದರ
ಉಚ್ಚೆಗೆ ಸಾವಿರ ಬೆಲೆ ಬರಬಹುದಾದರೆ ಮಗನೇ, ಹ್ಯಾಂಕರಿಸೋದಕ್ಕೆ ಎಷ್ಟು ಅಂತ ಲೆಕ್ಕ ಹಾಕು.

ಶಿವ : ಅಂದರೆ?

ಸಾಂಬ : ನೀನು ನಿನ್ನ ಕತ್ತೆ ಜೊತೆ ಗಜನಿಂಬೆ ರೂಮಿನಲ್ಲಿರು. ಕಿಡಿಕಿ, ಬಾಗಿಲು ಭದ್ರಮಾಡಿಕೊಂಡಿರಬೇಕು. ಯಾರೆಷ್ಟು
ಒದರಿದರೂ ಬಾಗಿಲಾ ತಗೀಬಾರದು. ಹೊರಗಡೆ ರಾಜ, ಕಾರಭಾರಿ ಬಂದರು ಅಂದರೆ – ಸಮಯ ಸಂದರ್ಭ
ನೋಡಿಕೊಂಡು ನಾನು ಸಿಳ್ಳೇ ಹಾಕ್ತೀನಿ. ನೀನು ಅವಾಗ ಡಿಂಗ್‌ಡಾಂಗ್ ಗೆ ಹೇಳಿ ಭಯಂಕರವಾಗಿ ಹ್ಯಾಂಕರಸಿಸೋದಕ್ಕೆ
ಹೇಳು. ಇಷ್ಟಾದರೆ ಸಾಕು. ಮುಂದಿನದನ್ನ ನಾ ನೋಡಿಕೊಳ್ತೀನಿ. ಆಯ್ತ? ಹೊರಡು.

ಶಿವ : ಹೋಗು ಅಂತೀಯಾ?

ಸಾಂಬ : ಸುಮ್ಮನೆ ನನ್ನ ಹೊಟ್ಟೆ ಉರಿಸಬೇಡ ಹೊರಟ್ಹೋಗು ಅಂದರೆ….


ಸಾಂಬಶಿವ ಪ್ರಹಸನ : ದೃಶ್ಯ-೧೦
(ದೂರದಲ್ಲಿ ಒಂದು ಹಾಡು ಕೆಳಿ ಬರುತ್ತದೆ. ಬೆಳದಿಂಗಳು, ಈಗ ಡಿಂಗ್‌ಡಾಂಗ್ ಪ್ರಸ್ತ. ಒಳಗಡೆ ಕೂಡಿದ್ದಾರೆಂದು ಭಾವಿಸಿ
ಹೊರಗಡೆ ರಾಜ, ಕಾರಭಾರಿ ಬರುತ್ತಾರೆ. ಗುರುತಾಗದಿರಲೆಂದು ಹೆಣ್ಣು ಗಂಡು ದೆವ್ವಗಳ ಹಾಗೆ ಉಡುಪು ಬದಲಿಸಿದ್ದಾರೆ.
ದೂರದಿಂದ ಹಾಡು ಕೇಳಿ ಬರುತ್ತಿದೆ.)

ಆಗಲಿ ಇರಲಾರನೊ
ಮರೆತು ಇರಲಾರೆನೊ ನಿನ್ನನ್ನಾ ||
ಒಲಿದವನೆ ನಲಿದವನೆ |
ಹೃದಯದವನೆ ಗೆಲಿದವನೆ
ಘಾಸಿಯಾಗುವೆನೊ ನಾನಾ | ಮದನಾ
        ಮರೆತಿರಲಾರೆ ನಿನ್ನಾ ||
ಸ್ಮರಣ ಹೂವಿನ ಬಾಣಾ ಹೊಕ್ಕಾವೋ ಹೃದಯವನಾ
ಅಬಲೆ ನಾ ಮಾಡಲೇನಾ?
ತರುಣಿಯ ಬಿರಹವ ಮರೆಯಬೇಡಲೊ ಚೆಲುವ
ಹೂವಿನ ಹಾಸಿಗೆ ಸುಡು ಸುಡುವ ಬೇಸಿಗೆ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

ರಾಜ : ನಮ್ಮಿಬ್ಬರ ಗುರುತು ಯಾರಿಗೂ ಸಿಕ್ಕೋದಿಲ್ಲ ಅಲ್ಲವ?

ಕಾರಭಾರಿ : ಸಾಧ್ಯವೇ ಇಲ್ಲ ಪ್ರಭು. ತಾವಂತೂ ಥೇಟ್ ಗಂಡು ದೆವ್ವನ ಥರಾನೇ ಕಾಣ್ತೀರಿ.

ರಾಜ : ನೀನೂ ಅಷ್ಟೆ ಕಣೊ ಥೇಟ್ ಹೆಣ್ಣುಭೂತ. ಅವಳು ನರಳೋದು ಕೇಳಿಸೋದೇ ಇಲ್ಲವಲ್ಲ!

ಕಾರಭಾರಿ : ಬಹುಶಃ ಅವರನ್ನೂ ಮಲಗಿಲ್ಲವೇನೋ. ದೀಪ ಹಾಗೇ ಇದೆ.

ರಾಜ : ಹೊತ್ತಾಯ್ತಲ್ಲ. ಎಲ್ಲಾದರೂ ಹಣಿಕಿ ಹಾಕೋದಕ್ಕೆ ಅವಕಾಸ ಇದೆಯಾ ನೋಡು, ಏನು ಮಾಡ್ತಿದಾರೆ ನೋಡೋಣ.

ಕಾರಭಾರಿ : ನಾವು ನೋಡೋದನ್ನ ಯಾರಾದರೂ ನೋಡಿದರೆ?

ರಾಜ : ನನ್ನ ಅಪ್ಪಣೆ ಅಲ್ಲದೆ ಅದ್ಯಾವನಯ್ಯ ನೋಡೋನು?

ಕಾರಭಾರಿ : ಜಾಸ್ತಿ ಗಲಾಟೆ ಮಾಡಬೇಡಿ ಪ್ರಭು.

ರಾಜ : ಯೋ-ನನಗೆಷ್ಟು ಬೇಕೋ ಅಷ್ಟು ಗಲಾಟೆ ಮಾಡ್ತೀನಯ್ಯ, ನೀನ್ಯಾವನು ಕೇಳೋಕೆ?

ಕಾರಭಾರಿ : ಪ್ರಭು, ಪ್ರಭು ಇವೊತ್ತು ಇಡೀ ಊರಿನ ಕಿವಿ ಈ ಕಡೆಗಿದೆ. ನೋಡೋವಾಗ ನಾವೇನಾದರೂ ಸಿಕ್ಕುಬಿದ್ದರೆ
ದಜನ ನಮ್ಮನ್ನು ತಿರಸ್ಕಾರದಿಂದ ನೋಡ್ತಾರೆ.

ರಾಜ : ಹಾಗೆ ಹೇಳು ಮತ್ತೆ. ಜನ ನಮ್ಮನ್ನು ಸತ್ಕಾರದಿಂದ ನೋಡೋಹಾಗೆ ಒಂದು ಉಪಾಯ ಮಾಡು.

ಕಾರಭಾರಿ : ಏನಕ್ಕೆ?

ರಾಜ : ಒಳಗಡೆ ನೋಡೋದಕ್ಕೆ ಬಾಗಿಲಿಗೆ ತೂತು ಇದೆಯಾ ನೋಡು-


ಕಾರಭಾರಿ : ಇಲ್ಲ ಪ್ರಭು.

ರಾಜ : ಕಿಡಕಿಗೆ ಕಿಂಡಿ ಇದೆಯಾ ನೋಡು.

ಕಾರಭಾರಿ : ಇಲ್ಲ ಪ್ರಭು.

ರಾಜ : ಹೋಗಲಿ ಗೋಡೆಗೆ ಕಿವಿ ಹಚ್ಚಿ ಏನಾದರೂ ಮಾತಾಡಿಕೊಳ್ಳುತ್ತಿದ್ದಾರಾ ಕೇಳು.

ಕಾರಭಾರಿ : ಅದೂ ಕೇಳಿಸೋದಿಲ್ಲ ಪ್ರಭು.

ರಾಜ : ಕಿಂಡಿ ಇಲ್ಲ, ತೂತಿಲ್ಲ, ಮಾತು ಕೇಳಿಸೋದಿಲ್ಲ. ಬೋಳೀಮಗನೆ ಇಂಥಲ್ಲಿ ಯಾಕೆ ಪ್ರಸ್ತ ಇಟ್ಟೆ? ಮ್ಯಾಲೆ ಹತ್ತಿ
ಒಂದು ಹೆಂಚು ತಗಿ. ಏನು ಮಾಡುತ್ತಿದ್ದಾರೆ ನೋಡಿ ಹೇಳು. (ಕಾರಭಾರಿ ಮೇಲೆ ಹತ್ತುವನು. ಅಲ್ಲಿಂದಲೇ ಸುಳ್ಳು ಸುಳ್ಳೇ
ಹೇಳತೊಡಗುವನು)

ಕಾರಭಾರಿ : ಪ್ರಭು ಇಬ್ಬರೂ ಹಾಸಿಗೆ ಮೇಲೆ ಕೂತಿದ್ದಾರೆ!

ರಾಜ : ಹೌದು, ಆಮೇಲೆ!

ಕಾರಭಾರಿ : ಆವಳ ಕಿವೀನಲ್ಲಿ ಡಿಂಗ್‌ಡಾಂಗ್ ಏನೋ ಹೇಳ್ತಿದ್ದಾರೆ!

ರಾಜ : ಬೇಗ ಹೇಳು, ಆಮೇಲೆ?

ಕಾರಭಾರಿ : ಅವಳು ನಗ್ತಿದಾಳೆ!

ರಾಜ : ನಗ್ತಿದಾಳಾ? ಸಂತೋಷದಿಂದ ನಗ್ತಿದಾಳ, ದುಃಖದಿಂದ ನಗ್ತಿದಾಳ?

ಕಾರಭಾರಿ : ಸಂತೋಷದಿಂದ ಪ್ರಭು.

ರಾಜ : (ಕಾರಭಾರಿಯ ಕಾಲು ಹಿಡಿದೆಳೆದು ಬೀಳಿಸಿ) ಬೋಳಿಮಗನೆ ಅವಳನ್ನೇ ಕಣೊ ನಾನು ಮೊದಲು ಹೇಳಿದ್ದು. ನೀನು
ಯಾವಳನ್ನೋ ಕರಕೊಂಬಂದು ಗೋಳಾಡಿಸಿ ಬಿಟ್ಟೆ ನನ್ನ. ಸಂತೋಷದಿಂದ ನಗೋಳು ಕಾಪಾಡು ದೇವರೇ ಅಂತ ಪದಾ
ಯಾಕೋ ಹಾಡತಾಳೆ? ಪದಾ ಹಾಡದಿದ್ದರೆ ನಾ ಹ್ಯಾಗೋ ಅವಳನ್ನ ಕಾಪಾಡೋದು? ಬಡ್ಡೀಮಗನೇ ಒಂದು ಕೆಲಸ
ಮಾಡು. ಹೆಂಚು ತೆಗೆದಿದ್ದೀಯಲ್ಲ, ಅಲ್ಲಿ ಮುಕ ಥೂರಿ ಗೂಗೆ ಥರ ಕೂಗು. ಅವಳು ಹೆದರಿದ ಹೊರಗಡೆ ಬರಬಹುದು.
(ಕಾರಭಾರಿ ಹಾಗೇ ಮಾಡುವನು. ಅಷ್ಟರಲ್ಲಿ ಸಾಂಬನ ಸಿಳ್ಳು ಕೇಳಿ ಬರುತ್ತದೆ. ಅದಾಗಿ ಡಿಂಗ್‌ಡಾಂಗ್ ವೀರಾವೇಶದಿಂದ
ಹೇಂಕರಿಸುವುದು. ಇಬ್ಬರೂ ಓಡಿ ದೂರದಲ್ಲಿ ಬಂದು)

ರಾಜ : ಡಿಂಗ್‌ಡಾಂಗ್ ಗೆ ನಮ್ಮ ಗುರುತು ಸಿಕ್ಕಿರಭೌದು ಅಂತಿಯಾ?

ಕಾರಭಾರಿ : ಸಾಧ್ಯವಿಲ್ಲ ಪ್ರಭು. (ಅಲ್ಲೇ ಕಂಬಳಿ ಹೊದ್ದುಕೊಂಡು ಒಳಗೊಳಗೆ ಹೆಂಡ ಕುಡಿಯುತ್ತಿದ್ದ ಸಾಂಬ ಈಗ
ಮುಸುಕು ತೆಗೆಯುವನು)

ಸಾಂಬ : ಕಳ್ಳ ನನಮಕ್ಕಳ್ರಾ ಬರೋ ಇಲ್ಲಿ.

ಕಾರಭಾರಿ : ಇವನ್ಯಾವನೋ ಕುಡುಕ.

ರಾಜ : ನಾವಿಬ್ಬರೂ ದೆವ್ವ ಭೂತ ಅಂತ ಹೇಳೋಣ. ನಂಬಿ ಓಡ್ತಾನೆ. ಆಮೇಲೆ ನಾನೊಂದು ನಿರಾಶೆ ಬಗ್ಗೆ ಪದ
ಹಾಡ್ತೀನಿ. ಇಬ್ಬರೂ ಕೂತಗೊಂಡು ಅಳೋಣ.
ಸಾಂಬ : ಬರೋ ಇಲ್ಲಿ. ಪ್ರೀತಿ ಪ್ರೇಮ  ಮಾಡೋ ಹೊತ್ನಲ್ಲಿ ಕಳ್ಳತನ ಮಾಡ್ತೀರಾ ಹಲ್ಕಾಗಳ್ರ! ದೆವ್ವಿನಂಥ ದೆವ್ವ ಭೂತ
ಪ್ರೀತಿ ಮಾಡ್ತಾ ಇವೆ. ಮನುಷ್ಯರಾಗಿ ನೀವು….

ರಾಜ : ನಾವೂ ದೆವ್ವ ಭೂತ ಕಣ್ಲಾ.

ಸಾಂಬ : ನಿಮ್ಮಲ್ಲಿ ದೆವ್ವ ಯಾರು ? ಭೂತ ಯಾರು?

ರಾಜ : ಇದು ಭೂತ.

ಕಾರಭಾರಿ : ಇದು ದೆವ್ವ.

ಸಾಂಬ : ದೆವ್ವ ಭೂತ ಜೋಡಿ ಸರಿಯಾಗಿದೆ. ಪ್ರೀತಿ ಮಾಡೋದು ಬಿಟ್ಟು ಯಾಕೆ ಅಡ್ಡಾಡತಿದ್ದೀರಿ?

ರಾಜ : ಪ್ರೀತಿ ಮಾಡ್ತಾನೇ ಇದ್ವಿ ಕಣಯ್ಯ. ನಿನ್ನ ದನಿ ಕೇಳಿ ಇಲ್ಲಿಗೆ ಬಂದಿವೆ.

ಸಾಂಬ : ಹಂಗನ್ನು ಮತ್ತೆ.ದ ಈ ಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ. ನನ್ನ ಮಗ ಸೊಸೆ; ಆ ರಾಜ ಅವನ ಕಾರುಭಾರಿ,
ಆ ಡಿಂಗ್‌ಡಾಂಗ್, ಆವನ ಕತ್ತೆ,ದ ಈ ಊರಿನ ಗಂಡಂದಿರು ಅವರ ಹೆಂಡಂದಿರು, ನೀನು ನಿನ್ನ ಭೂತ ಎಲ್ಲರೂ
ಸುಖವಾಗಿದ್ದಾರೆ. ನಾನೊಬ್ಬನೇ ಕಣೊ ಜೋಡಿ ಇಲ್ಲದೆ ದುಃಖದಲ್ಲಿರೋನು (ಹೋ ಎಂದು ಅಳುವನು)

ರಾಜ : (ತಾನೂ ಅಳುತ್ತ) ನಿನ್ನ ದುಃಖ ಕಂಡು ನನಗೂ ಅಳು ಬರುತ್ತೆ ಕಣೊ.

ಸಾಂಬ : ಅಳಬೇಡ ನಾ ಕೇಳಲಾರೆ. ಬೇರೆಯವರು ಅತ್ತರೆ, ಅವರು ವನುಷ್ಯರಿರಲಿ ದೆವ್ವ ಭೂತ ಇರಲಿ ನನಗೆ
ಕೇಳೋದಕ್ಕಾಗೊದಿಲ್ಲ. ಇಕಾ ಹೆಂಡ ಇದೆ ಕುಡಿ. ಆತ್ಮ ತೃಪ್ತಿ ಸಿಗತದೆ. (ಕೊಡುವನು ರಾಜ ಗಟಗಟ ಕುಡಿಯುವನು)
ನೋಡಣ್ಣ ಒಂದೇ ಬುಡ್ಡಿಯಿಂದ ಹೆಂಡ ಕುಡಿದಿವಿ. ನಾವಿಬ್ಬರೂ ಅಣ್ಣ ತಮ್ಮ ಇದ್ದಂಗೆ ಏನಂತಿ?

ರಾಜ : ಓಹೋ.

ಸಾಂಬ : ಇಲ್ಲಿಗೆ ಬರೋಕೆ ಮುಂಚೆ ನೀನೇನಣ್ಣ ಮಾಡ್ತಿದ್ದೆ? ಪ್ರೀತಿ ತಾನೆ?ನನಗೋಸ್ಕರ ನೀನ್ಯಾಕಣ್ಣ ಪ್ರೀತಿ ಮಾಡೋದು
ಬಿಡಬೇಕು? ಮಾಡು, ಪ್ರೀತಿ ಮಾಡು. ನಾ ಕಣ್ಣಾರೆ ನೋಡಿ ಸಂತೋಷ ಪಡ್ತೀನಿ, ಮಾಡು.

ರಾಜ : ಬೇಡ ತಮ್ಮ, ಇವಳು ನಾಚಿಕೊಳ್ಳತಾಳೆ.

ಸಾಂಬ : ನಾಚಿಕೊಂಡರೆ ಬಿಟ್ಟುಬಿಡೋದಾ? ಹೆಂಡಂದಿರಿಗೆ ಹಂಗೆಲ್ಲಾ ಸಲಿಗೆ ಕೊಡಬಾರದಣ್ಣ. ಏಳತಾ ಎರಡು 


ಬೀಳತಾ ಇರಬೇಕು. ಅದ್ಸರಿ ನಿಮ್ಮ ಲೋಕದಲ್ಲಿ ಪದ್ಧತಿ ಹೆಂಗದೆ?

ರಾಜ : ಏನು ಪದ್ಧತಿ?

ಸಾಂಬ : ಹಿಂಗಿಟ್ಟುಕೊ; ನೀನು ದೆವ್ವ, ನನ್ನಣ್ಣ. ನಾ ಮನುಸ-ನಿನ್ನ ತಮ್ಮ. ಏನಣ್ಣಾ, ನಿನ್ನ ಹೆಂಡದೀರನ್ನ ಇಕಾ ಇವಳನ್ನ
ನಾ ಮಡಿಕ್ಕೊಂಡೆ ಅನ್ನು. ಆಗ ನೀ ಏನ್ಮಾಡತೀಯ ಇವಳನ್ನ? ಕುಲ ಬಿಟ್ಟು ಹೊರಗಟ್ಟತೀಯಾ?

ಕಾರಭಾರಿ : (ನಗುತ್ತಾ) ನೀನೂ ಸತ್ತು ನಮ್ಮ ಲೋಕಕ್ಕೆ ಬಂದು ಬಿಡು, ನಮ್ಮ ಜೊತೆಗೇ ಇದ್ದೀಯಂತೆ.

ಸಾಂಬ : ಲೇ ದೆವ್ವಣ್ಣ, ಬಲೇ ಕಿಲಾಡಿ ನಿನ್ನೆಂಡತಿ. ತುಂಬ ಮುದ್ದಾಗವಳೆ. (ಕಾರಭಾರಿ ಇನ್ನೂ ನಗುವನು) ನನಗೂ
ಬೇಕಾದಷ್ಟು ದೆವ್ವ ಭೂತ ಗೆಣೆಕಾರರು ಇದ್ದಾರಣ್ಣ. ಈಗಲೂ ಹಳ್ಳಿಗೋದರಾಯ್ತು. ರಾತ್ರಿ ಒಬ್ಬಳು ಭೂತ ಬುಡ್ಡಿ ತುಂಬಾ
ಹೆಂಡ ಕೊಟ್ಟು ಮಲಗಿ ಹೋಯ್ತಾಳೆ ಗೊತ್ತಾ?
ಕಾರಭಾರಿ : ಸುದೈವಿಯಪ್ಪಾ ನೀನು.

ಸಾಂಬ : ಹೆಂಡ ತರದಿದ್ದರೆ ಅವಳನ್ನು ನಾ ಮುಟ್ಟಾಕಿಲ್ಲ.

ಕಾರಭಾರಿ : ಭಲೆ!

ಸಾಂಬ : ಆ ಭೂತ ಕೊಂಚದವಳು ಅನ್ನಬೇಡವೆ. ರಾಜ ದೆವ್ವ ಇದಾನಲ್ಲ, ಅವನ ಮಗಳು! ರಾಜಕುಮಾರಿ ಭೂತ!

ರಾಜ : ಹೌದಾ!

ಸಾಂಬ : ಮತ್ತೆ ಏನಂದುಕೊಂಡೆ ನನ್ನ? ಸಿಕ್ಕಸಿಕ್ಕಲ್ಲಿ ಕಾಲೆತ್ತೋ ಹಡಬಿಟ್ಟಿ ಭೂತಗಳಿಗೆಲ್ಲ ಬಲಿಯೋನಾ ನಾನು? ಹೆಂಗೆ
ಸಂಪದಿಸಿದೆ ಗೊತ್ತಾ ಅವಳನ್ನ?

ರಾಜ : ಹೆಂಗೆ ಹೇಳಣ್ಣ.

ಸಾಂಬ : ಒಂದಿನ ಅಮಾವಾಸ್ಯೆ ಕತ್ತಲೆ. ಹಿಂಗೇ ಕುಡ್ಡಿದ್ದೆ. ನನ್ನ ಮನಸಾ ಹೆಂಡ್ತಿ ಸತ್ತು ಎರಡು ದಿನ ಆಗಿತ್ತು ಅಷ್ಟೆ.
ಹೆಂಗೌಳೆ ನೋಡಿಕೊಂಡು ಬರಾಣ ಅಂತ ಸುಡುಗಾಡಿಗೆ ಹೋದೆ ನೋಡು: ದೆವ್ವ ಭೂತ ಸಾವಿರ ಸಾವಿರ ನೆರೆದು
ದರ್ಬಾರ ಮಾಡತಾ ಅವೆ! ಸಿಂಹಾಸನದ ಮೇಲೆ ರಾಜ ದೆವ್ವ ಅದೆ. ಅದರ ಪಕ್ಕ ಅವನ ರಾಣಿ ಭೂತ. ಅವಳ ಪಕ್ಕ
ಒಂದು ಚೆಂದುಳ್ಳೆ ಎಳೆ ಭೂತ ಫಳಫಳ ಹೊಳೀತಿದೆ. ಅವಳೇ ಆಮೇಲೆ ನನ್ನ ಕೀಪು. ನನ್ನ ಹೆಂಡತೀಗೆ ಅಲ್ಲಿ ಇನ್ನೂ ಜೀವ
ಬಂದಿರಲಿಲ್ಲ. ಹಾಜರಿ ಪುಸ್ತಕದಲ್ಲಿ ಅವಳ ಹೆಸರಿನ್ನೂ ದಾಖಲಾಗಿರಲಿಲ್ಲ. ನೋಡತೇನೆ ದರ್ಬಾರು ಭರ್ಜರಿ ಸಾಗಿದೆ.
ಯಾವ್ಯಾವುದೊ ದೆವ್ವ ಭೂತ ರಾಜನಿಗೆ ಏನೇನೋ ಕಸರತ್ತು ತೋರಿಸತಾ ಇವೆ.ದ ಎಲ್ಲರೂ ನಗತಾ ಚಪ್ಪಾಳೆ ತಟ್ಟತಾ
ಅವ್ರೆ! ನನಗೂ ಪ್ರೋತ್ಸಾಹ ಬಂತು ನೋಡು. ಹೋದೋನೆ ರಾಜನ ಎದುರಿಗೆ ಹಿಂಗಂದು ಒಂದು ಲಾಗ ಹಾಕಿದೆ
ನೋಡುದ ನನ್ಮಗಂದು, ಕೂತಿರೋದೆವ್ವ ಭೂತ ಎಲ್ಲ ಹೋ ಅಂತ ಸಿಳ್ಳೆ ಹಾಕಿದ್ವು. ರಾಜ ಎಷ್ಟು ಖುಷಿ ಆದನಪ್ಪಾ
ಅಂದರೆ-ತಗೋ ಬಹುಮಾನ ಅಂತ ಆ ಎಳೆ ಭೂತ ರಾಜಕುಮಾರೀನ್ನೇ ಕೊಟ್ಟುಬಿಟ್ಟ! ಆ ರಾಜ ದೆವ್ವ ಇತ್ತಲ್ಲ ಥೇಟ್
ನಿನ್ನಂಗೇ ಇದ್ದ ಕಣಣ್ಣ! ಬೇಕಾದರೆ ಅಲ್ಲಿ ಹಾಕಿದ ಹಾಗೆ ಇಲ್ಲೂ ಒಂದು ಲಾಗಾ ಹಾಕ್ತೇನೆ. ನೀನೂ ಆ ರಾಜ ದೆವ್ವದ ಹಾಗೆ
ಉದಾರಿ ಆಗತೀಯಾ?

ರಾಜ : ಆಗೋಣ ಆಗೋಣ. ಮೊದಲು ಆ ರಾಜಕುಮಾರಿ ಭೂತದ ವಿಷಯಾ ಹೇಳಣ್ಣ. ಈಗಲೂ ನಿನ್ನ ಹತ್ರ ಬರತ್ತಾಳಾ
ಅವಳು?

ಸಾಂಬ : ಓಹೋ.

ರಾಜ : ಮತ್ತೆ ಅವಳು ಯಾಕಿಲ್ಲ ಇಲ್ಲಿ?

ಸಾಂಬ : ಅದೇ ಮತ್ತೆ. ಅವಳಿರೋದು ನನ್ನ ಹಳ್ಳೀಲಿ. ಬರೋವಾಗ ಹೇಳಿದೆ. ಜೊತೇಲಿ ನೀನೂ ಬಾರೆ ನೋಡಿಕೊಂಡು
ಬರೋವಾ ಅಂತ. ಅದಕ್ಕೆ ಅವಳು ಏನಂದಳು ಗೊತ್ತಾ? ಅಯ್ಯೋ ನನ್ನ ರಾಜ ನಾವು ಹಳ್ಳಿ ಭೂಗಳು. ಸಿಟಿ ಭೂತ
ನಮ್ಮನ್ನು ನೋಡಿ ನಗಾಡುತ್ವೆ. ನೀನೇ ಹೋಗಿ ಬಾ ರಾಜ ಅಂದಳು.

ಕಾರಭಾರಿ : ಮತ್ತೆ ನೀನಿಲ್ಲಿ ಒಬ್ಬಂಟಿ ಗೋಳಾಡತಾ ಇದ್ದೀಯಲ್ಲ.

ಸಾಂಬ : ಅದೇ ಮತ್ತೆ. ಅವಳಿಗೆ ಹೇಳಿದೆ; ಲೇ ಚಿನ್ನ ನೀನಿಲ್ಲದೆ ಛಳಿ ಆಗುತ್ತೆ. ಏನೇ ಮಾಡಲಿ ಅಂದೆ. ಅದಕ್ಕೆ ಅವಳೇನು
ಮಾಡಿದಳು ಗೊತ್ತಾ? ಹಿಂಗಂದು ಒಂದು ಮುತ್ತು ಕೊಟ್ಟಳು. ‘ರಾಜಾ ನಿನಗೆ ತುಂಬಾ ಛಳಿ ಆದಾಗ ಯಾರಾದಾದರೂ
ಬಾಯಲ್ಲಿ ಇದನ್ನಿಡು, ಅವರು ಹೆಂಗಸಾಗತಾರೆ’ ಅಂದಳು.

ರಾಜ : (ಉತ್ಸಾಹದಿಂದ ಎದ್ದು ಬಂದು) ಈವಾಗ ಆ ಮುತ್ತು ನಿನ್ನ ಹತ್ತರ ಇದೆಯಾ?


ಸಾಂಬ : ಓಹೋ.

ರಾಜ : ಕೊಡಿಲ್ಲಿ.

ಸಾಂಬ : ನೀ ಬ್ಯಾಡ ಕಣೊ. ನಿನ್ನ ದಾಡಿ ಕಂಡರೆ ನನಗಾಗೋದಿಲ್ಲ. ಇವಳಿಗೆ ಕೊಡೋಣವಾ?

ರಾಜ : ಕೊಡು.

ಕಾರಭಾರಿ : (ಗಾಬರಿಯಾಗಿ) ಪ್ರಭು ನಾ ತಗೋಬೇಕು?

ರಾಜ : ತಗೋ ಬೇಗ.

ಕಾರಭಾರಿ : ಪ್ರಭು ನನಗ್ಯಾಕೋ ಸಂದೇಹ ಬರತಾ ಇದೆ. ಬೇಡ ಪ್ರಭು.

ರಾಜ : ತಗೋ ಅಂದರೆ.

ಸಾಂಬ : ಬಾಯಲ್ಲಿಟ್ಟುಕೊ (ಕೊಡುವನು, ಸಾಂಬನಿಗೆ ಆನಂದವಾಗಿದೆ. ರಾಜನಿಗೆ ಕುತೂಹಲ. ಸಾಂಬ ಕಾರಭಾರಿಯ


ಕೈ ಹಿಡಿಯುತ್ತಾ) ನನ್ನ ಛಳಿ ಹೋಗೋ ತನಕ ಇವಳು ಇಲ್ಲಿರಲಿ, ಆಮೇಲೆ ಕಳಿಸಿಕೊಡತೀನಿ.

ಕಾರಭಾರಿ : (ಮುತ್ತು ಬಾಯಲ್ಲಿಟ್ಟುಕೊಂಡು) ಅಯ್ಯಯ್ಯೋ ಪ್ರಭು. ಇಲ್ಲಿ ನೋಡೀಂದ್ರೆ! ನಾನು ನಿಜವಾಗಿ ಹೆಣ್ಣಾಗಿದ್ದೇನೆ!
ದಮ್ಮಯ್ಯ ತಿರಗ ನನ್ನನ್ನು ಗಂಡಸು ಮಡಿ.

ರಾಜ : ನಿಜವಾಗ್ಲೂ?

ಕಾರಭಾರಿ : ಅಯ್ಯಯ್ಯೋ ಹ್ಯಾಗೆ ಹೇಳಲಿ ಪ್ರಭು; ನಿಜವಾಗಿ ನಾ ಹೆಣ್ಣಾಗಿದ್ದೀನಿ!

ರಾಜ : ಒಳ್ಳೇದಾಯ್ತು ಬಿಡು. ಆ ಗಜನಿಂಬೆ ಕತ್ತೆ ಜೊತೆ ಮಲಗಲಿ. ನೀನು ನನ್ನ ಜೊತೆ ಬಾ. (ಅವಳ ಹತ್ತಿರ
ಹೋಗುವನು. ಸಾಂಬ ಅಡ್ಡಬರುವನು)

ಸಾಂಬ : ಲೇ ನನ್ಮಗನೇ ಅವನನ್ನು ಹೆಂಗಸು ಮಡಿದವನು ನಾನು. ನನಗೇ ಬೇಕಾದವಳು. ಬಂದ ದೊಡ್ಡ ಮನುಷ್ಯ.

ರಾಜ : ಬಡ್ಡೀ ಮಗನೇ, ಏನಂದುಕೊಂಡೆ ನನ್ನ? ನಾನು ಈ ದೇಶದ ರಜ.

ಸಾಂಬ : ಕಳ್ಳ ನನ್ಮಗನೆ. ಯಾವುದೋ ದೆವ್ವ ನೀನು. ದೇಶದ ರಾಜ ಅಂತ ಸುಳ್ಳು ಹೆಳತೀಯೇನೋ? ನಿನ್ನ ಮುಸಡಿ
ನೋಡಿಕೊಳ್ಳೋ ಮಗನೆ. ಅವಳನ್ನ ಮುಟ್ಟಿದರೆ ಒದೀತೀನಿ ನೋಡು. ಹೋಗತೀಯೋ? ಇಲ್ಲಾ….
(ಹೋಗಿ ಒಂದೆರಡು ಏಟು ಹಾಕುವನು. ರಾಜ ಅಷ್ಟು ದೂರ ಹೋಗಿ ಬೀಳುವನು. ಮತ್ತೆ ಸಾಂಬ ಹೊಡೆಯ ಹೋದಾಗ
ರಾಜ ಓಡುವನು. ಕಾರಭಾರಿ ಪ್ರಭು ಎಂದು ಓಡಬೇಕೆಂದಾಗ ಇವನು ಅವಳನ್ನು ಹಿಡಿದು ಎಳೆಯುವನು.)
ಸುಮ್ಮನೆ ಬಿದ್ದುಕೊಂಡರೆ ಸರಿ. ಗಲಾಟೆ ಮಾಡಿದರೆ ಬೆಳತನಕ ಬಿಡೋದಿಲ್ಲ ಹುಷಾರ‍.
ಸಾಂಬಶಿವ ಪ್ರಹಸನ : ದೃಶ್ಯ-೧೧
(ಅರಮನೆ, ರಾಜ ಕೂತಿದ್ದಾನೆ. ಹೆಣ್ಣು ವೇಷದ ಕಾರಭಾರಿ ತಲೆ ತುಂಬ ಸೆರಗು ಹೊದ್ದುಕೊಂಡು ಮುಖ ಮುಚ್ಚಿಕೊಂಡು
ಬರುವನು)

ಕಾರಭಾರಿ : ಪ್ರಭು.

ರಾಜ : ಯಾರು ನೀನು?

ಕಾರಭಾರಿ : ನಾನು ತಮ್ಮ ಕಾರಭಾರಿ ಪ್ರಭು.

ರಾಜ : ಅರೆ ಹೌದಲ್ಲವಾ! ಬಾರಯ್ಯಾ ಇನ್ನೂ ಸೀರೆ ಕಳಚಿಲ್ಲವಾ?

ಕಾರಭಾರಿ : ಸೀರೆ ಕಳಚಿದರೆ ಏನು ಬಂತು ಪ್ರಭು? ಒಳಗೆ ನಿಜವಾಗಿ ಹೆಂಗ್ಸಾಗಿದ್ದೀನಿ.

ರಾಜ : ನಿಜವಾಗಲೂ?

ಕಾರಭಾರಿ : ನಾನೇಕೆ ಸುಳ್ಳು ಹೇಳಲಿ ಪ್ರಭು. ನಿಜವಾಗಿ ನಾನೀಗ ಹೆಂಗಸು.

ರಾಜ : ಹೌದಾ? ತುಂಬಾ ಚೆನ್ನಾಗಿ ಕಾಣಸ್ತೀಯೆ ನೀನು.

ಕಾರಭಾರಿ : ತಮಗೋ ಚೇಷ್ಟೆ. ಈ ಆಕಾರದಲ್ಲಿ ಜನಕ್ಕೆ ಮುಖ ಹೇಗೆ ತೋರಿಸಲಿ ಪ್ರಭು? ನನ್ನನ್ನು ಹ್ಯಾಗಾದರೂ ಮಾಡಿ
ತಿರಗ ಗಂಡಸು ಮಾಡಿಸಿ.

ರಾಜ : ಅವನಿಗ್ಯಾಕೆ ಹೇಳಲಿಲ್ಲ ನೀನು?

ಕಾರಭಾರಿ : ಸೆರಗೊಡ್ಡಿ ಬೇಡಿಕೊಂಡೆ, ಗಂಡಸನ್ನಾಗಿ ಮಾಡಯ್ಯ ಅಂತ. ಹೀಗೇ ಚೆಂದ ಕಾಣತಿ ಸುಮ್ಕಿರು ಅಂತ
ಗದರಿಕೊಂಡ ಪ್ರಭು.

ರಾಜ : ಆತ  ಹೇಳಿದ್ದೂ ನಿಜ ಕಣೊ – ಅಲ್ಲ ಕಣೆ.

ಕಾರಭಾರಿ : ಅವನಿಗೆ ಛಳಿ ಆದಾಗ ಬೇಕಾದರೆ ಅನುಕೂಲ ಮಾಡಿಕೊಡೋಣ. ಸದಾ ಕಾಲ ಹೆಂಗಸಾಗಿರೋದು ಹ್ಯಾಗೆ?
ನೀವು ಹೇಳಿದರೆ ನಿಮ್ಮ ಮಾತನ್ನು ತೆಗೆದುಹಾಕಲಾರ. ನೀವಾದರೂ ಕರೆಸಿ ಹೇಳಿ ಪ್ರಭು.

ರಾಜ : ಕಷ್ಟ ಕಣಯ್ಯ. ನನ್ಮಗ ಅವನು ಯಾರು, ಎಲ್ಲಿರತ್ತಾನೆ ಅಂತ ಗೊತ್ತಿಲ್ಲ. ಅವನ ಹೆಸರು ಕುಲ ಗೋತ್ರ ಗೊತ್ತಿಲ್ಲ.
ಯಾರನ್ನ ಅಂತ ಕರೆಸಿ ಹೇಳಲಿ.

ಕಾರಭಾರಿ : ಗಣೇಶನ ದೇವಸ್ಥಾನದಲ್ಲಿ ಇರತ್ತಾನಂತೆ. ನನಗೆ ಅಲ್ಲಿಗೇ ಬರಹೇಳಿದಾನೆ ಇವೊತ್ತು.

ರಾಜ : (ತುಸು ಹೊತ್ತು ಯೋಚಿಸಿ ಕಣ್ಣರಳಿ ಒಂದು ಅದ್ಭುತ ಉಪಾಯ ಹೊಳೆಯುವುದನ್ನು ಅಭಿನಯಿಸಿ.)
ಅಯ್ಯಾ ಕಾರಭಾರಿ ಡಿಂಗ್‌ಡಾಂಗು ತನ್ನ ಹೆಂಡತಿ ಹತ್ರ ಹೆಂಗೆ ಹೋಗುತ್ತಂತೆ?

ಕಾರಭಾರಿ : ಹೆಂಗಂದ್ರೆ?
ರಾಜ : ಅಯ್ಯಾ ಇದು ರಾತ್ರಿ ಅಂತ ಇಟ್ಕೊಳಯ್ಯ. ರಾತ್ರಿ ಉಂಡು ಮಲಗಬೇಕಲ್ಲವ? ಈಗ ಉಂಡಾಯಿತು. ಇನ್ನು
ಮಲಗಬೇಕಲ್ಲವಾ? ನೀನು ಗಜನಿಂಬೆ. ಅಲ್ಲಿ ಹಾಸಿಗೆ ಮೇಲೆ ಮಲಗಿದ್ದೀಯಾ. ಡಿಂಗ್‌ಡಾಂಗ್ ಪಕ್ಕದ ಮನೆ
ಕೊಟ್ಟಿಗೇಲಿದೆ. ಗಂಡ ಹೆಂಡತಿ ಅಂದಮೇಲೆ ಕೂಡಿ ಮಲಗಬೇಕೋ ಬೇಡವೊ?

ಕಾರಭಾರಿ : ಹೌದು.

ರಾಜ : ಅದೇ ಹ್ಯಾಗೆ?

ಕಾರಭಾರಿ : ನಾನು ನೋಡಿಲ್ಲ ಪ್ರಭು. ಸಾಂಬ ನೋಡಿದ್ದಾನಂತೆ.

ರಾಜ : ಹೌದು ಹ್ಯಾಗೆ ಹೋಗತ್ತಂತೆ?

ಕಾರಭಾರಿ : ರಾತ್ರಿ ಊಟಕ್ಕೆ ಮುಂಚೆ ಸ್ನಾನ ಮಾಡುತ್ತಂತೆ. ಊಟ ಮಾಡಿ ಎಲೆ ಅಡಿಕೆ ಹಾಕ್ಕೊಂಡು ಮೈಗೆಲ್ಲಾ ಸೆಂಟ್
ಹಚ್ಚಿಕೊಳ್ಳತ್ತೆ. ಮುಂಗಾಲಿಗೊಂದು ಮಲ್ಲಿಗೆ ಡಂಡೆ ಕಟ್ಟಿಕೊಳ್ಳುತ್ತೆ. ಇಷ್ಟಾದ ಮೇಲೆ ಒಂದ್ಸಲ ಅಲ್ಲೇ ಹ್ಯಾಂಕರಿಸಿ
ಹೊರಗಡೆ ಬಂದು ಗಜನಿಂಬೆ ರೂಮಿನ ಬಾಗಿಲು ತೆರೆದು ಹಾ ಎನ್ನರಸ, ಕೊಡು ನನಗೆ ಹರುಷ ಅಂತ ಹೇಳತಾಳಂತೆ.
ಇದು ಕುಣಿಯುತ್ತಾ ಹೋಗುತ್ತಂತೆ.

ರಾಜ : ಭಲೆ! ಕತ್ತೆ ಆದರೂ ರಸಿಕ ಬಡ್ಡೀಮಗ ಕಣಯ್ಯ ಆ ಡಿಂಗ್‌ಡಾಂಗು; ಮತ್ತೆ ಆ ಶಿವ ಏನ್ಮಾಡ್ತಾನಂತೆ?

ಕಾರಭಾರಿ : ಪ್ರೇಮದ ಪದ ಹಾಡ್ತಾನಂತೆ.

ರಾಜ : ಅಯ್ಯಾ ಕಾರಭಾರಿ ಅವನ್ಯಾವನ್ನೋ ಭಾರಿ ಮಾಂತ್ರಿಕ ಕಣಯ್ಯ. ಗಂಡಸನ್ನ ಹೆಂಗಸನ್ನಾಗಿ ಮಾಡ್ತಾನೆ! ದೆವ್ವ
ಭೂತ ಜೊತೆ ಸಲೀಸಾಗಿರತ್ತಾನೆ….

ಕಾರಭಾರಿ : ನಿಜ ಪ್ರಭು. ತಾವು ಹೇಳಿದ ಹಾಗೆ ಆತ ದೊಡ್ಡ ಮಾಂತ್ರಿಕನೆ.

ರಾಜ : ಆಯ್ಯಾ ಕಾರಭಾರಿ ನಿನ್ನನ್ನು ಹೆಂಗಸನ್ನಾಗಿ ಮಾಡಿದವನು ನನ್ನನ್ನು ಕತ್ತೆಯನ್ನಾಗಿ ಮಾಡಭೌದಲ್ಲವಾ?

ಕಾರಭಾರಿ : ಮಾಡಭೌದೋ ಏನೋ. ಆದರೆ ತಾವ್ಯಾಕೆ ಕತ್ತೆ ಆಗಬೇಕೋ ತಿಳೀತಿಲ್ಲ.

ರಾಜ : ಅದಕ್ಕೇ ನಿನಗೆ ದಡ್ಡ ಅನ್ನೋದು. ಮೊದಲು ಹೋಗಿ ಅವನ್ನ ಕರಕೊಂಬಾ.

ಕಾರಭಾರಿ : ಪ್ರಭು?

ರಾಜ : ಆಮೇಲೆ ಹೆಳತೀನಿ. ಮೊದಲು ಕರೆತಾ ಅವನ್ನ.


ಸಾಂಬಶಿವ ಪ್ರಹಸನ : ದೃಶ್ಯ-೧೨
(ಶಿವ ಮತ್ತು ಗಜನಿಂಬೆ)

ಶಿವ : ನನ್ನ ಮಾತು ಕೇಳು.

ಗಜನಿಂಬೆ : ಕೇಳಲ್ಲ.

ಶಿವ : ಏನಂತ ತಿಳದೀ ನನ್ನ? ನಾನು ನಿನ್ನ ಗಂಡ.

ಗಜನಿಂಬೆ : ಕಾಯ್ದೆಶೀರ‍ನನ್ನ ಗಂಡ ಕತ್ತೆ, ನೀನಲ್ಲ.

ಶಿವ : ಹಾಗಿದ್ದರೆ ನಾನು ಯಾರು?

ಗಜನಿಂಬೆ : ಶಿವ.

ಶಿವ : ಹಟಹಿಡೀಬೇಡ. ನನ್ನ ದಕಡೆ ಒಂದು ಸಲ ನೋಡು.

ಗಜನಿಂಬೆ : ಎರಡು ಸಲಾನೂ ನೋಡೋದಿಲ್ಲ.

ಶಿವ : ದಯಮಾಡಿ ನನ್ನ ಮಾತು ಕೇಳು.

ಗಜನಿಂಬೆ : ದಯಮಾಡಿ ಕೇಳೋದಿಲ್ಲ.

ಶಿವ : ಸರಿ, ಇಲ್ಲೇ ಬಿದ್ಕೋ.

ಗಜನಿಂಬೆ : ಬಿದ್ದೊಳ್ಳೋದಿಲ್ಲ.

ಶಿವ : ಹಾಗಿದ್ದರೆ ಹೋಗು.

ಗಜನಿಂಬೆ : ಹೋಗನ್ನೋದಕ್ಕೆ ನೀ ಯಾರು? ನನ್ನಿಷ್ಟ ಬಂದಾಗ ಹೋಗ್ತೀನಿ.

ಶಿವ : ಕೊನೇ ಪಕ್ಷ ನನ್ನ ಮಾತು ಕೇಳು.

ಗಜನಿಂಬೆ : ಕೇಳು ಅನ್ನೋಕೆ ನೀ ಯಾರು? ನನ್ನಿಷ್ಟ ಬಂದರೆ ಕೇಳ್ತೀನಿ.

ಶಿವ : ಹಾಗಿದ್ದರೆ ನಾ ಹೇಳೋದಿಲ್ಲ.

ಗಜನಿಂಬೆ : ಯಾಕೆ ಹೇಳೋದಿಲ್ಲ? ದಯಮಾಡಿ ಹೇಳತಾ ಇರು.

ಶಿವ : ಇಷ್ಟ ಬರೋದವರೆದುರಿಗೆ ಯಾಕೆ ಹೇಳಬೇಕು.

ಗಜನಿಂಬೆ : ಇಷ್ಟ ಬಂದೇ ಬರತ್ತೆ, ನೀ ಹೇಳಿದರೆ.

ಶಿವ : ಮೊದಲು ಇಷ್ಟ ಬಂದರೇ ಹೇಳೋದು.


ಗಜನಿಂಬೆ : ಬಂದಿದೆ, ಅದೇನು ಹೇಳಿ ಅಂದ್ರೆ.

ಶಿವ : ಒಳಕ್ಕೆ ಹೋಗಿ ಭದ್ರಾವಾಗಿ ಬಾಗಿಲಿಕ್ಕಿಕೊಂಡು ಕೂತ್ಕೊ.

ಗಜನಿಂಬೆ : ಹೊರಗಡೆ ಇಲ್ಲೇ ಹೀಗೇ ಕೂತರೆ ಏನಾಗತ್ತೆ?


(ಅಷ್ಟರಲ್ಲಿ ದೂರದಿಂದ ಯಾರೋ ಓಡಿ ಬಂದು ಅಡಗುತ್ತಾರೆ. ಶಿವ ಅವನನ್ನು ಸರಿಯಾಗಿ ಮುಚ್ಚಿ ಬರುವನು.)

ಗಜನಿಂಬೆ : ನನಗೆ ನಿಜವಾಗಲೂ ಹೆದರಿಕೆ ಬರತ್ತೇರಿ.

ಶಿವ : ಮತ್ತೆ ಯಾಕೆ ತೌರಿಗೆ ಹೋಗಲಿಲ್ಲ?

ಗಜನಿಂಬೆ : ಹೋದರೆ ಕತ್ತೆ ಹೆಂಡತಿ ಬಂದಳು ಅಂತ ಅಕ್ಕಪಕ್ಕ ಮಕ್ಕಳು ನನ್ನ ಕಂಡು ಕುಣಿದಾಡುತ್ವೇರಿ.

ಶಿವ : ಈಗ ಸದ್ದಿಲ್ಲದೆ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಿರು. ನನ್ನ ಧ್ವನಿ ಕೇಳೋತನಕ ಬಾಗಿಲು ತೆಗೀಬೇಡ.
(ಗಜನಿಂಬೆ ಹೋಗುವಳು. ಪೋಲೀಸು ಬಂದು “ಮಾಜಿ ಮಂತ್ರಿ ಬಂದಿದ್ದನಾ ಈ ಕಡೆಗೆ?” ಎಂದು ಕೆಳುವನು. ಶಿವ
ಇಲ್ಲವೆಂದು ಹೇಳುತ್ತಲೂ ಪೋಲೀಸರು ಹೋಗುತ್ತಾರೆ. ಪೋಲೀಸರು ದೂರ ಹೋದರೆಂದು ಖಾತ್ರಿಯಾದಾಗ ಆ ವ್ಯಕ್ತಿ
ಎದ್ದು ಹೊರಗೆ ಬರುವನು)

ಮಂತ್ರಿ : ತುಂಬಾ ಉಪಕಾರವಾಯ್ತಪ್ಪ.

ಶಿವ : ನೀವು ಇಲ್ಲಿರೋದು ಅಪಾಯ ಸಾರ್.

ಮಂತ್ರಿ : ನನಗೂ ಗೊತ್ತು.

ಶಿವ : ಮಾಜಿ ಮಂತ್ರಿ ನೀವೇನಾ?

ಮಂತ್ರಿ : ಗೊತ್ತಾದರೆ ರಕ್ಷಣೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತೀಯಾ?

ಶಿವ : ಖಂಡಿತ ಇಲ್ಲ.

ಮಂತ್ರಿ : ಹೌದು ನಾನೇ ಮಾಜಿ ಮಂತ್ರಿ.

ಶಿವ : ನಿಮ್ಮನ್ನು ನೀವೇ ಈ ರೀತಿ ಅಪಾಯಕ್ಕೆ ಒಡ್ಡಿಕೊಳ್ಳೋದು ಒಳ್ಳೆಯದಲ್ಲ, ಇಲ್ಲಿಗ್ಯಾಕೆ ಬಂದಿರಿ ಸಾರ?

ಮಂತ್ರಿ : ನಿನ್ನನ್ನೇ ನೋಡೋಣಾಂತ ಬಂದ್ನಪ್ಪ.

ಶಿವ : ಹೇಳಿ ಸಾರ‍, ನಾನೇನು ಮಾಡಬಲ್ಲೆ?

ಮಂತ್ರಿ : ನಮ್ಮ ಕ್ರಾಂತಿಯೆಲ್ಲ ಹುಸಿಹೋಯ್ತು. ಈ ರಾಕ್ಷಸನ ಕೈಯಿಂದ ನಮಗಂತೂ ಮುಕ್ತಿ ಇಲ್ಲ. ನಿನ್ನ ಕತ್ತೆಗೆ ಬೈತೀನಿ
ಅಂದ್ಕೋಬೇಡ. ನಿನ್ನ ಕತ್ತೆ ಮಂತ್ರಿ ಆಗಬೇಕಾದ್ದೆ. ಯಾಕಂದರೆ ಇಂಥ ರಾಜ ಇರೋವಲ್ಲಿ ಇನ್ನೆಂಥ ಮಂತ್ರಿ ಸಾಧ್ಯ?
ಆದರೆ ಪಾಪ ಆ ಮೂಕಪ್ರಾಣಿ ಹೆಸರಲ್ಲಿ ಎಷ್ಟೊಂದು ತೆರಿಗೆ ಹಾಕಿದ್ದಾನೆ ಆ ರಾಕ್ಷಸ? ಜನ ಹ್ಯಾಗೆ ಬದುಕೋದು?

ಶಿವ : ಯಥಾ ಪ್ರಜಾ ತಥಾ ರಾಜ ಅಲ್ವೇ ಸಾರ?

ಮಂತ್ರಿ : ಅದೂ ನಿಜವೇ. ಹೋಗಲಿ ಬಿಡು, ಆಗೋ ಮಾತಲ್ಲ, ಹೋಗೋ ಮಾತಲ್ಲ. ಅದೆಲ್ಲಾ ಯಾಕೆ? ಕ್ರಾಂತಿಕಾರರು
ಮೊದಲಿನಷ್ಟಿಲ್ಲ. ಕೆಲವರು ಜೇಲಲ್ಲಿ, ಕೆಲವರು ಸ್ವರ್ಗದಲ್ಲಿ ಇದ್ದಾರೆ. ಒಬ್ಬಿಬ್ಬರು ಉಳಿದಿದ್ದೀವಿ. ಇಂದಲ್ಲ ನಾಳೆ ನಮ್ಮನ್ನೂ
ಮುಗಿಸ್ತಾನೆ. ಮುಗಿಸೋದೇ ಮೇಲು. ಜೊತೆಗಾರರೆಲ್ಲ ಹೋದಮೇಲೆ ನಾನೊಬ್ಬನೇ ಜೀವಂತವಾಗಿರೋಕೆ
ನಾಚಿಕೆಯಾಗುತ್ತೆ. ನಿನ್ನ ಹತ್ತಿರ ಒಂದು ಸಣ್ಣ ಸಹಾಯ ಕೇಳೋದಕ್ಕೆ ಬಂದಿದ್ದನಪ್ಪ.

ಶಿವ : ಹೇಳಿ ಸಾರ‍ಏನ್ ಮಾಡಲಿ?

ಮಂತ್ರಿ : ನನ್ನ ಧೋಬಿ ಸ್ನೇಹಿತ ಒಬ್ಬ ಇದಾನೆ. ಮಕ್ಕಳೊಂದಿಗ, ಇಲ್ಲೀತನಕ ಕ್ರಂತಿ ಮಾಡಿ ಮಾಡಿ ಎಲ್ಲಾ ಕಳಕೋಂಡು
ಪಾಪರ ಆಗಿದಾನೆ. ಅವನಿಗೇನಾದರೂ ಸಹಾಯ ಮಾಡು, ನಿನ್ನ ಕೈಲಿ ಸಾಧ್ಯವಿದ್ದರೆ.

ಶಿವ : ಏನ್ ಮಾಡಲಿ ಹೇಳಿ ಸಾರ?

ಮಂತ್ರಿ : ಅವನ ಹತ್ತಿರ ಒಂದು ಹೆಣ್ಣು ಕತ್ತೆ ಇದೆ. ರಾಧಾ ಅಂತ ಅದರ ಹೆಸರು. ಚೆನ್ನಾಗಿ ಮೈ ತುಂಬಿಕೊಂಡಿದೆ. ನಿನ್ನ
ಡಿಂಗ್‌ಡಾಂಗ್ ಗೆ ದಿನಾಲು ಹೆಣ್ಣು ಕತ್ತೆ ಬೇಕಂತಲ್ಲ. ಅವನ ಕತ್ತೆ ಉಪಯೋಗಿಸಿ ಒಳ್ಳೆ ರೇಟು ಕೊಡು. ಬಡವಾ
ಬದುಕಿಕೊಳ್ತಾನೆ.

ಶಿವ : ಈ ಕಡೆ ಬನ್ನಿ ಸಾರ ಯಾರೋ ಬಂದರು.


(ಮಂತ್ರಿ ಅಡಗುವನು. ಸಾಂಬ ಓಡಿ ಬರುವನು)

ಸಾಂಬ : ಎಷ್ಟು ಹುಡುಕೋದೋ ಮಗನೆ ನಿನ್ನ?

ಶಿವ : ಯಾಕಪ್ಪ?

ಸಾಂಬ : ಗುಟ್ಟಾಗಿ ಮಾತಾಡಬೇಕು. ಇಲ್ಲಿ ಯಾರಿಲ್ಲ ತಾನೆ?

ಶಿವ : ಇಲ್ಲ ಹೇಳು.

ಸಾಂಬ : ರಾಜ ಇವೊತ್ತೇನೊ ಉಪಾಯ ಮಾಡ್ತಿದಾನೆ ಕಣೊ.

ಶಿವ : (ಅಡಿಗಿದ್ದ ಮಂತ್ರಿಯನ್ನು ಕೈಯಿಂದ ಸೂಚಿಸಿ ಕಿವಿಯಲ್ಲಿ ಹೇಳಲಿಕ್ಕೆ ಸೂಚಿಸುವನು)

ಸಾಂಬ : ಏನಪ್ಪ ಅಂದರೆ (ಕಿವಿಯಲ್ಲಿ ಹೆಳುವನು)

ಶಿವ : ಅದ್ಯಾಕಂತೆ?
(ಸಾಂಬ ಕಿವಿಯಲ್ಲಿ ಹೇಳುವನು)

ಶಿವ : ಯಾವಾಗಂತೆಯೋ
(ಸಾಂಬ ಕಿವಿಯಲ್ಲಿ ಹೇಳುವನು)

ಶಿವ : ಎಷ್ಟೊತ್ತಿಗಂತೆ?

ಶಿವ : ಓಹೋ, ಇಲ್ಲಿಗೆ ಬಂತೋ? ಸ್ವಾಮಿ ಹೊರಗೆ ಬನ್ನಿ. ಇವೊತ್ತು ರಾತ್ರಿ ರಾಧೆಯನ್ನು ಕರಕೊಂಬರಲಿಕ್ಕೆ ನಿಮ್ಮ
ಸ್ನೇಹಿತರಿಗೆ ಹೇಳಿ. ಸಾಧ್ಯವಾದರೆ, ಅಳಿದುಳಿದ ಕ್ರಾಂತಿಕಾರಿಗಳೂ ಜೊತೆಗಿರಲ್ಲಿ.

ಮಂತ್ರಿ : ಕ್ರಾಂತಿಕಾರಿಗಳು ಯಾರು ಉಳಿದಿಲ್ಲಪ್ಪ. ಉಳಿದ ಒಬ್ಬಿಬ್ಬರು ನನ್ನ ಮಾತು ಅರ್ಥವಾಗೋದಿಲ್ಲಾಂತ ನನ್ನ
ಹತ್ತಿರ ಬರೋದೂ ಇಲ್ಲ.

ಸಾಂಬ : ಬೀರಯ್ಯ ಅಂತ ನಿಮ್ಮ ಶಿಷ್ಯ ಇದ್ದಾನಲ್ಲಾ.


ಮಂತ್ರಿ : ಅವನು ಸೋಮಾರಿ.

ಸಾಂಬ : ಅವನಿಗೆ ಹೇಳಿ: ಬೀರಯ್ಯ ಕೆರೆಕಟ್ಟೆ ಒಡೆಯೋದಕ್ಕೆ ಗುದ್ದಲಿ ಪಿಕಾಸಿ ತಗೊಂಬಾ ಅನ್ನಿ. ಬರತಾನೆ.

ಮಂತ್ರಿ : ಕೆರೆ ಕಟ್ಟೆ ಅಂದರೆ….?

ಸಾಂಬ : ನೀವು ಅಷ್ಟು ಹೇಳಿ ಸ್ವಾಮಿ….

ಮಂತ್ರಿ : ಸರಿಯಪ್ಪ.
ಸಾಂಬಶಿವ ಪ್ರಹಸನ : ಡಿ ಆರ್ ಎನ್ ಪತ್ರ
ನಿಮ್ಮ ಸಾಹಿತ್ಯದ ಸಮಸ್ತ ಸ್ವರೂಪ ತಿಳಿಯಲು ಹೋಸ ದೃಷ್ಟಿಕೋನಗಳೇ ಬೇಕು ಎಂದು ಅನ್ನಿಸತೊಡಗಿದೆ. ಇಡೀ
ಶತಮಾನದಲ್ಲಿ ಕನ್ನಡ ಪ್ರತಿಭೆ ಏಳೆಂಟು ಜನ ಮಹತ್ವದ ಪ್ರತಿಭಾವಂತರನ್ನು ಸೃಷ್ಟಿಸಿದೆ. ಅದರಲ್ಲಿ ಕಂಬಾರರದು ವಿಶಿಷ್ಟ
ಧ್ವ ನಿ. ಹೊಸ ರೀತಿಯಲ್ಲಿ ಭಾರತವನ್ನೇ ಕಾಣುವ ಧ್ವನಿ.

ಆಧುನಿಕ ಜಗತ್ತು ಆಧುನೀಕರಣದ ಒತ್ತಡಗಳನ್ನು ಹಾಕಿದ ರೀತಿಯನ್ನು ದಾಟುವ ಕ್ರಮ ನಿಮ್ಮ ಸಾಹಿತ್ಯದಲ್ಲಿ ಬೆರಗು
ಹುಟ್ಟಿಸುತ್ತದೆ. ಇಲ್ಲಿ ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ತುಂಬ ಪ್ರತಿಭಾವಂತ ಸ್ನೇಹಿತರಿದ್ದಾರೆ.  ಅವರಲ್ಲಿ
ಕೂಡಾ ಈ ರೀತಿಯ ಅಭಿವ್ಯಕ್ತಿ ಜೀವನ ತುಂಬ ಕಡಿಮೆ ಎಂದರು….

ಸತ್ಯವನ್ನು ಸಾಂಬಶಿವರ ಹಾಗೆ ಕುಣಿಸಬೇಕು, ಮಣಿಸಬೇಕು. ಹುಳಾ ಪಾರ್ಟಿಗಳು ಸತ್ಯದ ಕೈಯಲ್ಲಿ ಸಿಕ್ಕಿಬಿದ್ದರೆ
ನಾಶವಾಗಿ ಹೋಗುತ್ತಾರೆ. ಸತ್ಯ ಹರಿಶ್ಚಂದ್ರನ ಹಾಗೆ ಹೀನಾಯ ಸ್ಥಿತಿಗೆ ಒಂದು ಮುಟ್ಟುತ್ತಾರೆ. ಆದರೆ, ಸತ್ಯ
ಹರಿಶ್ಚಂದ್ರನಿಗೆ ಸಾಧ್ಯವಾಗದ ಕ್ರಿಯಾಶೀಲತೆ ಸಾಂಬ-ಶಿವರಿಗೆ ಇದೆ. ಸತ್ಯ ಅವರ ಕಾಲಕೆಳಗೆ ಬಂದು ತೆವಳುತ್ತದೆ.
ನಮ್ಮ ಬುದ್ಧಿಯನ್ನು ಮಂಪರಿನಿಂದ ಬಿಡುಗಡೆ ಮಾಡುವ ಶಕ್ತಿ ‘ಜೈಸಿದನಾಯಕ’ಕ್ಕೆ ಇಲ್ಲ. ಆದರೆ, ‘ಸಾಂಬ-ಶಿವ….’ಕ್ಕೆ
ಇದೆ. ಕ್ರಾಂತಿಗಳನ್ನು ಜೈಸಿದನಾಯಕನ ಹಾಗೆ ಕಂಡರೆ ಬೆದರುತ್ತೇವೆ, ಭೀತರಾಗುತ್ತೇವೆ. ಆಧುನಿಕ ಜಗತ್ತು
ರಾಜಕಾರಣವನ್ನು ನೋಡುವ ಕ್ರಮವೇ ಭೀಕರ. ಸಾಮಾಜಿಕ ಪ್ರತಿಮೆಗಳು ಕೂಡಾ ಹಾಗೆಯೇ, ಅವು ಕೊಳೆಯುವುದನ್ನೆ
ತೋರಿಸುತ್ತವೆ. ಕಾಫ್ಕನ ಹಾಗೆ, ಆರ್ವೆಲ್ಲನ ಹಾಗೆ ಭಯವನ್ನು ಸೃಷ್ಟಿಸುವ ಮೂಲಕ ಆಧುನಿಕ ರಾಜಕಾರಣ
ಮನುಷ್ಯನನ್ನು ಅಧೀನನ್ನಾಗಿಸಿಕೊಳ್ಳುತ್ತದೆ. ‘ಹರಕೆಯ ಕುರಿ’ ಕೂಡಾ ಹಾಗೆಯೇ. Fear is the source of
authoritarian power. ಆದರೆ, ಸಾಂಬ-ಶಿವರನ್ನು ಯಾರಾದರೂ ಹೆದರಿಸಲು ಸಾಧ್ಯವೆ? ಹೀರೋಗಳನ್ನು ನೋಡಿದರೆ
ಅವರ ಸೋಲೇ ಕಾಡುತ್ತದೆ. ಸಾಂಬಶಿವರಂಥ ಕಿಲಾಡಿಗಳನ್ನು ನೋಡಿದರೆ ಅವರ ಬಡತನವೇ ಅವರ ವಿಜಯವನ್ನು
ಉಜ್ವಲೀಕರಿಸುತ್ತದೆ. ನಿರ್ವಾಣಕ್ಕೆ ಕೌಪೀನದ ಹಂಗಿಲಲ್. ನಿಜವಾಗಿಯೂ ಅವರು ನಿರ್ವಾಣದ ಸ್ಥಿತಿಯಲ್ಲಿರುವ ಮಂದಿ.
ಅವರನ್ನು ಮೆಟ್ಟುವುದಕ್ಕೆ ಸಾಧ್ಯವೇ ಇಲ್ಲ.

ಸಾಂಬಶಿವರದು ನಿರ್ವಾಣದ ರಾಜಕೀಯ, Politics of liberation!  ಹೀಗಾಗಿ ಈ ನಾಟಕ ನನಗೆ ತುಂಬ


ಪ್ರಿಯವಾದದ್ದು.

ಡಿ.ಆರ್. ನಾಗರಾಜ
ಸಿಮ್ಲಾದಿಂದ ಬರೆದ ೨೩.೪.೯೩ರ ಪತ್ರದಿಂದ

You might also like